Site icon Vistara News

Novak Djokovic : ಅಲ್ಕರಾಜ್ ಮಣಿಸಿ ಚೊಚ್ಚಲ ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ನೊವಾಕ್ ಜೊಕೊವಿಕ್

Novak Djokovic

ಪ್ಯಾರಿಸ್​: ಸರ್ಬಿಯಾದ ನೊವಾಕ್ ಜೊಕೊವಿಕ್ (Novak Djokovic) ಪ್ಯಾರಿಸ್ ಒಲಿಂಪಿಕ್ಸ್ 2024 ರ ಪುರುಷರ ಟೆನಿಸ್ ಸಿಂಗಲ್ಸ್​​ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದು ಅವರ ಪಾಲಿಗೆ ಚೊಚ್ಚಲ ಒಲಿಂಪಿಕ್ಸ್​ ಚಿನ್ನ. ಭಾನುವಾರ ಫಿಲಿಪ್-ಚಾಟ್ರಿಯರ್​​ನಲ್ಲಿ ನಡೆದ ಚಿನ್ನದ ಪದಕದ ಪಂದ್ಯದಲ್ಲಿ 37 ವರ್ಷದ ಆಟಗಾರ ಸ್ಪೇನ್​​ ಕಾರ್ಲೋಸ್ ಅಲ್ಕರಾಜ್ ಅವರನ್ನು 7-6 (7-3), 7-6 (7-2) ಸೆಟ್​​ಗಳಿಂದ ಸೋಲಿಸಿದರು. ಈ ಮೂಲಕ ಒಲಿಂಪಿಕ್ಸ್​​​ ಟೆನಿಸ್​​ನ ಅತ್ಯಂತ ಹಿರಿಯ ಚಾಂಪಿಯನ್ ಎನಿಸಿಕೊಂಡರು. 21 ವರ್ಷದ ಅಲ್ಕರಾಜ್ ಗೆ ಅತ್ಯಂತ ಕಿರಿಯ ಒಲಿಂಪಿಕ್ ವಿಜೇತರಾಗುವ ಅವಕಾಶವಿತ್ತು. ಅದು ಸಾಧ್ಯವಾಗಲಿಲ್ಲ.

ಆರಂಭಿಕ ಸೆಟ್ ನಲ್ಲಿ ಅಲ್ಕರಾಜ್ ಉತ್ತಮ ಆರಂಭವನ್ನು ಹೊಂದಿರಲಿಲ್ಲ. ಜೊಕೊವಿಕ್ ಮೂರು ಬ್ರೇಕ್ ಪಾಯಿಂಟ್ ಗಳನ್ನು ಗಳಿಸಿದ್ದರಿಂದ ಅವರು ಮತ್ತಷ್ಟು ಹಿನ್ನಡೆ ಅನುಭವಿಸಿದರು, ಆದರೆ ಸ್ಪೇನ್ ಆಟಗಾರ ಅವೆಲ್ಲವನ್ನೂ ಉಳಿಸಿ 2-2 ರಿಂದ ಸಮಬಲ ಸಾಧಿಸಿದರು. ಮತ್ತೆ ಅಲ್ಕರಾಜ್​ಗೆ ಜೊಕೊವಿಕ್ ಅವರ ಸರ್ವ್ ಮುರಿಯುವ ಅವಕಾಶವಿತ್ತು. ಆದರೆ ಸರ್ಬಿಯಾದ ಆಟಗಾರ ಯುವ ಆಟಗಾರನಿಗೆ ಅವಕಾಶವೇ ನೀಡಲಿಲ್ಲ.

ಒಂಬತ್ತನೇ ಗೇಮ್ ಸಂಪೂರ್ಣ ಥ್ರಿಲ್ಲರ್ ಆಗಿ ಪರಿಣಮಿಸಿತು. ಜೊಕೊವಿಕ್ ಐದು ಬ್ರೇಕ್ ಪಾಯಿಂಟ್ ಗಳನ್ನು ಉಳಿಸಿ ಅಂತಿಮವಾಗಿ ತಮ್ಮ ಸರ್ವ್ ಹಿಡಿತದಲ್ಲಿಟ್ಟುಕೊಂಡು 5-4 ಕ್ಕೆ ಮುನ್ನಡೆದರು. ಹಲವಾರು ಬಾರಿ ನೋವಿನ ಸಮಸ್ಯೆ ಎದುರಿಸಿ ಅದರಿಂದ ಹೊರಕ್ಕೆ ಬಂದರು. ಟೈ-ಬ್ರೇಕರ್ನಲ್ಲಿಯೂ 3-3 ರಲ್ಲಿ ಸಮಬಲದ ಸಾಧನೆ ಬಂತು. ಆದರೆ ಜೊಕೊವಿಕ್ ಸತತ ನಾಲ್ಕು ಅಂಕಗಳನ್ನು ಪಡೆದರು. ಫೋರ್​ಹ್ಯಾಂಡ್​ ಬಲದೊಂದಿಗೆ ಒಂದು ಗಂಟೆ 34 ನಿಮಿಷಗಳಲ್ಲಿ ಆರಂಭಿಕ ಸೆಟ್ ಗೆದ್ದರು. ಅಲ್ಕರಾಜ್ ತನ್ನ ಎಂಟು ಬ್ರೇಕ್ ಪಾಯಿಂಟ್ ಅವಕಾಶಗಳಲ್ಲಿ ಒಂದನ್ನು ಸಹ ಪರಿವರ್ತಿಸಲು ವಿಫಲಗೊಂಡು ನಿರಾಸೆಗೆ ಒಳಗಾದರು.

ಎರಡನೇ ಸೆಟ್ ಇದೇ ರೀತಿ ಪ್ರಾರಂಭವಾಯಿತು. ಅಲ್ಲಿ ಅಲ್ಕರಾಜ್ ಮತ್ತು ಜೊಕೊವಿಕ್ ಇಬ್ಬರೂ ಪರಸ್ಪರ ಜಿದ್ದಿಗೆ ಬಿದ್ದರು. ಅಲ್ಕರಾಜ್ ಮೂರನೇ ಗೇಮ್ ನಲ್ಲಿ ಬ್ರೇಕ್ ಪಾಯಿಂಟ್ ಉಳಿಸಿ ಪಂದ್ಯವನ್ನು ಜೀವಂತವಾಗಿ ಉಳಿಸಿದರು. 3-3 ರಲ್ಲಿ ಮುಂದುವರಿಯಿತು.

ಇದನ್ನೂ ಓದಿ: Mohammed Siraj : ಲಂಕಾ ವಿರುದ್ಧದ ಪಂದ್ಯದಲ್ಲಿ ಹೊಸ ದಾಖಲೆ ಬರೆದ ಮೊಹಮ್ಮದ್​ ಸಿರಾಜ್​

ಅಲ್ಕರಾಜ್ 5-4 ರ ಮುನ್ನಡೆಯೊಂದಿಗೆ ಸೆಟ್ ಗೆಲ್ಲುವ ಅವಕಾಶ ಹೊಂದಿದ್ದರು. ಆದರೆ ಜೊಕೊವಿಕ್​ ಅವಕಾಶ ಕೊಡದೇ ಆ ಗೇಮ್ ಗೆದ್ದರು. ಹೀಗಾಗಿ ಮೊದಲ ಸೆಟ್​ನಂತೆಯೇ ಎರಡನೇಯದೂ ಟೈ-ಬ್ರೇಕರ್​ಗೆ ಹೋಯಿತು. ಅಲ್ಕರಾಜ್ ಜೊಕೊವಿಕ್ ಅವರ ಸರ್ವ್ ಅನ್ನು ಮುರಿಯಲು ವಿಫಲಗೊಂಡು ಸೋಲೊಪ್ಪಿಕೊಂಡರು.

Exit mobile version