Site icon Vistara News

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾಪಟುಗಳಿಗೆ ಸಿಕ್ಕಿದ ಕೋಟಿಗಟ್ಟಲೆ ಬಹುಮಾನಗಳ ವಿವರ ಇಲ್ಲಿದೆ

Paris Olympics 2024

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ (Paris Olympics 2024) ಭಾರತದ ಕ್ರೀಡಾಪಟುಗಳು ಆರು ಪದಕಗಳನ್ನು ಮಾತ್ರ ಗೆದ್ದುಕೊಂಡಿದ್ದಾರೆ. ಜಪಾನ್​​ನ ರಾಜಧಾನಿ ಟೋಕಿಯೊದಲ್ಲಿ 2021ರಲ್ಲಿ ನಡೆದ ಹಿಂದಿನ ಒಲಿಂಪಿಕ್ಸ್​ನಲ್ಲಿ ಭಾರತ ಒಂದು ಚಿನ್ನದ ಸಮೇತ ಉತ್ತಮ ಸಾಧನೆ ಮಾಡಿತ್ತು. ಹೀಗಾಗಿ ಇದು ಕಡಿಮೆಯಾಗಿದೆ. ಏಕೆಂದರೆ ಅನೇಕ ಕ್ರೀಡಾಪಟುಗಳು ತಮ್ಮ ವಿಭಾಗಗಳಲ್ಲಿ 4ನೇ ಸ್ಥಾನ ಪಡೆದಿದ್ದಾರೆ. ಈ ಮೂಲಕ ಕಡಿಮೆ ಅಂತರದಿಂದ ಪದಕ ಕಳೆದುಕೊಂಡಿದ್ದಾರೆ. ಭಾರತ ಪರ ಶೂಟರ್ ಮನು ಭಾಕರ್ ಎರಡು ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದಿದ್ದಾರೆ. ನಾಯಕ ಹರ್ಮನ್ ಪ್ರೀತ್ ಸಿಂಗ್ ಅವರ ಉತ್ತಮ ಪ್ರದರ್ಶನದಿಂದಾಗಿ ಭಾರತೀಯ ಪುರುಷರ ಹಾಕಿ ತಂಡವು ಒಲಿಂಪಿಕ್ಸ್ ನಲ್ಲಿ ಸತತ ಎರಡನೇ ಕಂಚಿನ ಪದಕ ಗೆದ್ದುಕೊಂಡಿತು. ಈ ರೀತಿಯಾಗಿ ಪದಕ ಗೆದ್ದವರಿಗೆ ಆಯಾ ರಾಜ್ಯ ಹಾಗೂ ಕ್ರೀಡಾ ಇಲಾಖೆಯಿಂದ ಸಾಕಷ್ಟು ಬಹುಮಾನಗಳು ಸಿಕ್ಕಿವೆ. ಅವುಗಳ ವಿವರ ಇಲ್ಲಿದೆ.

ಮನು ಭಾಕರ್ (ಶೂಟಿಂಗ್)

ಒಲಿಂಪಿಕ್ಸ್ ನ ಒಂದೇ ಆವೃತ್ತಿಯಲ್ಲಿ ಎರಡು ಪದಕಗಳನ್ನು ಗೆದ್ದ ಸ್ವತಂತ್ರ ಭಾರತದ ಮೊದಲ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಮನು ಭಾಕರ್ ಪಾತ್ರರಾಗಿದ್ದಾರೆ. ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ಅವರಿಗೆ 30 ಲಕ್ಷ ರೂ.ಗಳ ನಗದು ಬಹುಮಾನವನ್ನು ಪ್ರದಾನ ಮಾಡಿದ್ದಾರೆ. ಅವರ ತವರೂರು ಹರಿಯಾಣ ರಾಜ್ಯ ಸರ್ಕಾರದಿಂದಲೂ ಒಂದು ಕೋಟಿ ರೂಪಾಯಿ ಸಿಕ್ಕಿದೆ.

ಸರಬ್ಜೋತ್ ಸಿಂಗ್ (ಶೂಟಿಂಗ್)

10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೋತ್ ಸಿಂಗ್ ಮನು ಭಾಕರ್ ಅವರೊಂದಿಗೆ ಕಂಚಿನ ಪದಕ ಗೆದ್ದರು. ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದ ನಗದು ಪ್ರಶಸ್ತಿ ಯೋಜನೆಯ ಮೂಲಕ ಅಂಬಾಲಾದ 22 ವರ್ಷದ ಯುವ ಆಟಗಾರ್ತಿಗೆ ಮನ್ಸುಖ್ ಮಾಂಡವಿಯಾ ಅವರು 22.5 ಲಕ್ಷ ರೂ.ಗಳ ಚೆಕ್ ನೀಡಿದ್ದಾರೆ. ಹರಿಯಾಣ ಸರ್ಕಾರವು ಅವರಿಗೆ ಉದ್ಯೋಗ ಕೆಲಸ ನೀಡಿತು. ಆದರೆ ಅವರು ಈ ಪ್ರಸ್ತಾಪ ನಿರಾಕರಿಸಿದ್ದು ಇನ್ನಷ್ಟು ಸಾಧನೆ ಮಾಡುವುದಾಗಿ ಹೇಳಿದ್ದಾರೆ.

ಸ್ವಪ್ನಿಲ್ ಕುಸಾಲೆ (ಶೂಟಿಂಗ್)

ಒಲಿಂಪಿಕ್ಸ್​​ನ ಪುರುಷರ 50 ಮೀಟರ್ ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಸ್ವಪ್ನಿಲ್ ಕುಸಾಲೆ ಕಂಚಿನ ಪದಕ ಗೆದ್ದ ಮೊದಲ ಭಾರತೀಯ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಬಳಿಕ ಸ್ವಪ್ನಿಲ್ ಅವರನ್ನು ಕೇಂದ್ರ ರೈಲ್ವೆ ಇಲಾಖೆ ವಿಶೇಷ ಅಧಿಕಾರಿಯಾಗಿ ಬಡ್ತಿ ನೀಡಿದೆ. ಅದಕ್ಕಿಂತ ಮೊದಲು ಅವರು ಟಿಕೆಟ್​ ಕಲೆಕ್ಟರ್ ಆಗಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಂದ 1 ಕೋಟಿ ರೂ.ಗಳ ಬಹುಮಾನ ನೀಡಿದ್ದಾರೆ.

ಭಾರತೀಯ ಪುರುಷರ ಹಾಕಿ ತಂಡ

ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಭಾರತ ಪುರುಷರ ಹಾಕಿ ತಂಡ ಒಲಿಂಪಿಕ್ಸ್​​ನಲ್ಲಿ ಸತತ ಎರಡನೇ ಕಂಚಿನ ಪದಕ ಗೆದ್ದಿದೆ. ಹಾಕಿ ಇಂಡಿಯಾ ತಂಡದ ಪ್ರತಿಯೊಬ್ಬ ಸದಸ್ಯರಿಗೆ 15 ಲಕ್ಷ ರೂ., ಸಹಾಯಕ ಸಿಬ್ಬಂದಿಗೆ 7.5 ಲಕ್ಷ ರೂ.ಗಳ ನಗದು ಬಹುಮಾನವನ್ನು ಘೋಷಿಸಿದೆ. ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಂಝಿ ಅವರು ಡಿಫೆಂಡರ್ ಅಮಿತ್ ರೋಹಿದಾಸ್ ಅವರಿಗೆ 4 ಕೋಟಿ ರೂ.ಗಳ ಬಹುಮಾನ ಘೋಷಿಸಿದ್ದಾರೆ. ಇದೇ ವೇಳೆ ತಂಡದ ಪ್ರತಿ ಆಟಗಾರನಿಗೆ 15 ಲಕ್ಷ ರೂ., ಸಹಾಯಕ ಸಿಬ್ಬಂದಿಗೆ 10 ಲಕ್ಷ ರೂ. ಪ್ರಕಟಿಸಿದ್ದಾರೆ. ಪಂಜಾಬ್​​ನ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ರಾಜ್ಯಕ್ಕೆ ಸೇರಿದ ಎಲ್ಲಾ ತಂಡದ ಸದಸ್ಯರಿಗೆ 1 ಕೋಟಿ ರೂ.ಗಳ ಬಹುಮಾನ ಘೋಷಿಸಿದ್ದಾರೆ.

ನೀರಜ್ ಚೋಪ್ರಾ

ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದರೆ, ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ಎಸೆಯುವ ಮೂಲಕ ಒಲಿಂಪಿಕ್ ದಾಖಲೆಯನ್ನು ಮುರಿದರು. ನೀರಜ್ ಅವರ ನಗದು ಬಹುಮಾನಗಳ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಮಾಡಲಾಗಿಲ್ಲ. ಅವರು ವಿವಿಧ ಮೂಲಗಳಿಂದ ಅನೇಕ ಪ್ರಶಸ್ತಿಗಳನ್ನು ಸ್ವೀಕರಿಸುವ ನಿರೀಕ್ಷೆಯಿದೆ. 2021 ರಲ್ಲಿ, ಟೋಕಿಯೊ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆದ್ದಾಗ, ಹರಿಯಾಣ ಸರ್ಕಾರವು ಅವರಿಗೆ 6 ಕೋಟಿ ರೂ.ಗಳ ನಗದು ಬಹುಮಾನ ನೀಡಿತ್ತು.

ಇದನ್ನೂ ಓದಿ: Paris Olympics 2024: 6 ಪದಕಗಳನ್ನು ಹೊರತುಪಡಿಸಿ ಪ್ಯಾರಿಸ್​​ ಒಲಿಂಪಿಕ್ಸ್​ನಲ್ಲಿ ಭಾರತದ ಸಾಧನೆಗಳು ಹಲವು…

ಅಮನ್ ಸೆಹ್ರಾವತ್​ (ಕುಸ್ತಿ)

ಪ್ಯಾರಿಸ್ ಒಲಿಂಪಿಕ್ಸ್ 2024 ರಲ್ಲಿ 57 ಕೆ.ಜಿ ಫ್ರೀಸ್ಟೈಲ್ ಕುಸ್ತಿ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಏಕೈಕ ಭಾರತೀಯ ಕುಸ್ತಿಪಟು ಅಮನ್ ಸೆಹ್ರಾವತ್. ಒಲಿಂಪಿಕ್ಸ್ ಪದಕ ಗೆದ್ದ ಅತ್ಯಂತ ಕಿರಿಯ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಅವರು ಪಡೆಯುವ ನಗದು ಬಹುಮಾನಗಳ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಮಾಡಲಾಗಿಲ್ಲ.

Exit mobile version