ನವದೆಹಲಿ: ಭಾರತೀಯ ಮಾಜಿ ಅಥ್ಲೀಟ್, ರಾಜ್ಯಸಭಾ ಸದಸ್ಯೆ ಹಾಗೂ ಭಾರತೀಯ ಒಲಿಂಪಿಕ್ ಸಂಸ್ಥೆಯ ಅಧ್ಯಕ್ಷೆ ಪಿ.ಟಿ ಉಷಾ(P T Usha) ಅವರು ಕೇರಳ(Kerala) ಕೇಂದ್ರೀಯ ವಿಶ್ವವಿದ್ಯಾಲಯದ ಮೊದಲ ಗೌರವ ಡಾಕ್ಟರೇಟ್ಗೆ(Honorary Doctorate) ಭಾಜನರಾಗಿದ್ದಾರೆ.
ಬುಧವಾರ(ಮಾರ್ಚ್ 22) ‘ಪಯ್ಯೋಳಿ ಎಕ್ಸ್‌ಪ್ರೆಸ್’ ಖ್ಯಾತಿಯ ಪಿ.ಟಿ ಉಷಾ ಅವರಿಗೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಮೊಟ್ಟಮೊದಲ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. ಈ ಮೂಲಕ ಪಿಟಿ ಉಷಾ ಅವರ ಕ್ರೀಡಾ ಸಾಧನೆಗೆ ಗೌರವ ವ್ಯಕ್ತಪಡಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಕುಲಪತಿ ಪ್ರೊ.ಎಚ್.ವೆಂಕಟೇಶ್ವರಲು ದೇಶಕ್ಕೆ ಮಾದರಿಯಾದವರನ್ನು ಗೌರವಿಸುವುದು ವಿಶ್ವವಿದ್ಯಾಲಯದ ಆದ್ಯ ಕರ್ತವ್ಯ. ಪಿ.ಟಿ ಉಷಾ ಅವರ ಜೀವನ ಮತ್ತು ಸಾಧನೆಗಳು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವಂತವಾಗಿದೆ. ವಿಶ್ವವಿದ್ಯಾನಿಲಯವು ಆಯೋಜಿಸುವ ವಿಶೇಷ ಸಮಾರಂಭದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ P T Usha In Rajya Sabha: ರಾಜ್ಯಸಭಾ ಕಲಾಪ ನಿರ್ವಹಿಸಿದ ಪಿ.ಟಿ. ಉಷಾ
‘ಚಿನ್ನದ ರಾಣಿ’ ಜತೆಗೆ ‘ಪಯ್ಯೋಳಿ ಎಕ್ಸ್‌ಪ್ರೆಸ್’ ಎಂದು ಪ್ರೀತಿಯಿಂದ ಕರೆಯಲ್ಪಡುವ ಪಿ.ಟಿ. ಉಷಾ ಭಾರತ ಕಂಡ ಅತ್ಯಂತ ಯಶಸ್ವಿ ಕ್ರೀಡಾಪಟುಗಳಲ್ಲಿ ಒಬ್ಬರು. ಸುಮಾರು ಎರಡು ದಶಕಗಳ ಕಾಲ ರನ್ನಿಂಗ್ ಟ್ರ್ಯಾಕ್ ಆಳಿದ ಕೀರ್ತಿ ಇವರದ್ದು. ಪಿ.ಟಿ. ಉಷಾ ಸಾಧನೆ ಇಂದಿಗೂ ಸಾಧನೆ ಮಾಡಬಯಸುವ ಮಹಿಳೆಯರಿಗೆ ಸ್ಫೂರ್ತಿ. ಭಾರತೀಯ ಅಥ್ಲೀಟ್ಗಳಿಗೆ ಐಕಾನ್ ಆಗಿದ್ದಾರೆ.
ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 19 ಚಿನ್ನ ಸೇರಿದಂತೆ ಒಟ್ಟು 33 ಪದಕಗಳನ್ನು ಪಿಟಿ ಉಷಾ ದೇಶಕ್ಕಾಗಿ ಗೆದ್ದಿದ್ದಾರೆ. ಸತತ ನಾಲ್ಕು ಏಷ್ಯನ್ ಗೇಮ್ಸ್‌ಗಳಲ್ಲಿ ಪದಕಗಳನ್ನು ಗೆದ್ದ ಮೊದಲ ಭಾರತೀಯ ಅಥ್ಲೀಟ್ ಕೂಡ ಆಗಿದ್ದಾರೆ. 1985ರಲ್ಲಿ ಜಕಾರ್ತಾ ಏಷ್ಯನ್ ಅಥ್ಲೆಟಿಕ್ ಮೀಟ್‌ನಲ್ಲಿ ಐದು ಚಿನ್ನ ಸೇರಿದಂತೆ ಆರು ಪದಕಗಳನ್ನು ಗೆದ್ದಿದ್ದ ಸಾಧನೆಗೂ ಅವರು ಪಾತ್ರರಾಗಿದ್ದಾರೆ. ಕಿನಾಲೂರಿನ ಉಷಾ ಅವರು ಸ್ಕೂಲ್ ಆಫ್ ಅಥ್ಲೆಟಿಕ್ಸ್‌ನ ಮುಖ್ಯಸ್ಥರಾಗಿದ್ದಾರೆ. ಈ ಸ್ಕೂಲ್ ಆಫ್ ಅಥ್ಲೆಟಿಕ್ಸ್‌ನ ಹಲವು ಆಟಗಾರ್ತಿಯರು ಭಾರತಕ್ಕೆ ಇದುವರೆಗೆ 79 ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದುಕೊಟ್ಟಿದ್ದಾರೆ.
ಹಲವು ನಿರೀಕ್ಷೆ ಮತ್ತು ಸವಾಲು
ಭಾರತೀಯ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಟಿ. ಉಷಾ ಅವರ ಅಧಿಕಾರಾವಧಿಯಲ್ಲಿ ಭಾರಿ ನಿರೀಕ್ಷೆ ಇರಿಸಲಾಗಿದೆ. 2024ರಲ್ಲಿ ಪ್ಯಾರಿಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ಗೆ ಬಲಿಷ್ಠ ಕ್ರೀಡಾ ಪಟುಗಳನ್ನು ಸಿದ್ಧಪಡಿಸಿ ಇಲ್ಲಿ ಅಮೋಘ ಪ್ರದರ್ಶನ ತೋರುವಂತೆ ಮಾಡುವ ಬಲು ದೊಡ್ಡ ಸವಾಲು ಕೂಡ ಅವರ ಮುಂದಿದೆ.
ಪ್ರಶಸ್ತಿಗಳು
1983ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ಪಿ ಟಿ ಉಷಾ, 1985ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ತನ್ನ ಓಟದ ಜೀವನದಲ್ಲಿ ಒಟ್ಟು 101 ಪದಕಗಳಿಗೆ ಕೊರಳೊಡ್ಡಿದ್ದ ಉಷಾ, ಶತಮಾನದ ಕ್ರೀಡಾಪಟು ಎಂಬ ಪುರಸ್ಕಾರಕ್ಕೂ ಪಾತ್ರರಾಗಿದ್ದಾರೆ. ಜತೆಗೆ ರಾಜ್ಯಸಭಾ ಸದಸ್ಯರು ಆಗಿದ್ದಾರೆ.