Site icon Vistara News

MGNREGA Job Cards: ಪ್ರಸಕ್ತ ವರ್ಷದಲ್ಲಿ 5 ಕೋಟಿಗೂ ಅಧಿಕ ನರೇಗಾ ಜಾಬ್ ಕಾರ್ಡ್ ಮಾಡಿದ ಕೇಂದ್ರ ಸರ್ಕಾರ!

MGNREGA

ನವದೆಹಲಿ: 2022-23ರ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯಡಿ (MGNREGA) 5 ಕೋಟಿಗೂ ಅಧಿಕ ಜಾಬ್ ಕಾರ್ಡ್‌ಗಳನ್ನು (MGNREGA Job Cards) ಡಿಲಿಟ್ ಮಾಡಲಾಗಿದೆ. 2021-22ರ ಸಾಲಿಗೆ ಹೋಲಿಸಿದರೆ, ಜಾಬ್ ಕಾರ್ಡ್ ರದ್ದು ಪ್ರಮಾಣವು ಶೇ.247ರಷ್ಟು ಹೆಚ್ಚಾಗಿದೆ ಎಂದು ಮಂಗಳವಾರ ಲೋಕಸಭೆಗೆ ಕೇಂದ್ರ ಸರ್ಕಾರವು ಮಾಹಿತಿ ನೀಡಿದೆ. ಕೇಂದ್ರ ಗ್ರಾಮೀಣ ಸಚಿವ ಗಿರಿರಾಜ್ ಸಿಂಗ್ (Minister Giriraj Singh) ಅವರು ಲೋಕಸಭೆಗೆ (Lok Sabha) ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.

ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮನ್ರೇಗಾ ಜಾಬ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ ಎಂದು ಲೋಕಸಭೆಗೆ ಒದಗಿಸಲಾದ ಉತ್ತರದಲ್ಲಿ ಕೇಂದ್ರ ಗ್ರಾಮೀಣ ಸಚಿವಾಲಯವು ತಿಳಿಸಿದೆ.

2021-22 ರಲ್ಲಿ ಪಶ್ಚಿಮ ಬಂಗಾಳದಲ್ಲಿ 1,57,309 ಜಾಬ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಆದರೆ ನಂತರದ ವರ್ಷದಲ್ಲಿ ಅಂದರೆ 2022-23ರ ಸಾಲಿನಲ್ಲಿ 83,36,115 ಜಾಬ್ ಕಾರ್ಡ್‌ಗಳನ್ನುರದ್ದುಗೊಳಿಸಲಾಗಿದ್ದು, ಇದು 5,000 ಪ್ರತಿಶತದಷ್ಟು ಹೆಚ್ಚಾಗಿದೆ. ಅದೇ ರೀತಿ ಆಂಧ್ರಪ್ರದೇಶದಲ್ಲಿ 2021-22ರಲ್ಲಿ 6,25,514 ಜಾಬ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿತ್ತು. 2022-23ರಲ್ಲಿ 78,05,569 ಕಾರ್ಡ್‌ಗಳನ್ನು ರದ್ದು ಮಾಡಿದ್ದು, ಈ ಪ್ರಮಾಣ ಶೇ. 1,147 ರಷ್ಟು ಹೆಚ್ಚಾಗಿದೆ.

ಈ ಸುದ್ದಿಯನ್ನೂ ಓದಿ: Vijayanagara News: ವಿಜಯನಗರ ಜಿಲ್ಲೆಯ 58910 ನರೇಗಾ ಕೂಲಿ ಕಾರ್ಮಿಕರಿಗೆ “ಗ್ರಾಮ ಆರೋಗ್ಯ” ಯೋಜನೆ ಭಾಗ್ಯ

ಅದೇ ರೀತಿ, ತೆಲಂಗಾಣದಲ್ಲಿ 2021-22ರಲ್ಲಿ 61,278 ಜಾಬ್ ಕಾರ್ಡ್‌ಗಳನ್ನು ಸ್ಥಗಿತ ಮಾಡಿದ್ದರೆ, 2022-23ರಲ್ಲಿ 17,32,936 ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ. ಅಂದರೆ ರದ್ದು ಪ್ರಮಾಣ ಶೇ.2,727ರಷ್ಟಾಗಿದೆ. ಗುಜರಾತ್ 2021-22ರಲ್ಲಿ 1,43,202 ಜಾಬ್ ಕಾರ್ಡ್‌ಗಳನ್ನು ಮತ್ತು 2022-23ರಲ್ಲಿ 4,30,404 ಜಾಬ್ ಕಾರ್ಡ್‌ಗಳನ್ನು ರದ್ದು ಮಾಡಿದೆ ಎಂದು ಲೋಕಸಭೆಗೆ ಒದಗಿಸಲಾದ ಉತ್ತರದಲ್ಲಿ ತಿಳಿಸಲಾಗಿದೆ.

ಫೇಕ್ ಜಾಬ್ ಕಾರ್ಡ್‌ಗಳು, ಡುಪ್ಲಿಕೇಟ್ ಜಾಬ್ ಕಾರ್ಡ್‌ಗಳು, ಇನ್ನು ಮುಂದೆ ಕೆಲಸ ಮಾಡಲು ಇಚ್ಛಿಸದ ಜನರು, ಕುಟುಂಬವನ್ನು ಗ್ರಾಮ ಪಂಚಾಯತ್‌ನಿಂದ ಶಾಶ್ವತವಾಗಿ ಸ್ಥಳಾಂತರ ಅಥವಾ ವ್ಯಕ್ತಿಯ ಸಾವಿನಂತಹ ಕಾರಣಗಳಿಂದಾಗಿ ಜಾಬ್ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ ಎಂದು ಕೇಂದ್ರ ಗ್ರಾಮೀಣ ಸಚಿವ ಗಿರಿರಾಜ್ ಸಿಂಗ್ ಅವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version