ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ 2023 ರ ಫೈನಲ್ ಪಂದ್ಯವನ್ನು ಮುಂಬೈನಲ್ಲಿ ಆಯೋಜಿಸದೆ ಗುಜರಾತ್ನ ಅಹಮದಾಬಾದ್ನಲ್ಲಿರುವ ವಿಶ್ವ ವಿಖ್ಯಾತ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಡಿಸಿರುವ ಬಗ್ಗೆ ಕ್ರಿಕೆಟ್ ಮುಂಬೈ ಅಭಿಮಾನಿಗಳಿಗೆ ಬೇಸರವಿತ್ತು. ಕ್ರಿಕೆಟ್ ಕಾಶಿಯಾಗಿರುವ ವಾಂಖೆಡೆ ಸ್ಟೇಡಿಯಮ್ನಲ್ಲೇ ಪಂದ್ಯ ನಡೆಸಬೇಕು ಎಂಬುದು ಬಹುತೇಕ ಭಾರತೀಯರ ಒತ್ತಾಸೆಯಾಗಿತ್ತು. ಆದರೆ, ದೊಡ್ಡ ಸ್ಟೇಡಿಯಮ್ (1.30 ಲಕ್ಷ ಮಂದಿ ಪ್ರೇಕ್ಷಕರನ್ನು ತುಂಬಿಕೊಳ್ಳುವ ಸಾಮರ್ಥ್ಯ) ಎಂಬ ಕಾರಣಕ್ಕೆ ನರೇಂದ್ರ ಮೋದಿ ಸ್ಟೇಡಿಯಮ್ಗೆ ಫೈನಲ್ ಪಂದ್ಯವನ್ನು ವರ್ಗಾಯಿಸಲಾಯಿತ್ತು. ಫೈನಲ್ನಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಸೋತಿತ್ತು. ಇದೀಗ ಆ ನೋವನ್ನು ಶಿವಸೇನೆ ಮುಖಂಡ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಆದಿತ್ಯ ಠಾಕ್ರೆ ಹೊರ ಹಾಕಿದ್ದಾರೆ. ಅದಕ್ಕೆ ಕಾರಣವೂ ಇದೆ. ಟಿ20 ವಿಶ್ವ ಕಪ್ ಗೆದ್ದುಕೊಂಡು (T20 World Cup ) ವೆಸ್ಟ್ ಇಂಡೀಸ್ನಿಂದ ಬಂದ ಭಾರತ ತಂಡದ ಆಟಗಾರರಿಗೆ ಅಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಲಕ್ಷಾಂತರ ಮಂದಿ ಸೇರಿದ್ದರು. ಮುಂಬೈನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮ ಸ್ಟೇಡಿಯಮ್ನ ಹೊರಗೂ ಹಾಗೂ ಒಳಗೂ ಲಕ್ಷಾಂತರ ಮಂದಿಯ ಕೂಡುವಿಕೆಗೆ ಸಾಕ್ಷಿಯಾಗಿತ್ತು. ಇದನ್ನು ಉಲ್ಲೇಖಿಸಿ ಬಿಸಿಸಿಐಗೆ ಪರೋಕ್ಷವಾಗಿ ಕುಟುಕಿದ್ದಾರೆ ಆದಿತ್ಯ ಠಾಕ್ರೆ.
Yesterday’s celebration in Mumbai is also a strong message to the BCCI…
— Aaditya Thackeray (@AUThackeray) July 5, 2024
Never take away a World Cup final from मुंबई!
ಮುಂಬೈನಲ್ಲಿ ನಿನ್ನೆ ನಡೆದ ವಿಶ್ವ ಕಪ್ ಟ್ರೋಫಿಯ ಸಂಭ್ರಮಾಚರಣೆ ಬಿಸಿಸಿಐಗೆ ನೇರ ಸಂದೇಶವಾಗಿದೆ. ವಿಶ್ವಕಪ್ ಫೈನಲ್ ಪಂದ್ಯವನ್ನು ಮುಂಬೈನಿಂದ ಎಂದಿಗೂ ಕಸಿದುಕೊಳ್ಳಬೇಡಿ” ಎಂದು ಆದಿತ್ಯ ಠಾಕ್ರೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಐಸಿಸಿ ಕ್ರಿಕೆಟ್ ವಿಶ್ವಕಪ್ 2024 ರ ಚಾಂಪಿಯನ್ ಆಗಿರುವ ಭಾರತೀಯ ಕ್ರಿಕೆಟ್ ತಂಡವನ್ನು ಮುಂಬೈನಲ್ಲಿ ಗುರುವಾರ ವಿಜಯೋತ್ಸವದ ಮೆರವಣಿಗೆಯಲ್ಲಿ ಭಾರಿ ಜನಸಮೂಹ ಸ್ವಾಗತಿಸಿದ್ದರು. ಅದಾದ ಒಂದು ದಿನದ ನಂತರ ಆದಿತ್ಯ ಬಿಸಿಸಿಐ ವಿರುದ್ಧ ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: Virat Kohli’s Phone Wallpaper: ಕೊಹ್ಲಿಯ ಮೊಬೈಲ್ ವಾಲ್ ಪೇಪರ್ನಲ್ಲಿರುವ ವ್ಯಕ್ತಿ ಯಾರು? ಇವರ ಹಿನ್ನಲೆ ಏನು?
ಟಿ 20 ಭಾರತೀಯ ಕ್ರಿಕೆಟ್ ತಂಡವನ್ನು ಸ್ವಾಗತಿಸಲು ಅಭಿಮಾನಿಗಳು ವಾಂಖೆಡೆ ಕ್ರೀಡಾಂಗಣದಲ್ಲಿ ಗಂಟೆಗಳ ಕಾಲ ಕಾದಿದ್ದರು. ಎಂಎಸ್ ಧೋನಿ ನಾಯಕತ್ವದಲ್ಲಿ 2007 ರಲ್ಲಿ ಭಾರತದ ಮೊದಲ ಟಿ 20 ವಿಶ್ವಕಪ್ ಗೆಲುವು, 2011 ರ ಕ್ರಿಕೆಟ್ ವಿಶ್ವಕಪ್ ಗೆಲುವು ಮತ್ತು 2013 ರಲ್ಲಿ ಸಚಿನ್ ತೆಂಡೂಲ್ಕರ್ ಅವರ ಭಾವನಾತ್ಮಕ ವಿದಾಯ ಸೇರಿದಂತೆ ಅನೇಕ ಐತಿಹಾಸಿಕ ಕ್ರಿಕೆಟ್ ಘಟನೆಗಳಿಗೆ ವಾಂಖೆಡೆ ಆತಿಥ್ಯ ವಹಿಸಿದೆ.
ಅವಕಾಶಗಳು ಮತ್ತು ಕಾರ್ಯಕ್ರಮಗಳನ್ನು ಮುಂಬೈನಿಂದ ಅಹಮದಾಬಾದ್ಗೆ ಸ್ಥಳಾಂತರಿಸಿದ್ದಕ್ಕಾಗಿ ಠಾಕ್ರೆ ಈ ಹಿಂದೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಮೇ ತಿಂಗಳ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹಿಂದೂಸ್ತಾನ್ ಟೈಮ್ಸ್ಗೆ ನೀಡಿದ ಸಂದರ್ಶನದಲ್ಲಿ, ಕೈಗಾರಿಕೆಗಳು ಮತ್ತು ಯೋಜನೆಗಳನ್ನು ಗುಜರಾತ್ಗೆ ಸ್ಥಳಾಂತರಿಸಿದ್ದರಿಂದ ಮಹಾರಾಷ್ಟ್ರವು ಗಮನಾರ್ಹ ನಷ್ಟ ಎದುರಿಸಿದೆ ಎಂದು ಆದಿತ್ಯ ಉಲ್ಲೇಖಿಸಿದ್ದರು.
ಇಂಟರ್ನ್ಯಾಷನಲ್ ಫೈನಾನ್ಸ್ ಸೆಂಟರ್, ವೇದಾಂತ ಫಾಕ್ಸ್ಕಾನ್, ಬೃಹತ್ ಡ್ರಗ್ (ಔಷಧ) ಪಾರ್ಕ್ ಮತ್ತು ವೈದ್ಯಕೀಯ ಸಾಧನಗಳ ಪಾರ್ಕ್ ಸೇರಿಕೊಂಡಿವೆ. ಮುಂಬೈನಲ್ಲಿ ನಡೆಯಬೇಕಿದ್ದ ವಿಶ್ವಕಪ್ ಫೈನಲ್ ಪಂದ್ಯವನ್ನು ಅಹಮದಾಬಾದ್ಗೆ ಸ್ಥಳಾಂತರಿಸಲಾಗಿದೆ ಎಂಬುದಾಗಿಯೂ ಅವರು ಗಮನ ಸೆಳೆದಿದ್ದರು.