Site icon Vistara News

Paris Olympics 2024 : ಷಟ್ಲರ್​ಗಳ ಪರಾಕ್ರಮ ಆರಂಭ; ಸಿಂಗಲ್ಸ್​ನಲ್ಲಿ ಲಕ್ಷ್ಯ ಸೇನ್​, ಡಬಲ್ಸ್​ನಲ್ಲಿ ಸಾತ್ವಿಕ್​- ಚಿರಾಗ್ ಜೋಡಿಗೆ ಗೆಲುವು

Paris Olympics 2024

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನ (Paris Olympics 2024) ಮೊದಲ ದಿನ ಭಾರತದ ಷಟ್ಲರ್​ಗಳು ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ. ಸಿಂಗಲ್ಸ್​ನಲ್ಲಿ ಲಕ್ಷ್ಯ ಸೇನ್ ಹಾಗೂ ಡಬಲ್ಸ್​ ಜೋಡಿಯಾಗಿರು ಸಾತ್ವಿಕ್ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ತಮ್ಮ ಮೊಲದ ಪಂದ್ಯಗಳಲ್ಲಿ ಗೆಲುವು ಕಂಡಿದ್ದಾರೆ. ಇದೇ ವೇಳೆ ಟೇಬಲ್ ಟೆನಿಸ್​ನ ಪುರುಷರ ಸಿಂಗಲ್ಸ್​ನಲ್ಲಿ ಹರ್ಮೀತ್ ದೇಸಾಯಿ 64ನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಜತೆಗೆ ಹಾಕಿ ತಂಡವೂ ಬಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವನ್ನು ಮಣಿಸಿದೆ.

ಬೆಳಗ್ಗಿನ ಅವಧಿಯಲ್ಲಿ ಭಾರತದ ಶೂಟರ್​ಗಳು ನಿರಾಸೆ ಮೂಡಿಸಿದ್ದರು. ಆದರೆ, ಸಂಜೆ ವೇಳೆ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್​ನಲ್ಲಿ ಫೈನಲ್ ಹಂತಕ್ಕೆ ಪ್ರವೇಶ ಪಡೆಕೊಳ್ಳುವ ಮೂಲಕ ಶುಭ ಸುದ್ದಿ ನೀಡಿದ್ದರು. ಇದೀಗ ಷಟ್ಲರ್​ಗಳು ಖುಷಿ ಕೊಟ್ಟಿದ್ದಾರೆ. ರೋಯಿಂಗ್​ನಲ್ಲಿ ಪುರುಷರ ಸಿಂಗಲ್ ಸ್ಕಲ್ಸ್ ಸ್ಪರ್ಧೆಯಲ್ಲಿ​​ ಬಲರಾಜ್ ಪನ್ವಾರ್ 4ನೇ ಸ್ಥಾನಕ್ಕೇರಿದ್ದಾರೆ.

ಬ್ಯಾಡ್ಮಿಂಟನ್​ ಸಿಂಗಲ್ಸ್ ನಲ್ಲಿ ಲಕ್ಷ್ಯ ಸೇನ್, ಗ್ವಾಟೆಮಾಲಾದ ಕೆವಿನ್ ಕಾರ್ಡನ್ ಅವರನ್ನು ನೇರ ಗೇಮ್‌ಗಳಿಂದ ಮಣಿಸಿದ್ದಾರೆ. 22ರ ಹರೆಯದ ಸೇನ್ 42 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಕಾರ್ಡನ್ ವಿರುದ್ಧ 21-8, 22-20 ಅಂತರದಲ್ಲಿ ಗೆದ್ದರು. ಅಂದ ಹಾಗೆ ಲಕ್ಷ್ಯಗೆ ಇದು ಮೊದಲ ಒಲಿಂಪಿಕ್ಸ್ ಪ್ರವೇಶ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನ ಹಾಗೂ 2021ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದ ಸೇನ್, ಜುಲೈ 29ರಂದು ತಮ್ಮ ಎರಡನೇ ಗುಂಪು ಹಂತದ ಪಂದ್ಯದಲ್ಲಿ ಬೆಲ್ಜಿಯಂನ ಜೂಲಿಯನ್ ಕರಾಗ್ಗಿ ವಿರುದ್ಧ ಆಡಲಿದ್ದಾರೆ.

ಡಬಲ್ಸ್​ನಲ್ಲಿ ಧಮಾಕ


ಡಬಲ್ಸ್​​ನಲ್ಲಿ ತಮ್ಮ ಮೊದಲ ಗುಂಪು ಹಂತದ ಪಂದ್ಯದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಗೆಲುವು ಕಂಡರು. ಈ ಮುಖಾಮುಖಿಯಲ್ಲಿ ಭಾರತದ ಜೋಡಿ 21-17, 21-14ರ ನೇರ ಗೇಮ್​ಗಳಿಂದ ಗೆದ್ದರು. ಅವರು ಆತಿಥೇಯ ಫ್ರಾನ್ಸ್​ ಜೋಡಿ ಲುಕಾಸ್ ಕಾರ್ವಿ ಮತ್ತು ರೊನಾನ್ ಲ್ಯಾಬರ್ ಅವರನ್ನು ಮಣಿಸಿದರು. ಸಾತ್ವಿಕ್-ಚಿರಾಗ್ ಮುಂದಿನ ಪಂದ್ಯದಲ್ಲಿ ಜರ್ಮನಿಯ ಮಾರ್ಕ್ ಲ್ಯಾಮ್ಸ್ಫಸ್ – ಮಾರ್ವಿನ್ ಸೀಡೆಲ್ ವಿರುದ್ಧ ಆಡಲಿದ್ದಾರೆ.

ಇದನ್ನೂ ಓದಿ: Paris Olympics 2024 : ಭಾರತ ಹಾಕಿ ತಂಡದ ಶುಭಾರಂಭ; ನ್ಯೂಜಿಲ್ಯಾಂಡ್ ವಿರುದ್ಧ 3-2 ಗೋಲ್​ಗಳ ಗೆಲುವು

ಹರ್ಮಿತ್​ಗೆ ಶುಭ ಸುದ್ದಿ

ಭಾರತದ ಟೆನಿಸ್ ಆಟಗಾರ ಹರ್ಮೀತ್ ದೇಸಾಯಿ ತಮ್ಮ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಸಿಂಗಲ್ಸ್‌ನ ಪ್ರಾಥಮಿಕ ಮೊದಲ ಪಂದ್ಯದಲ್ಲಿ, ಜೋರ್ಡಾನ್‌ನ ಝೈದ್ ಅಬೋ ಯಮನ್‌ ಅವರನ್ನು 4-0 ಅಂತರದಿಂದ (11-7, 11-9, 11-5, 11-5) ಗೆದ್ದರು.

Exit mobile version