Site icon Vistara News

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ಗೆ ತೆರೆ; ಅದ್ಧೂರಿ ಸಮಾರೋಪದಲ್ಲಿ ಮನು ಭಾಕರ್​, ಶ್ರೀಜೇಶ್​ ಭಾಗಿ

ಬೆಂಗಳೂರು : ಪ್ಯಾರಿಸ್​ ಒಲಿಂಪಿಕ್ಸ್​​ನ ಕ್ರೀಡಾಕೂಟ (Paris Olympics 2024) ಭಾನುವಾರ ಮುಕ್ತಾಯಗೊಂಡಿತು. ಅಮೆರಿಕ ಮತ್ತು ಫ್ರಾನ್ಸ್​ನಡುವಿನ ಮಹಿಳೆಯರ ತಂಡಗಳ ಬಾಸ್ಕೆಟ್​ಬಾಲ್​ ಚಿನ್ನದ ಪದಕದ ಪಂದ್ಯ ಕೂಟದ ಕೊನೇ ಹಣಾಹಣಿಯಾಗಿತ್ತು. ಆ ಬಳಿಕ ಅದ್ಧೂರಿ ಸಮಾರಂಭ ನಡೆಯಿತು. ಭಾರತದ ಕಂಚಿನ ಪದಕಗಳ ಹೀರೋಗಳಾದ ಮನು ಭಾಕರ್ ಹಾಗೂ ಹಾಕಿ ಆಟಗಾರ ಶ್ರೀಜೇಶ್ ತ್ರಿವರ್ಣ ಧ್ವಜಧಾರಿಗಳಾಗಿ ಸಮಾರೋಪ ಸಮಾರಂಭದ ಪರೇಡ್​ನಲ್ಲಿ ಪಾಲ್ಗೊಂಡರು. ಬೃಹತ್ ಸಂಖ್ಯೆಯ ಕ್ರೀಡಾಭಿಮಾನಿಗಳು ಹಾಗೂ ಪ್ರೇಕ್ಷಕರ ಸಮ್ಮುಖದಲ್ಲಿ ನಡೆದ ಪರೇಡ್​ನಲ್ಲಿ ಭಾರತೀಯ ತಾರೆಗಳು ಪಾಲ್ಗೊಂಡರು. ಆ ಬಳಿಕ ವರ್ಣರಂಜಿತ ಕಾರ್ಯಕ್ರಮಗಳು ನಡೆದವು.

ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತದ ಅಭಿಯಾನವು 6 ಪದಕಗಳನ್ನು ಗೆಲ್ಲುವ ಮೂಲಕ ಕೊನೆಗೊಂಡಿತು. ಮನು ಭಾಕರ್ ಎರಡು ಕಂಚಿನ ಪದಕಗಳನ್ನು ಗೆದ್ದರೆ, ಸರಬ್ಜೋತ್ ಸಿಂಗ್, ಸ್ವಪ್ನಿಲ್ ಕುಸಲೆ, ಅಮನ್ ಸೆಹ್ರಾವತ್ ಮತ್ತು ಭಾರತೀಯ ಹಾಕಿ ತಂಡವು ತಲಾ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿತು. ಜಾವೆಲಿನ್ ಸ್ಟಾರ್​ ನೀರಜ್ ಚೋಪ್ರಾ ಪ್ಯಾರಿಸ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.

ಅಮೆರಿಕ ಅಮೆರಿಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಸಾಂಪ್ರದಾಯಿಕ ಎದುರಾಳಿ ಚೀನಾವನ್ನು ಕೂದಲೆಳೆಯ ಅಂತರದಿಂದ ಹಿಂದಿಕ್ಕಿದೆ. ಯುನೈಟೆಡ್ ಸ್ಟೇಟ್ಸ್ ಮತ್ತು ಫ್ರಾನ್ಸ್ ನಡುವಿನ ಮಹಿಳಾ ಬ್ಯಾಸ್ಕೆಟ್​​ಬಾಲ್​ ಒಲಿಂಪಿಕ್ಸ್​ನ ಕೊನೇ ಸ್ಪರ್ಧೆಯಾಗಿತ್ತು. ಅಲ್ಲಿ ಅಮೆರಿಕ ಚಿನ್ನ ಗೆದ್ದುಕೊಂಡಿತ್ತು. ಅಲ್ಲಿ ತನಕ ಚೀನಾ 40 ಚಿನ್ನದೊಂದಿಗೆ ಮೊದಲ ಸ್ಥಾನದಲ್ಲಿತ್ತು.. ಅಮೆರಿಕ ಬಾಸ್ಕೆಟ್​ಬಾಲ್​ ಗೆಲ್ಲುವುದರೊಂದಿಗೆ ಅಮೆರಿಕ 40 ಚಿನ್ನ ಗೆದ್ದುಕೊಂಡಿತು. ಜತೆಗೆ ಪದಕ ಪಟ್ಟಿಯಲ್ಲಿ ಬೆಳ್ಳಿ ಹಾಗೂ ಕಂಚಿನ ಸಹಾಯದಿಂದ ಅಗ್ರಸ್ಥಾನಕ್ಕೆ ಏರಿತು. ಈ ಮೂಲಕ ಅಮೆರಿಕನ್ನರು ಸತತ ನಾಲ್ಕನೇ ಬಾರಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿತು.

ಫ್ರಾನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ಅಮೆರಿಕ 67-66 ಅಂಕಗಳಿಂದ ಫ್ರಾನ್ಸ್ ತಂಡವನ್ನು ಮಣಿಸಿತು. ಅಮೆರಿಕ 40 ಚಿನ್ನ, 44 ಬೆಳ್ಳಿ ಮತ್ತು 42 ಕಂಚಿನ ಪದಕಗಳು ಸೇರಿದಂತೆ 126 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮತ್ತೊಂದೆಡೆ, ಚೀನಾ 40 ಚಿನ್ನದ ಪದಕಗಳು ಸೇರಿದಂತೆ 91 ಪದಕಗಳೊಂದಿಗೆ ಕ್ರೀಡಾಕೂಟವನ್ನು ಕೊನೆಗೊಳಿಸಿತು. 2008ರಲ್ಲಿ ಬೀಜಿಂಗ್​​ನಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಚೀನಾ 48 ಚಿನ್ನದ ಪದಕಗಳೊಂದಿಗೆ ಅಗ್ರಸ್ಥಾನ ಪಡೆದುಕೊಂಡಿತ್ತು.

ಇದನ್ನೂ ಓದಿ: PR Sreejesh : ಮಲ್ಲು ಸ್ಟೈಲಲ್ಲಿ ಮುಂಡು ಉಟ್ಟು ಐಫೆಲ್ ಟವರ್ ಮುಂದೆ ಫೋಟೋ ತೆಗಿಸಿಕೊಂಡ ಪಿ.ಆರ್​ ಶ್ರೀಜೇಶ್​​

ಡೈವಿಂಗ್, ಕಲಾತ್ಮಕ ಈಜು ಮತ್ತು ಟೇಬಲ್ ಟೆನಿಸ್ ಮತ್ತು ವೇಟ್ ಲಿಫ್ಟಿಂಗ್ ಸೇರಿದಂತೆ ಪೂಲ್ ಸ್ಪರ್ಧೆಗಳಲ್ಲಿ ಚೀನಾ ಪ್ರಾಬಲ್ಯ ಸಾಧಿಸಿದರೆ, ಯುಎಸ್ಎ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಗಳಲ್ಲಿ 14 ಚಿನ್ನದ ಪದಕಗಳು, 11 ಬೆಳ್ಳಿ ಪದಕಗಳು ಮತ್ತು 9 ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ತನ್ನ ಶಕ್ತಿ ಪ್ರದರ್ಶಿಸಿತು. ಇಲ್ಲಿ ಅಮೆರಿಕನ್ನರು ಎಂಟು ಚಿನ್ನದ ಪದಕಗಳು ಸೇರಿದಂತೆ ಒಟ್ಟು 28 ಪದಕಗಳನ್ನು ಗೆದ್ದರು.

ಭಾರತಕ್ಕೆ 71ನೇ ಸ್ಥಾನ

ಭಾರತ 5 ಕಂಚು, 1 ಬೆಳ್ಳಿ ಸೇರಿದಂತೆ ಒಟ್ಟು 6 ಪದಕಗಳೊಂದಿಗೆ 71ನೇ ಸ್ಥಾನದಲ್ಲಿದೆ. ಮಹಿಳೆಯರ 50 ಕೆ.ಜಿ ಕುಸ್ತಿಯ ಫೈನಲ್ ತಲುಪಿದ ವಿನೇಶ್ ಫೋಗಟ್ ತನ್ನ ಅನರ್ಹತೆಯನ್ನು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ (ಸಿಎಎಸ್) ಪ್ರಶ್ನಿಸಿದ್ದರಿಂದ ಭಾರತಕ್ಕೆ ನಿರ್ಧಾರ ಪೂರಕವಾಗಿ ಬಂದರೆ ತನ್ನ ಪಟ್ಟಿಗೆ ಇನ್ನೂ ಒಂದು ಪದಕ ಸೇರಿಸಬಹುದು. ಫೈನಲ್ ಪಂದ್ಯದ ವೇಳೆ 100 ಗ್ರಾಂ ತೂಕ ಹೊಂದಿದ್ದಕ್ಕಾಗಿ ವಿನೇಶ್ ಅವರನ್ನು ಅನರ್ಹಗೊಳಿಸಲಾಗಿತ್ತು. ಪಾಕಿಸ್ತಾನ 44 ವರ್ಷಗಳ ಬಳಿಕ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದರು.

ಜಪಾನ್ 20 ಚಿನ್ನ ಸೇರಿದಂತೆ 45 ಪದಕಗಳೊಂದಿಗೆ ಮೂರನೇ ಸ್ಥಾನ ಪಡೆಯಿತು. ಟೋಕಿಯೊ ಒಲಿಂಪಿಕ್ಸ್​ನಲ್ಲಿ ಜಪಾನ್ 27 ಚಿನ್ನದ ಪದಕಗಳೊಂದಿಗೆ ಮೂರನೇ ಸ್ಥಾನ ಪಡೆದಿತ್ತು.

ವಿಶ್ವದಾದ್ಯಂತದ ಕ್ರೀಡಾ ಲೀಗ್​ಗಳಲ್ಲಿ ಅಂಕಿ ಅಂಶ ವಿಶ್ಲೇಷಣೆ ಮಾಡುವ ಪೋರ್ಟಲ್ ನೀಲ್ಸನ್​ನ ಗ್ರೇಸ್ನೋಟ್ ಸ್ಪೋರ್ಟ್ಸ್, ಗ್ರೇಟ್ ಬ್ರಿಟನ್ ಅಗ್ರ ಮೂರರಲ್ಲಿ ಸ್ಥಾನ ಪಡೆಯುತ್ತದೆ ಮತ್ತು ಜಪಾನ್ ಮೂರು ವರ್ಷಗಳ ಹಿಂದೆ ಸ್ವದೇಶದಲ್ಲಿ ಗೆದ್ದ ಚಿನ್ನದ ಪದಕಗಳಲ್ಲಿ ಅರ್ಧದಷ್ಟು ಮಾತ್ರ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿತ್ತು. ಅದು ಸುಳ್ಳಾಗಿದೆ.

ಗ್ರೇಟ್ ಬ್ರಿಟನ್ 14 ಚಿನ್ನದ ಪದಕಗಳೊಂದಿಗೆ ಏಳನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ 18 ಚಿನ್ನದ ಪದಕಗಳನ್ನು ಗೆದ್ದು ಅಗ್ರ ನಾಲ್ಕು ಸ್ಥಾನಗಳನ್ನು ಗಳಿಸಿದೆ. ಆತಿಥೇಯ ಫ್ರಾನ್ಸ್ 16 ಚಿನ್ನದ ಪದಕಗಳೊಂದಿಗೆ ಅಗ್ರ 5ನೇ ಸ್ಥಾನ ಪಡೆದಿದೆ

Exit mobile version