Site icon Vistara News

LPL 2024 : ಫ್ರಾಂಚೈಸಿ ಮಾಲೀಕನಿಂದಲೇ ಮ್ಯಾಚ್​ ಫಿಕ್ಸಿಂಗ್; ಬಂಧನ

LPL 2024

ಬೆಂಗಳೂರು: ಲಂಕಾ ಪ್ರೀಮಿಯರ್ ಲೀಗ್ (LPL 2024 ) ಫ್ರಾಂಚೈಸಿ ಡಂಬುಲ್ಲಾ ಥಂಡರ್ಸ್​​ನ ಮಾಲೀಕರಾಗಿರುವ ಬಾಂಗ್ಲಾದೇಶ ಮೂಲದ ಬ್ರಿಟಿಷ್ ಪ್ರಜೆ ತಮೀಮ್ ರೆಹಮಾನ್ ಅವರನ್ನು ಮ್ಯಾಚ್ ಫಿಕ್ಸಿಂಗ್ಸ್​​ನಲ್ಲಿ ತೊಡಗಿರುವ ಅನುಮಾನದ ಮೇಲೆ ಬುಧವಾರ ಬಂಧಿಸಲಾಗಿದೆ. ಕ್ರೀಡಾ ಸಚಿವಾಲಯದ ಕ್ರೀಡೆಗೆ ಸಂಬಂಧಿಸಿದ ಅಪರಾಧಗಳ ತಡೆಗಟ್ಟುವಿಕೆಯ ವಿಶೇಷ ತನಿಖಾ ಘಟಕದ ಅಧಿಕಾರಿಯೊಬ್ಬರು ಬ್ರಿಟಿಷ್ ಪೌರತ್ವವನ್ನು ಹೊಂದಿರುವ ವ್ಯಕ್ತಿಯ ಬಂಧನ ದೃಢಪಡಿಸಿದ್ದಾರೆ. ಕೊಲಂಬೊ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರೆಹಮಾನ್ ಅವರನ್ನು ಮೇ 31 ರವರೆಗೆ ಕಸ್ಟಡಿಗೆ ಒಪ್ಪಿಸಿದೆ. ಡಂಬುಲ್ಲಾ ಫ್ರಾಂಚೈಸಿಯನ್ನು ಬಾಂಗ್ಲಾದೇಶದ ಉದ್ಯಮಿಗಳ ನೇತೃತ್ವದ ಇಂಪೀರಿಯಲ್ ಸ್ಪೋರ್ಟ್ಸ್ ಗ್ರೂಪ್ ಏಪ್ರಿಲ್​ನಲ್ಲಿ ಖರೀದಿಸಿತ್ತು

ನ್ಯಾಯಾಲಯದ ಆದೇಶದ ನಂತರ ನಗರದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರೆಹಮಾನ್ ಅವರನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಆದಾಗ್ಯೂ, ಅವರ ವಿರುದ್ಧದ ನಿಖರವಾದ ಆರೋಪಗಳು ಇನ್ನೂ ಸ್ಪಷ್ಟವಾಗಿಲ್ಲ. ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ನಡೆಸಲು ಪ್ರಯತ್ನಿಸಿದ್ದಕ್ಕೆ ಸಂಬಂಧಿಸಿದ ದೇಶದ ಕ್ರೀಡಾ ಕಾಯ್ದೆಯ ಎರಡು ನಿಬಂಧನೆಗಳ ಅಡಿಯಲ್ಲಿ ಅವರನ್ನು ತನಿಖೆ ನಡೆಸಲಾಗುತ್ತಿದೆ. ಎಲ್ಪಿಎಲ್ ಜುಲೈ 1 ರಿಂದ 21 ರವರೆಗೆ ನಡೆಯಲಿದೆ.

ಕೊಲಂಬೊದಲ್ಲಿ ನಡೆದ ಲೆಜೆಂಡ್ಸ್ ಕ್ರಿಕೆಟ್ ಲೀಗ್​ನಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಭಾರತೀಯ ಪ್ರಜೆಗಳಾದ ಯೋನಿ ಪಟೇಲ್ ಮತ್ತು ಪಿ ಆಕಾಶ್ ಅವರ ಪಾಸ್ಪೋರ್ಟ್​​ಗಳನ್ನು ಹಿಂದಿರುಗಿಸುವಂತೆ ಶ್ರೀಲಂಕಾದ ನ್ಯಾಯಾಲಯವು ಇತ್ತೀಚೆಗೆ ಆದೇಶಿಸಿದೆ. ಅನುಮತಿ ಪಡೆಯದೇ ಲೆಜೆಂಡ್ಸ್ ಲೀಗ್​ನಲ್ಲಿ ಪಟೇಲ್ ಒಂದು ತಂಡವನ್ನು ಹೊಂದಿದ್ದರು.

ಪ್ರಸ್ತುತ ಜಾಮೀನಿನ ಮೇಲೆ ಹೊರಗಿರುವ ಇವರಿಬ್ಬರು ಮಾರ್ಚ್ 8 ಮತ್ತು 19 ರ ನಡುವೆ ಕ್ಯಾಂಡಿಯ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆದ ಲೀಗ್​ನ ಪಂದ್ಯಗಳನ್ನು ಫಿಕ್ಸ್ ಮಾಡಲು ಪ್ರಯತ್ನಿಸಿದ ಆರೋಪ ಎದುರಿಸುತ್ತಿದ್ದಾರೆ.

2019 ರಲ್ಲಿ ಕ್ರೀಡೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಭ್ರಷ್ಟಾಚಾರವನ್ನು ಅಪರಾಧವೆಂದು ಪರಿಗಣಿಸಿದ ದಕ್ಷಿಣ ಏಷ್ಯಾದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಶ್ರೀಲಂಕಾ ಪಾತ್ರವಾಗಿತ್ತು. ತಪ್ಪಿತಸ್ಥರೆಂದು ಸಾಬೀತಾದ ಯಾರಿಗಾದರೂ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ಪಾವತಿಸಬೇಕಾಗುತ್ತದೆ.

ಹರಾಜಿನಲ್ಲಿ ಭರ್ಜರಿ ಬಿಡ್ಡಿಂಗ್​

500 ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುವ ಎಲ್​​ಪಿಎಲ್​ನ ಐದನೇ ಆವೃತ್ತಿಯ ಹರಾಜು ಮಂಗಳವಾರ ನಡೆದಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಬಳಿಕ ನಾಲ್ಕು ವರ್ಷಗಳ ನಂತರ ಟೂರ್ನಿ ಆರಂಭಗೊಂಡಿದೆ. ಮಥೀಶಾ ಪಥಿರಾನಾ ಮಂಗಳವಾರ ಲಂಕಾ ಪ್ರೀಮಿಯರ್ ಲೀಗ್​ನ ಅತ್ಯಂತ ದುಬಾರಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಪಂದ್ಯಾವಳಿಯ 2024 ರ ಆವೃತ್ತಿಗಾಗಿ ತಮ್ಮ ಹಳೆಯ ತಂಡವಾದ ಕೊಲಂಬೊ ಸ್ಟ್ರೈಕರ್​​ನಿಂದ ಅವರು 1 ಕೋಟಿ ರೂಪಾಯಿ ಪಡೆದುಕೊಂಡರು.

ಇದನ್ನೂ ಓದಿ: IPL 2024 : ಅಮ್ಮನನ್ನು ಆಸ್ಪತ್ರೆಯಲ್ಲಿ ಮಲಗಿಸಿ ಕೆಕೆಆರ್​ ಪರ ಕ್ವಾಲಿಫೈಯರ್ ಆಡಿದ ಆಫ್ಘನ್​ ಕ್ರಿಕೆಟಿಗ

ಪಥಿರಾನಾ ಇತ್ತೀಚೆಗೆ ಐಪಿಎಲ್​​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಲೀಗ್ 2018 ರಲ್ಲಿ ಪ್ರಾರಂಭವಾಗಬೇಕಿತ್ತು. ಶ್ರೀಲಂಕಾ ಕ್ರಿಕೆಟ್ (ಎಸ್ಎಲ್ಸಿ) ಯೊಳಗಿನ ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ಅನೇಕ ಬಾರಿ ಮುಂದೂಡಿಕೆಯಾಗಿತ್ತು. ಬಿ-ಲವ್ ಕ್ಯಾಂಡಿ ತಂಡವು ಫೈನಲ್​ನಲ್ಲಿ ಡಂಬುಲ್ಲಾ ಔರಾ ತಂಡವನ್ನು ಸೋಲಿಸುವ ಮೂಲಕ 2023 ರ ಆವೃತ್ತಿಯನ್ನು ಗೆದ್ದುಕೊಂಡಿತ್ತು. ಪಂದ್ಯಾವಳಿಯು ಐದು ಫ್ರಾಂಚೈಸಿಗಳ ನಡುವೆ ನಡೆಯುತ್ತದೆ.

Exit mobile version