Site icon Vistara News

Olympic Games: ಒಲಿಂಪಿಕ್ಸ್​ನಲ್ಲಿ ಮಹಿಳೆಯರು ಮೊದಲ ಬಾರಿಗೆ ಸ್ಪರ್ಧಿಸಿದ್ದು ಯಾವಾಗ?

Olympic Games: When did women first compete in the Olympic Games?

ಬೆಂಗಳೂರು: ಬರೋಬ್ಬರಿ 100 ವರ್ಷಗಳ ಬಳಿಕ ಒಲಿಂಪಿಕ್ಸ್​ ಕ್ರೀಡಾಕೂಡವನ್ನು(Olympic Games) ನಡೆಸುತ್ತಿರುವ ಪ್ಯಾರಿಸ್​ ನಗರಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಸರ್ವ ರೀತಿಯಲ್ಲಿಯೂ ಫ್ರಾನ್ಸ್(paris olympics 2024)​ ಸಿಂಗರಿಸಿ ನಿಂತಿದೆ. ಪ್ಯಾರಿಸ್‌ ಆತಿಥ್ಯದಲ್ಲಿ ನಡೆಯಲಿರುವ 3ನೇ ಒಲಿಂಪಿಕ್ಸ್‌ ಕೀಡಾಕೂಟ ಇದಾಗಿದೆ. ಸಾವಿರಾರು(Olympic Games History) ವರ್ಷಗಳ ಇತಿಹಾಸ ಹೊಂದಿರುವ ಪ್ರತಿಷ್ಠಿತ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಮೊತ್ತ ಮೊದಲ ಬಾರಿಗೆ ಮಹಿಳಾ ಕ್ರೀಡಾಳುಗಳು ಸ್ಪರ್ಧಿಸಿದ್ದು ಕೂಡ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿಯೇ.

ಹೌದು, 1896ರಲ್ಲಿ ಗ್ರೀಸ್‌ನ ಅಥೆನ್ಸ್‌ನಲ್ಲಿ ನಡೆದ ಮೊದಲ ಒಲಿಂಪಿಕ್ಸ್‌ನಲ್ಲಿ ಮಹಿಳಾ ಸ್ಪರ್ಧಿಗಳಿರಲಿಲ್ಲ. ಎಲ್ಲ 241 ಸ್ಪರ್ಧಿಗಳು ಪುರುಷರೇ ಆಗಿದ್ದರು. 1900ರ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ(1900 Olympics) ಮೊದಲ ಬಾರಿ 22 ಮಹಿಳೆಯರು ಪಾಲ್ಗೊಂಡಿದ್ದರು. ಆ ಬಳಿಕದ ಒಲಿಂಪಿಕ್ಸ್​ನಲ್ಲಿ ಮಹಿಳಾ ಸ್ಪರ್ಧಿಗಳ ಸಂಖ್ಯೆ ಹೆಚ್ಚುತ್ತಾ ಸಾಗಿತು.

2012ರ ಲಂಡನ್‌ ಒಲಿಂಪಿಕ್ಸ್​ನಲ್ಲಿ ಪುರುಷರಂತೆ ಎಲ್ಲ ಸ್ಪರ್ಧೆಗಳಲ್ಲೂ ಮಹಿಳೆಯರು ಪಾಲ್ಗೊಂಡ ಸಮಾನತೆಯ ಮೊದಲ ಒಲಿಂಪಿಕ್ಸ್‌ ಎನಿಸಿತ್ತು. ಅಲ್ಲದೆ ಎಲ್ಲ ದೇಶಗಳಿಂದ ಮಹಿಳಾ ಸ್ಪರ್ಧಿಗಳೂ ಭಾಗವಹಿಸಿದ್ದರು. ಈ ಬಾರಿಯ ಉದ್ಘಾಟನಾ ಸಮಾರಂಭದ ಕ್ರೀಡಾಪಟುಗಳ ಪಥಸಂಚಲನದಲ್ಲಿ ಎಲ್ಲ ತಂಡಗಳಿಗೆ ತಲಾ ಇಬ್ಬರು ಧ್ವಜಧಾರಿಗಳನ್ನು ಹೊಂದಲು ಅವಕಾಶ ನೀಡುವ ಮೂಲಕ ಲಿಂಗ ಸಮಾನತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಈ ಬಾರಿಯ ಒಲಿಂಪಿಕ್ಸ್​ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಒಲಿಂಪಿಕ್ಸ್​ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ. ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

ಒಲಿಂಪಿಕ್ಸ್‌ 5 ರಿಂಗ್​ಗಳ ಮಹತ್ವವೇನು?

5 ಖಂಡಗಳನ್ನು ಪ್ರತಿನಿಧಿಸುವ 5 ರಿಂಗ್‌ಗಳುಳ್ಳ ಒಲಿಂಪಿಕ್ಸ್‌ ಧ್ವಜವನ್ನು 1913ರಲ್ಲಿ ಆಧುನಿಕ ಒಲಿಂಪಿಕ್ಸ್‌ ಪಿತಾಮಹ ಫ್ರಾನ್ಸ್‌ನ ಪಿಯರ್‌ ಡಿ ಕೌಬರ್ಟಿನ್‌ ವಿನ್ಯಾಸಗೊಳಿಸಿದರು. ಈ ಬಾರಿಯ ಒಲಿಂಪಿಕ್ಸ್​ ಕೂಡ ಫ್ರಾನ್ಸ್​ನಲ್ಲಿಯೇ ನಡೆಯುತ್ತಿರುವುದು ವಿಶೇಷ. ಈ ಒಲಿಂಪಿಕ್ಸ್‌ ಧ್ವಜ 1920ರ ಬೆಲ್ಜಿಯಂನ ಅಂಟ್ವೆರ್ಪ್​ನಲ್ಲಿ ಮೊದಲ ಬಾರಿ ಅಧಿಕೃತವಾಗಿ ಹಾರಾಡಿಸಲಾಯಿತು. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಪ್ರತಿ ದೇಶದ ರಾಷ್ಟ್ರಧ್ವಜವೂ ಈ ರಿಂಗ್‌ಗಳ ಒಂದಾದರೂ ಬಣ್ಣವನ್ನು ಒಳಗೊಂಡಿರುವುದು ಈ ರಿಂಗ್​ನ ವಿಶೇಷತೆ.

ವೈವಿಧ್ಯಮಯ ಭಾಷೆ, ಸಂಸ್ಕೃತಿ, ಹವಾಮಾನ, ಆರ್ಥಿಕತೆ, ಆಹಾರ ಪದ್ಧತಿ ಮತ್ತು ಮೈಬಣ್ಣದ ಜನರೆಲ್ಲ ಒಂದಾಗಿ ಸೇರುವ ವಿಶ್ವದ ಅತಿದೊಡ್ಡ ವೇದಿಕೆ ಒಲಿಂಪಿಕ್ಸ್ ಕ್ರೀಡಾಕೂಟವಾಗಿದೆ. ಹಲವು ವೈವಿಧ್ಯಗಳ ನಡುವೆಯೂ ಒಲಿಂಪಿಕ್ಸ್ ಏಕತೆಯನ್ನು ಸಾರುವುದು ಈ ಕ್ರೀಡಾಕೂಟದ ವಿಶೇಷತೆ.

Exit mobile version