ಬೆಂಗಳೂರು: ಪ್ಯಾರಿಸ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಲ್ಲಿ (Paris Olympics 2024) ಹಲವಾರು ಸ್ವಾರಸ್ಯಕರ ಘಟನೆಗಳು ನಡೆಯುತ್ತಿವೆ. ಜತೆಗೆ ಕೆಲವೊಂದು ಧೈರ್ಯಶಾಲಿ ಪ್ರಸಂಗಗಳೂ ವರದಿಯಾಗುತ್ತಿವೆ. ಅಂತೆಯೇ ಈಜಿಫ್ಟ್ನ ಫೆನ್ಸರ್ ನಾದಾ ಹಫೀಜ್ ಅವರು 7 ತಿಂಗಳ ಗರ್ಭಿಣಿಯಾಗಿದ್ದ ಹೊರತಾಗಿಯೂ ಜಾಗತಿಕ ಸ್ಪರ್ಧೆಯಲ್ಲಿ ಪಾಲ್ಗೊಂಡು ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿದ್ದಾರೆ. ಮಹಿಳೆಯರ ವೈಯಕ್ತಿಕ ಫೆನ್ಸಿಂಗ್ಸ್ನಲ್ಲಿ ಹಫೀಜ್ ತನ್ನ ಮೊದಲ ಪಂದ್ಯವನ್ನು ಟಾರ್ಟಾಕೋವ್ಕಿ ವಿರುದ್ಧ 15-13 ಅಂತರದಿಂದ ಗೆದ್ದಿದ್ದರು. ಆದರೆ 16 ನೇ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಜಿಯೊನ್ ಹಯೋಂಗ್ ವಿರುದ್ಧ ಸೋತರು. ತಮ್ಮ ನಿರ್ಗಮನದ ಬಳಿಕ ಭಾವುಕರಾದ ಅವರು ತನ್ನ ಕಠಿಣ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ. ಆದರೆ, ತಮ್ಮ ಗೆಲವು ಹೆಚ್ಚು ಮೌಲ್ಯಯುತ ಎಂದು ಹೇಳಿದ್ದಾರೆ.
ಜುಲೈ 29 ರಂದು ನಡೆದ ಸ್ಪರ್ಧೆಯಲ್ಲಿ ಹಯೋಂಗ್ ವಿರುದ್ಧ 15-7 ಅಂತರದಿಂದ ಸೋತ ನಂತರ ಹಫೀಜ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ತನ್ನ ಗರ್ಭಧಾರಣೆಯ ಸುದ್ದಿ ಬಹಿರಂಗಪಡಿಸಿದ್ದಾರೆ. ಇದು ಇಡೀ ವಿಶ್ವ ಅಥ್ಲೆಟಿಕ್ ಕ್ಷೇತ್ರದಲ್ಲಿ ವ್ಯಾಪಕ ಸಂಚಲನ ಉಂಟುಮಾಡಿತು. ಹಫೀಜ್ ಅವರ ಫೆನ್ಸಿಂಗ್ ಪ್ರೀತಿ ಮತ್ತು ಉತ್ಸಾಹದ ಬಗ್ಗೆ ಪ್ರಶಂಸೆಗೆ ಗಳಿಸಿದ್ದಾರೆ. ಹಯೋಂಗ್ ವಿರುದ್ಧದ ಪಂದ್ಯದಲ್ಲೂ ಹಫೀಜ್ ಸಾಕಷ್ಟು ಹೋರಾಟದ ಮನೋಭಾವ ತೋರಿದ್ದರು. ಆದರೆ ದಕ್ಷಿಣ ಕೊರಿಯಾದ ಆಟಗಾರ್ತಿಯನ್ನು ಸೋಲಿಸಲು ಅವರಿಗೆ ಸಾಧ್ಯವಾಗಲಿಲ್ಲ.
“ಹೋರಾಟದ ವೇದಿಕೆಯಲ್ಲಿ ಇಬ್ಬರು ಸ್ಪರ್ಧಿಗಳು ನಿಮಗೆ ಕಾಣುತ್ತಿದ್ದರು. ಆದರೆ ನಿಜವಾಗಿಯೂ ನಾವು ಮೂವರು! ನಾನು, ನನ್ನ ಪ್ರತಿಸ್ಪರ್ಧಿ ಮತ್ತು ನಮ್ಮ ಜಗತ್ತಿಗೆ ಇನ್ನೂ ಬರದ ನನ್ನ ಪುಟ್ಟ ಮಗು! ನನ್ನ ಮಗು ಮತ್ತು ನಾನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಸಾಕಷ್ಟು ಸವಾಲುಗಳನ್ನು ಹೊಂದಿದ್ದೆವು ” ಎಂದು ಹಫೀಜ್ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಗರ್ಭಧಾರಣೆಯ ಸಮಯ ಹಾಗೂ ಒಲಿಂಪಿಕ್ಸ್ ಕಠಿಣ ಸವಾಲಾಗಿತ್ತು. ಜೀವನ ಮತ್ತು ಕ್ರೀಡೆಯ ನಡುವೆ ಸಮತೋಲನ ಕಾಪಾಡಿಕೊಳ್ಳಲು ಹೋರಾಡುವುದು ಶ್ರಮದಾಯಕವಾಗಿದೆ. 16 ನೇ ಸುತ್ತಿನಲ್ಲಿ ನನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಕ್ಕಾಗಿ ಹೆಮ್ಮೆ ಇದೆ ಎಂಬ ಕಾರಣಕ್ಕೆ ನಾನು ಈ ಪೋಸ್ಟ್ ಅನ್ನು ಬರೆಯುತ್ತಿದ್ದೇನೆ! ಹಫೀಜ್ ಹೇಳಿಕೊಂಡಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ತನ್ನ ಸ್ಫೂರ್ತಿದಾಯಕ ಪ್ರಯಾಣದುದ್ದಕ್ಕೂ ಪತಿಯಿಂದ ಪಡೆದ ಬೆಂಬಲ ಪಡೆದಿದ್ದೆ ಎಂಬುದನ್ನೂ ಅವರು ಹೇಳಿಕೊಂಡಿದ್ದಾರೆ.
“ನನ್ನ ಪತಿ ಇಬ್ರಾಹಿಂ ಮತ್ತು ನನ್ನ ಕುಟುಂಬದ ವಿಶ್ವಾಸವನ್ನು ಪಡೆದಿರುವುದು ನನ್ನ ಅದೃಷ್ಟ. ಈ ನಿರ್ದಿಷ್ಟ ಒಲಿಂಪಿಕ್ಸ್ ವಿಭಿನ್ನವಾಗಿತ್ತು. ಮೂರು ಬಾರಿ ಒಲಿಂಪಿಯನ್ ಆಗಿರುವ ನಾನು ಈ ಬಾರಿ ಪುಟ್ಟ ಒಲಿಂಪಿಯನ್ ಒಬ್ಬರನ್ನು ಹೊತ್ತೊಯ್ಯುತ್ತಿದ್ದೇನೆ ” ಎಂದು ಹಫೀಜ್ ಹೇಳಿದರು. 2016ರ ರಿಯೋ ಒಲಿಂಪಿಕ್ಸ್ ಹಾಗೂ 2021ರ ಟೋಕಿಯೊ ಒಲಿಂಪಿಕ್ಸ್ನಲ್ಲಿ ಈಜಿಪ್ಟ್ ತಂಡವನ್ನು ಪ್ರತಿನಿಧಿಸಿದ್ದರು