ಬೆಂಗಳೂರು: ಭಾರತದ ಯುವ ಷಟ್ಲರ್ ಲಕ್ಷ್ಯ ಸೇನ್ ಪ್ಯಾರಿಸ್ ಒಲಿಂಪಿಕ್ಸ್ (Paris Olympics 2024) ಕಂಚಿನ ಪದಕವನ್ನೂ ಕಳೆದುಕೊಂಡಿದ್ದಾರೆ. ಪುರುಷರ ಸಿಂಗಲ್ಸ್ನ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ 22 ವರ್ಷದ ಶಟ್ಲರ್ ಮಲೇಷ್ಯಾದ ಲೀ ಜಿ ಜಿಯಾ ವಿರುದ್ಧ 21-13, 16-21, 11-21 ಅಂತರದಲ್ಲಿ ಸೋತರು. 71 ನಿಮಿಷಗಳ ಪಂದ್ಯದ ನಡುವೆ ಗಾಯಗೊಂಡ ಅವರು ಉತ್ತಮವಾಗಿ ಪ್ರದರ್ಶನ ನೀಡಲು ಸಾಧ್ಯವಾಗದೇ ಸೋಲೊಪ್ಪಿಕೊಂಡರು. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಇದು ಭಾರತಕ್ಕೆ ಮತ್ತೊಂದು ಆಘಾತ ಹಾಗೂ ಕಳೆದ 12 ವರ್ಷಗಳಲ್ಲಿ ಮೊದಲ ಬಾರಿಗೆ ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಪದಕ ಸಿಕ್ಕಿಲ್ಲ.
.@lakshya_sen, you’ve made Bharat proud with your remarkable effort in Men's Singles Badminton at #ParisOlympics2024!
— Kiren Rijiju (@KirenRijiju) August 5, 2024
Coming so close to the medal shows your unwavering spirit & commitment.
Your journey is a testament to true sportsmanship.
Keep shining, Lakshya!… pic.twitter.com/1Cdm4ixAtL
ಆರಂಭಿಕ ಗೇಮ್ ನಲ್ಲಿ ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಲೀ ಅವರನ್ನು 21-13ರಿಂದ ಮಣಿಸಿದ ಲಕ್ಷ್ಯ ಸೇನ್ ಉತ್ತಮ ಆರಂಭ ಕಂಡರು. ಆದಾಗ್ಯೂ, ಎರಡನೇ ಮತ್ತು ಮೂರನೇ ಗೇಮ್ ಗಳಲ್ಲಿ ಲೀ ತನ್ನ ಅನುಭವ ಬಳಸಿಕೊಂಡರು. ಲಕ್ಷ್ಯ ಅವರ ಆಕ್ರಮಣಕಾರಿ ಆಟಕ್ಕೆ ಸರಿಯಾಗಿ ಸೆಡ್ಡು ಹೊಡೆದರು.
ಪ್ಯಾರಿಸ್ನಲ್ಲಿ ತನ್ನ ಕನಸಿನ ಓಟವನ್ನು ಕಹಿ ಸೋಲಿನೊಂದಿಗೆ ಮುಗಿಸಿದರು. ಲಕ್ಷ್ಯ ಸೇನ್ ಕಳೆದ ವಾರ ಉನ್ನತ ಶ್ರೇಯಾಂಕದ ಚೌ ಟಿಯೆನ್ ಚೆನ್ ಅವರನ್ನು ಸೋಲಿಸಿದ ನಂತರ ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ ಸಿಂಗಲ್ಸ್ ಸೆಮಿಫೈನಲ್ ತಲುಪಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದಾಗ್ಯೂ, ಅವರು ಟೋಕಿಯೊ ಒಲಿಂಪಿಕ್ ಚಾಂಪಿಯನ್ ವಿಕ್ಟರ್ ಅಕ್ಸೆಲ್ಸೆನ್ ವಿರುದ್ಧ ನೇರ ಗೇಮ್ಸ್ಗಳಲ್ಲಿ ಸೋತರು. ಕ್ರೀಡಾಕೂಟದಲ್ಲಿ ತಮ್ಮ ಕೊನೆಯ ಪಂದ್ಯದಲ್ಲಿ ಉನ್ನತ ಶ್ರೇಯಾಂಕದ ಲೀ ವಿರುದ್ಧ ಸೋತರು.
ಕಂಚಿನ ಪದಕದ ಪಂದ್ಯದಲ್ಲಿ ಲಕ್ಷ್ಯ ಸೇನ್ ಸೋತ ನಂತರ, ಭಾರತೀಯ ಷಟ್ಲರ್ಗಳು ಪ್ಯಾರಿಸ್ ಒಲಿಂಪಿಕ್ಸ್ನಿಂದ ಬರಿಗೈಯಲ್ಲಿ ಮರಳಲಿದ್ದಾರೆ. 2008ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಒಲಿಂಪಿಕ್ಸ್ನಲ್ಲಿ ಬ್ಯಾಡ್ಮಿಂಟನ್ ಪದಕ ಗೆಲ್ಲಲು ವಿಫಲವಾಗಿದೆ. ಸೈನಾ ನೆಹ್ವಾಲ್ ಲಂಡನ್ ಕ್ರೀಡಾಕೂಟದಲ್ಲಿ ಕಂಚು ಗೆದ್ದರೆ, ಪಿ.ವಿ.ಸಿಂಧು 2016 ರ ರಿಯೋದಲ್ಲಿ ಬೆಳ್ಳಿ ಮತ್ತು 2021 ರಲ್ಲಿ ಟೋಕಿಯೊದಲ್ಲಿ ಕಂಚು ಗೆದ್ದಿದ್ದರು.