Site icon Vistara News

Paris Olympics 2024 : ವಿನೇಶ್ ಫೋಗಟ್​ ಬೆಳ್ಳಿ ಪದಕದ ಮನವಿ ತೀರ್ಪು ಭಾನುವಾರಕ್ಕೆ ಮುಂದೂಡಿಕೆ

Paris Olympics 2024

ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ಅವರು ಕೋರ್ಟ್ ಆಫ್ ಆರ್ಬಿಟ್ರೇಶನ್ ಆಫ್ ಸ್ಪೋರ್ಟ್ಸ್ (ಸಿಎಎಸ್) ಗೆ ಸಲ್ಲಿಸಿದ ಮನವಿಯ ಬಗ್ಗೆ ನಿರ್ಧಾರಕ್ಕಾಗಿ ಇನ್ನೂ 24 ಗಂಟೆಗಳ ಕಾಲ ಕಾಯಬೇಕಾಗುತ್ತದೆ. ವಿನೇಶ್ ಫೋಗಟ್ vs ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ ಮತ್ತು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ನಡುವಿನ ಈ ವಿವಾದದ ಬಗ್ಗೆ ವಿಚಾರಣೆ ನಡೆಸುತ್ತಿರುವ ಮಧ್ಯಸ್ಥಿಕೆದಾರ ಡಾ.ಅನ್ನಾಬೆಲ್ಲೆ ಬೆನೆಟ್ ಅವರಿಗೆ ಸಿಎಎಸ್ ಆಗಸ್ಟ್ 11, ರಾತ್ರಿ 9:30 ರವರೆಗೆ ವಿಸ್ತರಣೆ ನೀಡಿದೆ.

ಆಗಸ್ಟ್ 10 ರ ಶನಿವಾರ ಸಂಜೆ ಸಿಎಎಸ್​​ನಿಂದ ವಿಸ್ತರಣೆ ತಡವಾಗಿ ಬಂದಿತು. ರಾತ್ರಿ 9:30 ರೊಳಗೆ ತಮ್ಮ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿತ್ತು. ಆದರೆ ಅದನ್ನು 24 ಗಂಟೆಗಳ ಕಾಲ ವಿಳಂಬಗೊಳಿಸಲಾಯಿತು. ಒಲಿಂಪಿಕ್ ಕ್ರೀಡಾಕೂಟವನ್ನು ಮುಕ್ತಾಯಗೊಳಿಸುವ ಮೊದಲು ಸಮಿತಿಯು ತನ್ನ ತೀರ್ಪನ್ನು ಘೋಷಿಸಬೇಕಾಗಿರುವುದರಿಂದ ಇದು ಅಂತಿಮ ವಿಸ್ತರಣೆಯಾಗಿದೆ. ಪ್ಯಾರಿಸ್ ಕ್ರೀಡಾಕೂಟದ ಸಮಾರೋಪ ಸಮಾರಂಭವು ಭಾರತೀಯ ಕಾಲಮಾನ 12:30 ಕ್ಕೆ ಪ್ರಾರಂಭವಾಗಲಿದ್ದು, ಅದಕ್ಕೂ ಮೊದಲು ಸಿಎಎಸ್ ತನ್ನ ನಿರ್ಧಾರ ಪ್ರಕಟಿಸಬೇಕಾಗುತ್ತದೆ.

ಸಾಮಾನ್ಯವಾಗಿ, ತೀರ್ಪು ನೀಡಲು ತಾತ್ಕಾಲಿಕ ಸಮಿತಿಗೆ 24 ಗಂಟೆಗಳ ಸಮಯ ಮಿತಿ ನೀಡಲಾಗುತ್ತದೆ. ಆದಾಗ್ಯೂ, ಈ ನಿರ್ದಿಷ್ಟ ಪ್ರಕರಣದಲ್ಲಿ, ಸಮಿತಿಯು ಕೇಳಿರುವ ಎರಡನೇ ವಿಸ್ತರಣೆ ಇದಾಗಿದೆ.

ಒಲಿಂಪಿಕ್ಸ್​ನಿಂದ ತನ್ನನ್ನು ಅನರ್ಹಗೊಳಿಸಿದ್ದನ್ನು ಪ್ರಶ್ನಿಸಿ ವಿನೇಶ್ ಫೋಗಟ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಲು ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್) ಪ್ಯಾರಿಸ್​​ನಲ್ಲಿ ಮೂರು ಗಂಟೆಗಳ ವಿಚಾರಣೆ ನಡೆಸಿತು. ವರ್ಚುವಲ್ ಮೂಲಕ ಭಾಗವಹಿಸಿದ ವಿನೇಶ್, ಬೆಳ್ಳಿ ಪದಕ ನೀಡುವಂತೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು. ಮಧ್ಯಸ್ಥಿಕೆಯ ಮೂಲಕ ಕ್ರೀಡೆಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸುವ ಸ್ವತಂತ್ರ ಸಂಸ್ಥೆಯಾಗಿರುವ ಸಿಎಎಸ್ ಅಧಿಕೃತವಾಗಿ ಅವರ ಮನವಿಯನ್ನು ನೋಂದಾಯಿಸಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.

ಆಗಸ್ಟ್ 7 ರ ಬುಧವಾರ ನಡೆದ ಮಹಿಳಾ 50 ಕೆ,ಜಿ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕ ಪಂದ್ಯದ ಮೊದಲು ತೂಕದ ಮಿತಿಗಿಂತ 100 ಗ್ರಾಂ ತೂಕವಿದ್ದ ಕಾರಣ ವಿನೇಶ್ ಅವರನ್ನು ಅನರ್ಹ ಮಾಡಲಾಗಿತ್ತು. ವಿನೇಶ್ ಪರವಾಗಿ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಶ್ಪತ್ ಸಿಂಘಾನಿಯಾ ವಾದ ಮಂಡಿಸಿದ್ದರು.

ಇದನ್ನೂ ಓದಿ: Paris Olympics 2024 : ನಾಳೆ ಪ್ಯಾರಿಸ್​ ಒಲಿಂಪಿಕ್ಸ್​ ಸಮಾರೋಪ; ಎಲ್ಲಿ ಕಾರ್ಯಕ್ರಮ? ಎಷ್ಟು ಗಂಟೆಗೆ ಆರಂಭ? ಇಲ್ಲಿದೆ ಎಲ್ಲ ವಿವರ

ಭಾರತೀಯ ಒಲಿಂಪಿಕ್​ ಸಮಿತಿ ಶುಕ್ರವಾರ ತನ್ನ ಹೇಳಿಕೆ ನೀಡಿ, ಈ ವಿಷಯದ ಸಕಾರಾತ್ಮಕ ಪರಿಹಾರದ ಭರವಸೆಯಿದೆ. ವಿನೇಶ್ ಅವರನ್ನು ವರ್ಚುವಲ್ ಆಗಿ ಪ್ರತಿನಿಧಿಸಿದ್ದಕ್ಕಾಗಿ ಹಿರಿಯ ವಕೀಲರಾದ ಹರೀಶ್ ಸಾಳ್ವೆ ಮತ್ತು ವಿದುಶ್ಪತ್ ಸಿಂಘಾನಿಯಾ ಅವರಿಗೆ ಧನ್ಯವಾದ ಎಂದಿದೆ.

Exit mobile version