Site icon Vistara News

Hindu Temple : ಎಲ್ಲ ಧರ್ಮದವರಿಗೆ ಒಳಗೆ ಬಿಡಲು ದೇಗುಲಗಳು ಪಿಕ್ನಿಕ್​ ಸ್ಪಾಟ್​ಗಳಲ್ಲ; ಹೈಕೋರ್ಟ್​

Madras Highcourt

ಮಧುರೈ: ದೇವಾಲಯಗಳಲ್ಲಿ (Hindu Temple) ಹಿಂದೂಯೇತರರಿಗೆ ‘ಕೋಡಿಮರಂ’ (ಧ್ವಜಸ್ತಂಭ) ಪ್ರದೇಶ ಮೀರಿ ಒಳಗೆ ಅನುಮತಿ ನೀಡಬೇಕಾಗಿಲ್ಲ ಎಂದು ಮದ್ರಾಸ್​ ಹೈಕೋರ್ಟ್​ ಮಹತ್ವದ ತೀರ್ಪೊಂದನ್ನು ನೀಡಿದೆ. ಹಿಂದೂ ಧರ್ಮವನ್ನು ಅನುಸರಿಸದೇ ಇರುವವರಿಗೆ ಪ್ರವೇಶ ಇಲ್ಲ ಎಂದು ಎಲ್ಲ ದೇವಾಲಯಗಳಲ್ಲಿ ಬೋರ್ಡ್ ಗಳನ್ನು ಅಳವಡಿಸುವಂತೆ ಮದ್ರಾಸ್ ಹೈಕೋರ್ಟ್ ಮಂಗಳವಾರ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಹಿಂದೂಗಳಿಗೂ ತಮ್ಮ ಧರ್ಮವನ್ನು ಆಚರಿಸುವ ಮೂಲಭೂತ ಹಕ್ಕಿದೆ. ಅದೇ ರೀತಿ ಎಲ್ಲರೂ ಭೇಟಿ ನೀಡಲು ದೇವಾಲಯಗಳು ಪಿಕ್ನಿಕ್​ ಸ್ಪಾಟ್ (ಪ್ರವಾಸಿ ತಾಣ) ಕೂಡ ಅಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ಪಳನಿಯ ವಿಶ್ವ ಪ್ರಸಿದ್ಧ ದಂಡಾಯುತಪಾಣಿ ಸ್ವಾಮಿ ದೇವಾಲಯ ಮತ್ತು ಅದರ ಉಪ ದೇವಾಲಯಗಳ ಒಳಗೆ ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕು ಎಂದು ಕೋರಿ ಡಿ ಸೆಂಥಿಲ್ ಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​​ನ ಮಧುರೈ ಪೀಠದ ನ್ಯಾಯಮೂರ್ತಿ ಎಸ್. ಶ್ರೀಮತಿ ಈ ತೀರ್ಪು ನೀಡಿದ್ದಾರೆ. ಎಲ್ಲಾ ಪ್ರವೇಶದ್ವಾರಗಳಲ್ಲಿ ಈ ನಿಟ್ಟಿನಲ್ಲಿ ಪ್ರದರ್ಶನ ಫಲಕಗಳನ್ನು ಇಡುವಂತೆ ಅವರು ಹೇಳಿದ್ದಾರೆ. ದಿಂಡಿಗಲ್ ಜಿಲ್ಲೆಯ ಪಳನಿಯಲ್ಲಿ ಪ್ರಸಿದ್ಧ ಮುರುಗನ್ ದೇವಾಲಯವಿದೆ.

ತಮಿಳುನಾಡು ಸರ್ಕಾರವನ್ನು ಪ್ರತಿನಿಧಿಸಿದ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆ (ಎಚ್ಆರ್​ ಸಿಇ) ಆಯುಕ್ತರು ಮತ್ತು ಪಳನಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಈ ಪ್ರಕರಣದಲ್ಲಿ ಪ್ರತಿವಾದಿಗಳಾಗಿದ್ದರು. ಎಚ್ಆರ್ & ಸಿಇ ಇಲಾಖೆ ತಮಿಳುನಾಡಿನ ಹಿಂದೂ ದೇವಾಲಯಗಳನ್ನು ನಿರ್ವಹಿಸುತ್ತದೆ.

ಬೋರ್ಡ್​ ಅಳವಡಿಸಲು ನಿರ್ದೇಶನ

ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯವು ದೇವಾಲಯಗಳ ಪ್ರವೇಶ ದ್ವಾರದಲ್ಲಿ, ಧ್ವಜಸ್ತಂಭದ ಬಳಿ ಮತ್ತು ದೇವಾಲಯದ ಪ್ರಮುಖ ಸ್ಥಳಗಳಲ್ಲಿ ಕೋಡಿಮರಂ (ಧ್ವಜಸ್ತಂಭ) ನಂತರ ಹಿಂದೂಯೇತರರಿಗೆ ದೇವಾಲಯದ ಒಳಗೆ ಪ್ರವೇಶವಿಲ್ಲ ಎಂದು ಸೂಚಿಸುವ ಫಲಕಗಳನ್ನು ಅಳವಡಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು.

ನಂಬಿಕೆ ಹೊಂದಿದ್ದರೆ ಬಿಡಿ

ಯಾವುದೇ ಹಿಂದೂಯೇತರರು ದೇವಾಲಯದಲ್ಲಿ ನಿರ್ದಿಷ್ಟ ದೇವರನ್ನು ದರ್ಶನ ಪಡೆಯುವುದಾಗಿ ಹೇಳಿಕೊಂಡರೆ, ಅವರು ಹಿಂದೂ ದೇವರಲ್ಲಿ ನಂಬಿಕೆ ಹೊಂದಿದ್ದಾರೆ ಎಂದರೆ ಮತ್ತು ಅವರು ಹಿಂದೂ ಧರ್ಮದ ಪದ್ಧತಿಗಳು ಮತ್ತು ಆಚರಣೆಗಳನ್ನು ಅನುಸರಿಸುತ್ತಾರೆ ಎಂದರೆ ದೇವಾಲಯದ ಪದ್ಧತಿಗಳಿಗೆ ಬದ್ಧರಾಗಿರಬೇಕು. ಅಂತಹ ಹಿಂದೂಯೇತರರಿಗೆ ದೇವಾಲಯಕ್ಕೆ ಭೇಟಿ ನೀಡಲು ಅವಕಾಶ ನೀಡಬಹುದು ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಹೇಳಿದೆ. ಅಂತಹ ವ್ಯಕ್ತಿಗೆ ವಿಶ್ವಾಸದ ಆಧಾರದ ಮೇಲೆ ಅನುಮತಿ ನೀಡಿದಾಗ ಅದನ್ನು ರಿಜಿಸ್ಟರ್ ನಲ್ಲಿ ನಮೂದಿಸಬೇಕು ಎಂದು ಹೇಳಲಾಗಿದೆ.

ದೇವಾಲಯದ ನಿಯಮಗಳು ಪದ್ಧತಿಗಳು ಮತ್ತು ಆಚರಣೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಪ್ರತಿವಾದಿಗಳು ದೇವಾಲಯದ ಆವರಣವನ್ನು ನಿರ್ವಹಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಪ್ರತಿವಾದಿಗಳು ಈ ರಿಟ್ ಅರ್ಜಿಯನ್ನು ಪಳನಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದಾರೆ. ಹೀಗಾಗಿ ಈ ಆದೇಶವು ಅದಕ್ಕೆ ಮಾತ್ರ ಅನ್ವಯವಾಗುತ್ತದೆ ಎಂದು ಹೇಳಿದರು.

ಹಿಂದೂಗಳಿಗೂ ನಂಬಿಕೆಯನ್ನು ಪ್ರತಿಪಾದಿಸುವ ಹಕ್ಕು ಇದೆ

ಇತರ ಧರ್ಮಗಳಿಗೆ ಸೇರಿದ ಜನರು ತಮ್ಮ ಧರ್ಮವನ್ನು ಆಚರಿಸುವ ಹಕ್ಕನ್ನು ಹೊಂದಿದ್ದಾರೆ. ಆದರೆ ಆಯಾ ಧರ್ಮದ ಪದ್ಧತಿಗಳು ಮತ್ತು ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಅಂತೆಯೇ ಹಿಂದೂಗಳ ಧಾರ್ಮಿಕ ಹಕ್ಕನ್ನೂ ಕಾಪಾಡಬೇಕು. ತಂಜಾವೂರಿನ ಬೃಹದೇಶ್ವರ ದೇವಸ್ಥಾನದಲ್ಲಿಯೂ ಸಹ ಇತರ ಧರ್ಮದ ಜನರಿಗೆ ದೇವಾಲಯದ ವಾಸ್ತುಶಿಲ್ಪದ ಸ್ಮಾರಕಗಳನ್ನು ವೀಕ್ಷಿಸಲು ಅವಕಾಶವಿದೆ. ಜನರು ಆವರಣವನ್ನು ಪಿಕ್ನಿಕ್ ತಾಣ ಅಥವಾ ಪ್ರವಾಸಿ ತಾಣ ಎಂದು ತಿಳಿದುಕೊಳ್ಳಬಾರದು. ದೇವಾಲಯದ ಆವರಣವನ್ನು ಪೂಜ್ಯಭಾವದಿಂದ ಮತ್ತು ಆಗಮಗಳ ಪ್ರಕಾರ ನಿರ್ವಹಿಸಬೇಕು ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ : Gunfight: ನಕ್ಸಲರ ಜತೆ ಗುಂಡಿನ ಕಾಳಗ; ಮೂವರು ಭದ್ರತಾ ಪಡೆ ಸಿಬ್ಬಂದಿ ಹುತಾತ್ಮ

ದೇವಾಲಯದ ಆವರಣದಲ್ಲಿ ಮಾಂಸಾಹಾರ ಸೇವನೆ?

ಬೃಹದೀಶ್ವರ ದೇವಸ್ಥಾನದಲ್ಲಿ ಇತರ ಧರ್ಮಕ್ಕೆ ಸೇರಿದ ವ್ಯಕ್ತಿಗಳು ದೇವಾಲಯದ ಆವರಣವನ್ನು ಪಿಕ್ನಿಕ್ ತಾಣವೆಂದು ಪರಿಗಣಿಸುತ್ತಿದ್ದಾರೆ. ದೇವಾಲಯದ ಆವರಣದಲ್ಲಿ ಮಾಂಸಾಹಾರ ಸೇವಿಸಿದ್ದಾರೆ ಎಂದು ವರದಿಯಾಗಿದೆ. ಅಂತೆಯೇ, ಇತ್ತೀಚೆಗೆ 11.01.2024 ರಂದು ಪತ್ರಿಕೆಯೊಂದು ಮಧುರೈನ ಮೀನಾಕ್ಷಿ ದೇವಸ್ಥಾನದ ಒಳಗೆ ಬೇರೆ ಧರ್ಮದವರು ಪ್ರವೇಶಿಸಿ “ತಮ್ಮ ಪವಿತ್ರ ಗ್ರಂಥ “ಕ್ಕೆ ಪ್ರಾರ್ಥನೆ ಮಾಡಲು ಪ್ರಯತ್ನಿಸಿದ್ದಾರೆ ಎಂದು ವರದಿಯಾಗಿತ್ತು.

Exit mobile version