Site icon Vistara News

New Year 2024: ಈ ವರ್ಷ ನಿಮ್ಮ ಭವಿಷ್ಯ ಹೇಗಿದೆ? ಇಲ್ಲಿದೆ ವಿಡಿಯೊ ಸಹಿತ ವಿವರಣೆ

bhavishya 1

bhavishya 1

ಬೆಂಗಳೂರು: ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ಈ ಹಿನ್ನಲೆಯಲ್ಲಿ 2024ರಲ್ಲಿ ಯಾವ ರಾಶಿಯವರ ಭವಿಷ್ಯ ಹೇಗಿದೆ? ಯಾರಿಗೆ ಅದೃಷ್ಟ ಖುಲಾಯಿಸಲಿದೆ? ಯಾರೆಲ್ಲ ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು? ಮುಂತಾದ ವಿಚಾರಗಳನ್ನು ವಿಸ್ತಾರ ನ್ಯೂಸ್‌ನಲ್ಲಿ ಭಾರತೀಯ ಜ್ಯೋತಿಷ್ಯ ವಿಜ್ಞಾನ ಸಂಶೋಧಕರಾದ ಮಹಾಬಲಮೂರ್ತಿ ಕೊಡ್ಲೆಕೆರೆ ವಿವರಿಸಿದ್ದಾರೆ (New Year 2024).

ಮೇಷ

2024ರಲ್ಲಿ ಮೇಷ ರಾಶಿಯ ಮೇಲೆ ಮಂಗಳ ಗ್ರಹದ ಪ್ರಭಾವ ಗಾಢವಾಗಿರುತ್ತದೆ. ಅದರಲ್ಲೂ ಕೊನೆಯ 9 ತಿಂಗಳನ್ನು ತನ್ನದೇ ಹಿಡಿತಕ್ಕೆ ತೆಗೆದುಕೊಳ್ಳುತ್ತಾನೆ. ಇದರಿಂದಾಗಿ ಮೇಷ ರಾಶಿಯವರಿಗೆ ಉತ್ತಮ ಫಲ ದೊರೆಯಲಿದೆ. ಅದಾಗ್ಯೂ ಮಂಗಳನ ಮೇಲೆ ಶನಿಯು ಪ್ರಭಾವ ಬೀರುವುದರಿಂದ ಈ ಬಗ್ಗೆಯೂ ಎಚ್ಚರಿಕೆ ವಹಿಸಬೇಕು. ಅಂದರೆ ವ್ಯಕ್ತಿತ್ವ ಹನನವಾಗುವ ಸಾಧ್ಯತೆಯೂ ಇದೆ. ಚಿಕ್ಕ ಘಟನೆಯಿಂದ ಅವಮಾನವಾಗುವ ಜತೆಗೆ ಆರೋಗ್ಯದ ಮೇಲೂ ಕರಿ ನೆರಳು ಬೀಳಲಿದೆ. ಇದರಿಂದ ಏನು ಅಂದುಕೊಂಡಿರುತ್ತೀರೋ ಅದು ಸಾಧಿಸಲು ಸಾಧ್ಯವಾಗದೇ ಇರಬಹುದು. ಸಮಾಧಾನದ ಸಂಗತಿ ಎಂದರೆ ಈ ರಾಶಿಯವರಿಗೆ ಮೇ 4ರಿಂದ ಗುರುಬಲ ಲಭಿಸಲಿದೆ. ಇದರಿಂದ ಆರ್ಥಿಕವಾಗಿ ಸಬಲರಾಗಬಹುದು. ಆದರೆ ರಾಹು ಹಣವನ್ನು ನೀರಿನಂತೆ ಖರ್ಚು ಮಾಡಿಸುವ ಸಾಧ್ಯತೆಯೂ ಇದೆ. ದಾಂಪತ್ಯ, ಪ್ರೇಮದ ವಿಚಾರದಲ್ಲಿ ಮಿಶ್ರಫಲ ಇರಲಿದೆ. ಮೇಷ ರಾಶಿಯವರ ಸಿಟ್ಟು ಗಂಭೀರ ಪರಿಣಾಮ ಬೀರಲಿದೆ. ಹೀಗಾಗಿ ಸಿಟ್ಟನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಮನೆ ನಿರ್ಮಾಣಕ್ಕೆ ತೊಡಗಿದ್ದರೆ ಈ ವರ್ಷ ಅದು ಸಂಪೂರ್ಣವಾಗಲಿದೆ.

ವೃಷಭ

ಈ ರಾಶಿಯವರಿಗೆ ಉದ್ಯೋಗದ ಸ್ಥಳದಲ್ಲಿ ಅನುಕೂಲ ವಾತಾವರಣ ನಿರ್ಮಾಣವಾಗಲಿದೆ. ಭಡ್ತಿ ಸಿಗುವ ಸಾಧ್ಯತೆ ಇದೆ. ಸರ್ಪ ಕೂಡ ಅನೂಕಲಕರವಾಗಿ ಕೆಲಸ ಮಾಡಲಿದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಜತೆಗೆ ಕೆಲವೊಂದು ಸಂಗತಿಯಲ್ಲಿ ಎಚ್ಚರಿಕೆ ವಹಿಸಬೇಕು. ಅದರಲ್ಲೂ ಮುಖ್ಯವಾಗಿ ಮಕ್ಕಳ ವಿಚಾರದಲ್ಲಿ. ಮಕ್ಕಳ ವಿಚಾರ ನಿಮ್ಮ ಚಿಂತೆಗೆ ಕಾರಣವಾಗಲಿದೆ. ಚಂದ್ರ ಜಾತಕದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತಾನೆ ಎನ್ನುವುದನ್ನು ಗಮನಿಸಬೇಕು. ಒಟ್ಟಿನಲ್ಲಿ ಈ ರಾಶಿಯವರಿಗೆ ಮಿಶ್ರಫಲ ದೊರೆಯಲಿದೆ.

ಮಿಥುನ

ಕೇತು ಈ ರಾಶಿಯವರಿಗೆ ತೊಂದರೆ ಕೊಡುವ ಸಾಧ್ಯತೆ ಇದೆ. ಉನ್ನತ ಶಿಕ್ಷಣ ಪಡೆಯಬೇಕು ಎಂದುಕೊಂಡವರಿಗೆ ಸಮಸ್ಯೆ ಎದುರಾಗಬಹುದು. ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ಗೊಂದಲ ಮೂಡಬಹುದು. ಆದ್ದರಿಂದ ಯಾವುದೇ ಸಂಗತಿಯಲ್ಲಿ ಶೀಘ್ರ ತೀರ್ಮಾನ ತೆಗೆದುಕೊಳ್ಳಬೇಕು. ಇದರ ಜತೆಗೆ ಮಿಥುನ ರಾಶಿಯವರಿಗೆ ಅನೇಕ ರೀತಿಯಲ್ಲಿ ಲಾಭವೂ ಕೈಗೂಡಲಿದೆ. ಅದು ಬೋನಸ್‌ ರೂಪದಲ್ಲಿಯೋ, ಷೇರ್‌ ರೂಪದಲ್ಲಿಯೋ ಎದುರಾಗಬಹುದು. ಉದ್ಯಮದಲ್ಲಿಯೂ ಯಶಸ್ಸು ಸಿಗಲಿದೆ. ಈ ವರ್ಷ ಮೇ 4ರ ನಂತರ ಮಿಥುನ ರಾಶಿಯವರು ಗುರುಬಲ ಕಳೆದುಕೊಳ್ಳಲಿದ್ದಾರೆ. ಇದರಿಂದಾಗಿ ಮದುವೆ ಬಗೆಗಿನ ನಿರ್ಣಯ ವಿಳಂಬವಾಗಬಹುದು. ಹೀಗಾಗಿ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಈ ರಾಶಿಯವರು ಪಚ್ಚೆ ಹರುಳನ್ನು ಚಿನ್ನಕ್ಕೆ ಸೇರಿಸಿ ಧರಿಸಬಹುದು.

ಕಟಕ

ಕಟಕ ಚಂದ್ರನ ಒಡೆತನದಲ್ಲಿದೆ. ಈ ರಾಶಿಯವರಿಗೆ ಅಷ್ಟಮ ಶನಿ ಕಾಟ ನಡೆಯುತ್ತಿದೆ. ಮೇ 4ರಿಂದಷ್ಟೇ ಗುರುಬಲ ಸಿಗಲಿದೆ. ರಾಹು ಈ ರಾಶಿಯವರ ಭಾಗ್ಯವನ್ನು ಕಬಳಿಸುತ್ತಾನೆ. ಇತ್ತ ಕೇತು ಸಕಾರಾತ್ಮಕ ಶಕ್ತಿಯಿಂದ ವಿಘ್ನವನ್ನು ನಿವಾರಿಸುತ್ತಾನೆ. ದೇಹದಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಆರೋಗ್ಯದ ಬಗೆಗೆ ಕಾಳಜಿ ವಹಿಸಬೇಕು. ನೀರಿನ ವಿಚಾರದಲ್ಲಿ ಕೆಲವು ಗಂಡಾಂತರ ಎದುರಾಗಬಹುದು. ಗುರುಬಲ ಬಂದ ನಂತರ ಒಳಿತಾಗಲಿದೆ. ಆದರೆ ಈ ರಾಶಿಯವರು ಯಾವುದೇ ಕಾರಣಕ್ಕೂ ತಮಗೆ ಅನುಭವ ಇಲ್ಲದ ಕಾರ್ಯಕ್ಕೆ ಕೈ ಹಾಕಬಾರದು. ಆಹಾರದ ವಿಚಾರದಲ್ಲಿಯೂ ಎಚ್ಚರಿಕೆ ವಹಿಸಬೇಕು. ಸಿನಿಮಾ, ಜಾಹೀರಾತು ಕ್ಷೇತ್ರದಲ್ಲಿರುವವರಿಗೆ ಉತ್ತಮ ಅವಕಾಶ ಸಿಗಲಿದೆ.

ಸಿಂಹ

ಸಿಂಹ ರಾಶಿಯವರು ರಾಜಕಾರಣದಲ್ಲಿ ಉನ್ನತ ಸ್ಥಾನ ಗಳಿಸುವ ಸಾಧ್ಯತೆ ಇದೆ. ಆದರೆ ಯಾವ ಕ್ಷೇತ್ರದಲ್ಲಿಯೂ ಸುಲಭವಾಗಿ ಯಶಸ್ಸು ಲಭಿಸುವುದಿಲ್ಲ. ಇದಕ್ಕಾಗಿ ಬಹಳ ಶ್ರಮ ಪಡಬೇಕಾಗುತ್ತದೆ. ಹಣ ಖರ್ಚಾಗುತ್ತದೆ. ಮಾತಿನ ವಿಚಾರದಲ್ಲಿ ಬಹಳಷ್ಟು ನಿಗಾ ವಹಿಸಬೇಕು. ಕೇತು ತೊಂದರೆ ನೀಡುವ ಸಾಧ್ಯತೆ ಇದೆ. ಮಾತು ಸ್ವರ್ಗಕ್ಕೂ ಒಯ್ಯಬಹುದು, ನರಕಕ್ಕೂ ತಳ್ಳಬಹುದು. ಸಾಂಸಾರಿಕ ವಿಚಾರದಲ್ಲಿ ತಪ್ಪು ಕಲ್ಪನೆಯಿಂದ ಕಲಹ ಮೂಡಬಹುದು. ಮದುವೆ ವಿಳಂಬ, ನಿಶ್ಚಿಯವಾಗಿದ್ದ ಮದುವೆ ಮುರಿದು ಬೀಳುವ ಸಾಧ್ಯತೆ, ಕೋರ್ಟ್‌ ಮೆಟ್ಟಿಲೇರುವ ಅನಿವಾರ್ಯತೆ ಎದುರಾಗಬಹುದು. ಅದಾಗ್ಯೂ ಮೇ 4ರ ವರೆಗೆ ಗುರುಬಲ ಇರುವುದರಿಂದ ಒಂದಷ್ಟು ಶುಭಫಲ ದೊರೆಯಲಿದೆ. ಕೆಲಸದ ವಿಚಾರದಲ್ಲಿ ಮುತುವರ್ಜಿ ವಹಿಸಿದರೆ ಆರ್ಥಿಕವಾಗಿ ಸಬಲರಾಗಬಹುದು. ಒಟ್ಟಿನಲ್ಲಿ ಮಾತು, ಮದುವೆ, ಸಾಂಸಾರಿಕ ವಿಚಾರದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸುವುದು ಅಗತ್ಯ.

ಕನ್ಯಾ

ಈ ರಾಶಿಯವರಿಗೆ ದ್ವಂದ್ವ ಕಾಡಲಿದೆ. ಮಿತಿ ಮೀರಿದ ಮಾತು ತೊಂದರೆಗೆ ಕಾರಣವಾಗಲಿದೆ. ಹೀಗಾಗಿ ಮಾತಿನ ಬಗ್ಗೆ ನಿಗಾ ವಹಿಸಬೇಕು. ಸಂಬಂಧದಲ್ಲಿ ರಾಹು ಹುಳಿ ಹಿಂಡುವ ಸಾಧ್ಯತೆ ಇದೆ. ಹೀಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಹೋಟೆಲ್‌ ಉದ್ಯಮದಲ್ಲಿ ಯಶಸ್ಸು ಸಿಗಲಿದೆ. ಕೋರ್ಟ್‌ ಕೇಸ್‌ ಗೆಲ್ಲುವ ಸಾಧ್ಯತೆಯೂ ಇದೆ. ಸಾಲದ ವಿಚಾರದಲ್ಲಿಯೂ ಎಚ್ಚರಿಕೆ ವಹಿಸಬೇಕು. ಮಾತು ಮತ್ತು ಉದ್ಯಮದಲ್ಲಿ ಗಮನಹರಿಸಿದರೆ ಈ ವರ್ಷ ಉತ್ತಮವಾಗಿರಲಿದೆ.

ತುಲಾ

ಇವರಿಗೆ ಪಂಚಮ ಶನಿ ಕಾಟ ಎದುರಾಗಲಿದೆ. ಮಕ್ಕಳ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು. ಯಾಕೆಂದರೆ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇದೆ. ಲಾಭ ಕಡಿಮೆಯಾಗುವ ಸಾಧ್ಯತೆ ಇದೆ. ಅಲ್ಲದೆ ಉದ್ಯೋಗದಲ್ಲಿ ಹಿಂಭಡ್ತಿ, ಉದ್ಯೋಗ ನಷ್ಟ ಸಂಭವಿಸಲಿದೆ. ಅದಾಗ್ಯೂ ಉತ್ತಮ ಸ್ನೇಹಿತರ ಬೆಂಬಲ ಸಿಗಲಿದೆ. ಅವರು ಸದಾ ನೈತಿಕವಾಗಿ ಸಹಾಯ ಹಸ್ತ ಚಾಚಲಿದ್ದಾರೆ. ಯಾರಾದರೂ ಮೋಸ ಮಾಡುವ ಸಾಧ್ಯತೆ ಇದೆ. ಸಿನಿಮಾ, ಮಾಡೆಲ್‌ ಕ್ಷೇತ್ರದವರಿಗೆ ಇದ್ದಕ್ಕಿದ್ದಂತೆ ಅವಕಾಶ ಕಡಿಮೆಯಾಗಲಿದೆ. ಒಟ್ಟಿನಲ್ಲಿ ತುಲಾ ರಾಶಿಯವರು ತಾಳ್ಮೆಯನ್ನು ರೂಢಿಸಿಕೊಳ್ಳಬೇಕು. ಕಷ್ಟಗಳನ್ನು ಎದುರಿಸುವ ಮನೋಭಾವ ಮೂಡಿಸಿಕೊಳ್ಳಬೇಕು.

ವೃಶ್ಚಿಕ

ಇವರಿಗೆ ಮೇ 4ರಿಂದ ಗುರುಬಲ ದೊರೆಯಲಿದೆ. ಇದರಿಂದ ವೃಶ್ಚಿಕ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಈ ರಾಶಿಯವರಿಗೆ ಸುಮಾರು ಒಂದೂವರೆ ವರ್ಷದ ಬಳಿಕವಷ್ಟೇ ಶನಿ ಕಾಟ ಆರಂಭವಾಗಲಿರುವುದರಿಂದ ಅಲ್ಲಿಯವರೆಗೆ ಹೆಚ್ಚಿನ ಸಮಸ್ಯೆಗಳಿಲ್ಲ. ಗುರುಬಲ ಇವರಿಗೆ ಯಶಸ್ಸು ತಂದುಕೊಡಲಿದೆ. ಕೇತು ಕೂಡ ಒಳಿತನ್ನೇ ಮಾಡಲಿದ್ದಾನೆ. ಸೋಲನ್ನೇ ಅನುಭವಿಸಿದವರಿಗೆ ಒಳಿತು ಕಂಡು ಬರಲಿದೆ. ಅಂದುಕೊಂಡದ್ದನ್ನು ಸುಲಭವಾಗಿ ಸಾಧಿಸಬಹುದು. ಆರ್ಥಿಕವಾಗಿಯೂ ಸದೃಢವಾಗಬಹುದು. 2025ರಲ್ಲಿ ಶನಿಕಾಟ ಎದುರಾಗಲಿರುವುದರಿಂದ ಎಚ್ಚರಿಕೆ ವಹಿಸಬೇಕು. ಒಟ್ಟಿನಲ್ಲಿ ಈ ವರ್ಷ ಶುಭಫಲ ಕೊಡಲಿದೆ. ರಾಜಕಾರಣಿಗಳಿಗೂ ಉತ್ತಮ ಫಲಿತಾಂಶ ಲಭಿಸಲಿದೆ.

ಧನಸ್ಸು

ಈ ರಾಶಿಯವರಿಗೂ ಈ ವರ್ಷ ಒಳಿತು ಕಂಡು ಬರಲಿದೆ. ಈಗಾಗಲೇ ಧನಸ್ಸು ರಾಶಿಯವರಿಗೆ ಗುರುಬಲ ಇದೆ. ಮೇ ಬಳಿಕ ಇದು ತಪ್ಪಿದರೂ ಹೆಚ್ಚಿನ ಸಮಸ್ಯೆ ಎದುರಾಗುವುದಿಲ್ಲ. ಶನೈಶ್ಚರ ಬಹಳ ಒಳ್ಳೆಯ ಸ್ಥಾನದಲ್ಲಿ ಕೂತಿರುತ್ತಾನೆ. ಆದರೆ ಬುಧನ ಕಾರಣಕ್ಕೆ ಕೆಲವು ತೊಂದರೆ ಎದುರಾಗುತ್ತದೆ. ಇದರಿಂದ ಸಂಗಾತಿಯ ಮಧ್ಯೆ ವೈಮನಸ್ಸು ಮೂಡುವ ಸಾಧ್ಯತೆ ಇದೆ. ಮುನ್ನೆಚ್ಚರಿಕೆ ವಹಿಸಿದರೆ ಇದನ್ನೂ ಪರಿಹರಿಸಬಹುದು. ಶಿಕ್ಷಣದ ವಿಚಾರದಲ್ಲಿ ಸಾಕಷ್ಟು ಮುಂಜಾಗ್ರತೆಯಿಂದ ಇರಬೇಕು. ಮಕ್ಕಳು ನಿರಾಸೆ ಎದುರಿಸಬೇಕಾಬಹುದು. ಉದ್ಯೋಗ ರಂಗದಲ್ಲಿ ಒತ್ತಡ ಎದುರಾಗಬಹುದು. ಬಾಳ ಸಂಗಾತಿಯ ಆರೋಗ್ಯ ಕೈ ಕೊಡಬಹುದು. ಸಿನಿಮಾ, ನಾಟಕ, ಮಾಡೆಲಿಂಗ್‌ ರಂಗದತ್ತ ಗಮನ ಹರಿಸದಿರುವುದು ಉತ್ತಮ. ಒಟ್ಟಿನಲ್ಲಿ ಈ ರಾಶಿಯವರಿಗೂ ಮಿಶ್ರಫಲ ಎದುರಾಗಲಿದೆ.

ಮಕರ

ಈ ರಾಶಿಯವರಿಗೆ ಗುರುಬಲ ದೊರೆಯಲಿದೆ. ಹಠಮಾರಿ ಮಕ್ಕಳೂ ಕೂಡ ಹೆತ್ತವರ ಮಾತು ಕೇಳಲಿದ್ದಾರೆ. ಶನಿ ಸಂಪೂರ್ಣವಾಗಿ ತೊಂದರೆ ನೀಡಲ್ಲ. ಮಕರ ರಾಶಿಯವರಿಗೆ ಶನಿಯ ಬೆಂಬಲ ಇರುತ್ತದೆ. ಚಂದ್ರ ಮಾತ್ರ ಕಾಟ ಕೊಡಲಿದ್ದಾನೆ. ಶನಿಗೂ ಚಂದ್ರನಿಗೂ ತಿಕ್ಕಾಟ ನಡೆಯಲಿದೆ. ದಾಂಪತ್ಯ ವಿಚಾರದಲ್ಲಿ ವಿರಸ ಮೂಡಲಿದೆ. ಇದರ ನಿವಾರಣೆಗೆ ಚಂದ್ರ ಪೀಡ ನಿವಾರಣಾ ಸ್ತೋತ್ರ ಓದಬೇಕು. ಕೆಲಸದ ವಿಚಾರದಲ್ಲಿ ಅದೃಷ್ಟಶಾಲಿಗಳಾಗಿರುತ್ತಾರೆ. ಇವರಿಗೆ ದೇವಿಯ ರೂಪದಲ್ಲಿ ಅನುಗ್ರಹ ಸಿಗಲಿದೆ. ಕಷ್ಟವನ್ನು ಧೈರ್ಯದಿಂದ ಎದುರಿಸಿದರೆ ಮುಂದೆ ಒಳಿತಾಗಲಿದೆ.

ಕುಂಭ

ಈ ರಾಶಿಯವರಿಗೆ ಇನ್ನೂ ನಾಲ್ಕು ವರ್ಷಗಳ ಕಾಲ ಶನಿ ಕಾಟ ಮುಂದುವರಿಯಲಿದೆ. ಇವರು ಬಹಳಷ್ಟು ತೊಳಲಾಟ ಅನುಭವಿಸಬೇಕಾಗುತ್ತದೆ. ಇದ್ದಕ್ಕಿದ್ದಂತೆ ತೊಂದರೆ ಎದುರಾಗಬಹುದು. ಅದಾಗ್ಯೂ ಇವರಿಗೆ ಬುಧನ ಮೂಲಕ ಸ್ವಲ್ಪ ಮಟ್ಟಿನ ಸಮಾಧಾನ ದೊರೆಯಲಿದೆ. ಅಳೆದು ತೂಗಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಯಾವುದೇ ಸಂದರ್ಭದಲ್ಲಿಯೂ ಧೈರ್ಯಗೆಡಬಾರದು. ಹಣಕಾಸಿನ ವಿಚಾರದಲ್ಲಿ ಬಹಳಷ್ಟು ಎಚ್ಚರಿಕೆ ವಹಿಸಬೇಕು. ಆರ್ಥಿಕ ವಿಚಾರವಾಗಿ ಅವಮಾನ ಎದುರಿಸಬೇಕಾದ ಸಂದರ್ಭ ಬರಬಹುದು. ಆತಿಯಾದ ಆತ್ಮವಿಶ್ವಾಸ ಮುಳುವಾಗಲಿದೆ. ಒಟ್ಟಿನಲ್ಲಿ ಸಂತೋಷಕ್ಕಿಂತ ದುಃಖ ಹೆಚ್ಚಾಗುವ ಸಾಧ್ಯತೆ ಇದೆ. ಆಗಾಗ ಆರೋಗ್ಯ ಸ್ಥಿತಿ ಪರೀಕ್ಷಿಸುವುದನ್ನು ರೂಢಿಸಿಕೊಳ್ಳಬೇಕು. ದೇವಿಯನ್ನು ಸ್ತುತಿಸುವುದರ ಮೂಲಕ ಸಂಕಷ್ಟದಿಂದ ಪಾರಾಗಬಹುದು.

ಮೀನ

ಇವರು ಮಾತಿನಲ್ಲಿ ಅದ್ಭುತವನ್ನೇ ಸೃಷ್ಟಿಸಬಲ್ಲರು. ಆದರೆ ಇನ್ನೂ ಆರು ವರ್ಷಗಳ ಕಾಲ ಶನಿ ಕಾಟ ಇವರಿಗೆ ಎದುರಾಗಲಿದೆ. ಸತ್ಯವನ್ನೇ ಹೇಳಿದರು ಕೆಲವರು ನಂಬದೇ ಇರಬಹುದು. ಮೇ ತನಕ ಗುರುಬಲ ಇರಲಿದೆ. ಆದರೂ ಬಾಳ ಸಂಗಾತಿಯ ಆರೋಗ್ಯಕ್ಕೆ ವಿಚಿತ್ರ ತೊಂದರೆ ಎದುರಾಗಲಿದೆ. ಹೀಗಾಗಿ ಆರೋಗ್ಯದ ವಿಚಾರದಲ್ಲಿಯೂ ಎಚ್ಚರಿಕೆ ವಹಿಸಬೇಕು. ಮಾತ್ರವಲ್ಲ ಸಂಗಾತಿಯ ಬಗ್ಗೆ ಅನುಮಾನ ಮೂಡುವ ಸಾಧ್ಯತೆ ಇರುವುದರಿಂದ ಕಣ್ಣಾರೆ ಕಂಡದ್ದನ್ನು ಪರಿಶೀಲಿಸುವುದನ್ನು ರೂಡಿಸಿಕೊಳ್ಳಬೇಕು. ಈಶ್ವರನನ್ನು ಪ್ರಾರ್ಥಿಸುವ ಮೂಲಕ ಸಂಕಷ್ಟದಿಂದ ಪಾರಾಗಬಹುದು. ಋಣಾತ್ಮಕವಾಗಿ ಆಲೋಚಿಸುವುದನ್ನು ಬಿಟ್ಟು ಬಿಡಬೇಕು. ಮನಸ್ಸಿನಲ್ಲಿ ಇದ್ದುದನ್ನು ನೇರವಾಗಿ ಹೇಳಿಬಿಡಿ.

Exit mobile version