Site icon Vistara News

Pariksha Pe Charcha 2024: ಮಕ್ಕಳೇ ಗಮನಿಸಿ; ಮೋದಿ ‘ಪರೀಕ್ಷಾ ಪೇ ಚರ್ಚಾ’ ಜ.29ಕ್ಕೆ

Narendra Modi

Pariksha Pe Charcha 2024 On January 29; Here Is The Time And Live Information

ನವದೆಹಲಿ: ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ, ವಿದ್ಯಾರ್ಥಿಗಳು ಧೈರ್ಯದಿಂದ ಪರೀಕ್ಷೆ ಬರೆಯಲು ಉತ್ತೇಜನ ನೀಡುವ ದಿಸೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ನಡೆಸಿಕೊಡುವ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ (Pariksha Pe Charcha 2024) ದಿನಾಂಕ ಘೋಷಣೆ ಮಾಡಲಾಗಿದೆ. ಜನವರಿ 29ರಂದು ಬೆಳಗ್ಗೆ 11 ಗಂಟೆಗೆ ನವದೆಹಲಿಯಲ್ಲಿರುವ ಭಾರತ ಮಂಟಪದಲ್ಲಿ (Bharat Mandapam) ಕಾರ್ಯಕ್ರಮ ನಡೆಯಲಿದೆ. ಇದು ನರೇಂದ್ರ ಮೋದಿ ಅವರು ನಡೆಸುತ್ತಿರುವ ಏಳನೇ ಆವೃತ್ತಿಯ ಕಾರ್ಯಕ್ರಮವಾಗಿದೆ.

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೇ ಎಕ್ಸ್‌ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. “ಜನವರಿ 29ರಂದು ಬೆಳಗ್ಗೆ 11 ಗಂಟೆಗೆ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ. ವಿದ್ಯಾರ್ಥಿಗಳು ಪರೀಕ್ಷೆಯ ಭಯ ತೊರೆದು, ಹೊಸ ಅವಕಾಶಗಳನ್ನು ಗಿಟ್ಟಿಸಿಕೊಳ್ಳಲು ಕಾರ್ಯಕ್ರಮ ನೆರವಾಗಲಿದೆ” ಎಂದು ತಿಳಿಸಿದ್ದಾರೆ. ಪ್ರಗತಿ ಮೈದಾನದಲ್ಲಿರುವ ಭಾರತ್‌ ಮಂಟಪದಲ್ಲಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

3 ಸಾವಿರ ಜನ ಭಾಗಿ ಸಾಧ್ಯತೆ

ಎಲ್ಲ ರಾಜ್ಯಗಳು ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ಕಲಾ ಉತ್ಸವದ ವಿಜೇತರು, ಏಕಲವ್ಯ ಮಾದರಿ ವಸತಿ ಶಾಲೆಗಳ 100 ವಿದ್ಯಾರ್ಥಿಗಳು ಸೇರಿ ಒಟ್ಟು 3 ಸಾವಿರ ಜನ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆನ್‌ಲೈನ್‌ ಮೂಲಕ ಇದುವರೆಗೆ 2 ಕೋಟಿಗೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ದೇಶದ ಶಾಲೆಗಳ ಜತೆಗೆ ವಿಶ್ವವಿದ್ಯಾಲಯಗಳಲ್ಲೂ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: Book On Narendra Modi : ದಿ ಮೇಕರ್‌ ಆಫ್‌ ನ್ಯೂ ಇಂಡಿಯಾ; ಮೋದಿ ಬಗ್ಗೆ ಬ್ರೈಲ್‌ ಲಿಪಿ ಪುಸ್ತಕ ಬಿಡುಗಡೆ

ಲೈವ್‌ ವೀಕ್ಷಣೆಯೂ ಸಾಧ್ಯ

ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ನೇರವಾಗಿ ಭಾಗಿಯಾಗದವರು ಲೈವ್‌ ವೀಕ್ಷಣೆ ಮೂಲಕವೂ ಪರೀಕ್ಷಾ ಭಯವನ್ನು ನಿವಾರಿಸಿಕೊಳ್ಳಬಹುದಾಗಿದೆ. ದೂರದರ್ಶನ ಚಾನೆಲ್‌ನಲ್ಲಿ ಲೈವ್‌ ಪ್ರಸಾರ ಇರಲಿದೆ. ಹಾಗೆಯೇ, ನರೇಂದ್ರ ಮೋದಿ ಅವರ ಯುಟ್ಯೂಬ್‌ ಚಾನೆಲ್‌, ಸಾಮಾಜಿಕ ಜಾಲತಾಣಗಳ ಮೂಲಕವೂ ಲೈವ್‌ ವೀಕ್ಷಣೆ ಮಾಡಬಹುದಾಗಿದೆ. ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕಳೆದ ಡಿಸೆಂಬರ್‌ನಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳು ಹಾಗೂ ಪೋಷಕರ ಭೀತಿ ಹೋಗಲಾಡಿಸಲು ನರೇಂದ್ರ ಮೋದಿ ಅವರು ಎಕ್ಸಾಂ ವಾರಿಯರ್ಸ್‌ ಎಂಬ ಪುಸ್ತಕವನ್ನೂ ರಚಿಸಿದ್ದಾರೆ. ಇದು ಹಲವು ಮುದ್ರಣ ಕಂಡಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version