ನವದೆಹಲಿ: ಗೋಲ್ಡನ್ ಗರ್ಲ್ ಹಾಗೂ ಪಯ್ಯೊಳಿ ಎಕ್ಸ್‌ಪ್ರೆಸ್ ಎಂಬ ಖ್ಯಾತಿ ಪಡೆದಿರುವ ಭಾರತ ಕ್ರೀಡಾ ಕ್ಷೇತ್ರದ ಸಾಧಕಿ, ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿ. ಟಿ ಉಷಾ (P T Usha) ಅವರು ರಾಜ್ಯಸಭಾ(Rajya Sabha) ಕಲಾಪದ ಅಧ್ಯಕ್ಷತೆ ವಹಿಸಿದ್ದಾರೆ. ಈ ಮೂಲಕ ಸಂಸತ್ತಿನ ಮೇಲ್ಮನೆ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಯಿತು.
ರಾಜ್ಯಸಭಾಧ್ಯಕ್ಷರು ಮತ್ತು ಉಪಾಧ್ಯಕ್ಷರ ಅನುಪಸ್ಥಿತಿಯಲ್ಲಿ ಪಿ.ಟಿ ಉಷಾ ಅವರು ಕಲಾಪದ ಅಧ್ಯಕ್ಷತೆ ವಹಿಸಿದರು. ಈ ಸುಂದರ ಕ್ಷಣದ ವಿಡಿಯೊವನ್ನು ಉಷಾ ಅವರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಸಂತಸ ಹಂಚಿಕೊಂಡಿದ್ದಾರೆ.
ರಾಜ್ಯಸಭಾಧ್ಯಕ್ಷರಾದ ಉಪರಾಷ್ಟ್ರಪತಿ ಜಗದೀಪ್ ಧನಕರ್ ಸೇರಿದಂತೆ ಉಪ ಸಭಾಪತಿಗಳು ಸಾಮಾನ್ಯವಾಗಿ ರಾಜ್ಯಸಭೆ ಪೀಠ ಅಲಂಕರಿಸುತ್ತಾರೆ. ಇಲ್ಲವೇ ಉಪ ಸಭಾಪತಿಗಳ ಸಮಿತಿಯ ಸದಸ್ಯರಲ್ಲಿ ಒಬ್ಬರು ಕಲಾಪಗಳ ಅಧ್ಯಕ್ಷತೆ ವಹಿಸುವುದು ವಾಡಿಕೆ. ಆದರೆ ಉಷಾ ಅವರು ಅಚ್ಚರಿ ಎಂಬಂತೆ ಅಧ್ಯಕ್ಷತೆ ವಹಿಸಿ ಗಮನಸೆಳೆದಿದ್ದಾರೆ.
“ದೊಡ್ಡ ಸ್ಥಾನದೊಂದಿಗೆ ದೊಡ್ಡ ಜವಾಬ್ದಾರಿಗಳು ಬರುತ್ತದೆ ಎಂದು ಫ್ರಾಂಕ್ಲಿನ್ ಡಿ ರೂಸ್ಟೆಲ್ ಅವರು ಹೇಳಿದಂತೆ, ರಾಜ್ಯಸಭಾ ಅಧಿವೇಶನ ನಡೆಸುವಾಗ ನನಗೂ ಇದೇ ಭಾವನೆ ಮೂಡಿತು. ಜನರು ನನ್ನ ಮೇಲೆ ಇಟ್ಟಿರುವ ನಂಬಿಕೆಯಿಂದ ನಾನು ಈ ಈ ಮಟ್ಟದ ಮೈಲುಗಲ್ಲು ಸಾಧಿಸಲು ಸಾಧ್ಯವಾಯಿತು” ಎಂದು ಪಿ.ಟಿ.ಉಷಾ ಟ್ವೀಟ್ ಮೂಲಕ ತಿಳಿಸಿದ್ದಾರೆ. ಪಿ.ಟಿ. ಉಷಾ ಅವರು ರಾಜ್ಯಸಭಾ ಸದಸ್ಯರು ಆಗಿದ್ದಾರೆ.
ಇದನ್ನೂ ಓದಿ PT Usha: ಅಥ್ಲೆಟಿಕ್ಸ್ ಅಕಾಡೆಮಿಯಲ್ಲಿ ಅತಿಕ್ರಮಣ: ಪಿ.ಟಿ.ಉಷಾ ಗಂಭೀರ ಆರೋಪ
ಪಿ.ಟಿ. ಉಷಾ ಅವರು ರಾಜ್ಯಸಭೆ ಕಲಾಪದ ಅಧ್ಯಕ್ಷತೆ ವಹಿಸಿದ ಫೋಟೊ ಕಂಡ ನೆಟ್ಟಿಗರು, ಇದು ತುಂಬಾ ಹೆಮ್ಮೆಯ ಕ್ಷಣ. ನೀವು ಭಾರತದ ಹೆಣ್ಣು ಮಕ್ಕಳಿಗೆ ನಿಜವಾದ ಸ್ಫೂರ್ತಿ. ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ. ನಿಮ್ಮ ಮುಂದಿನ ಪ್ರಯಾಣಕ್ಕೆ ಶುಭವಾಗಲಿ. ಹೀಗೆ ಮುಂದುವರಿಯಿರಿ ಎಂದು ಹಾರೈಸಿದ್ದಾರೆ.