Site icon Vistara News

Paris Oylmpics 2024 : ಹಳದಿ ಬಣ್ಣದ ಜೆರ್ಸಿಯವರನ್ನು ಸೋಲಿಸುವುದೆಂದರೆ ಖುಷಿ; ಹಾಕಿ ತಂಡದ ಗೆಲುವನ್ನು ಮುಂದಿಟ್ಟುಕೊಂಡು ಸಿಎಸ್​​ಕೆಯನ್ನು ಲೇವಡಿ ಮಾಡಿದ ಆರ್​ಸಿಬಿ

Paris Olympics 2024

ಬೆಂಗಳೂರು: ಭಾರತ ಹಾಕಿ ತಂಡ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Oylmpics 2024 ) ವಿಶೇಷವಾದ ಸಾಧನೆಯೊಂದನ್ನು ಮಾಡಿದೆ. ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧದ ಗುಂಪು ಹಂತದ ಪಂದ್ಯದಲ್ಲಿ 3-2 ಗೋಲ್​ಗಳ ಗೆಲುವು ದಾಖಲಿಸಿದೆ. ಇದು ಭಾರತಕ್ಕೆ ಒಲಿಂಪಿಕ್ಸ್​​ನಲ್ಲಿ ಆಸೀಸ್ ತಂಡದ ವಿರುದ್ಧ 52 ವರ್ಷಗಳ ಬಳಿಕ ದೊರೆತ ಜಯವಾಗಿದೆ. ಅಲ್ಲದೆ ಕಳೆದ ಒಂದು ವರ್ಷದ 8ನೇ ಮುಖಾಮುಖಿಯಲ್ಲಿ ಮೊದಲ ವಿಜಯವೂ ಹೌದು. ಆದರೆ, ಈ ಸಂದರ್ಭವನ್ನೇ ಮುಂದಿಟ್ಟುಕೊಂಡು ಐಪಿಎಲ್​ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಲೇವಡಿ ಮಾಡಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಕಿಡಿ ಹಚ್ಚಲು ಕಾರಣವಾಗಿದೆ. ಎರಡೂ ತಂಡಗಳ ಅಭಿಮಾನಿಗಳು ಈ ವಿಚಾರವಾಗಿ ಪರಸ್ಪರ ದೂಷಣೆಗಳನ್ನು ಶುರು ಮಾಡಿದ್ದಾರೆ.

ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯವನ್ನು ಸದರ್ನ್ ಡರ್ಬಿ ಎಂದು ಕರೆಯಲಾಗುತ್ತದೆ ಹಾಗೂ ಜಿದ್ದಾಜಿದ್ದಿನ ಪೈಪೋಟಿ ಗ್ಯಾರಂಟಿ. ಆಟಗಾರರ ವಿಷಯ ಬಿಡಿ. ಈ ಎರಡೂ ತಂಡಗಳ ಅಭಿಮಾನಿಗಳು ಪರಸ್ಪರ ಕಚ್ಚಾಡುವುದರಲ್ಲಿ ಫೇಮಸ್​. ಆರ್​ಸಿಬಿಯನ್ನು ಸಿಎಸ್​ಕೆ ಅಭಿಮಾನಿಗಳು ಒಂದೇ ಒಂದು ಕಪ್ ಗೆಲ್ಲದ ಗೊಡ್ಡು ತಂಡ ಎಂದು ಕರೆದರೆ, ಸಿಎಸ್​ಕೆ ಬೆಟ್ಟಿಂಗ್​ನಲ್ಲಿ ನಿಷೇಧವಾಗಿರುವ ತಂಡ ಎಂದು ಆರ್​​ಸಿಬಿ ಅಭಿಮಾನಿಗಳು ಸದಾ ಕಿಚಾಯಿಸುತ್ತಾರೆ. 2024ರ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಆರ್​ಸಿಬಿ ತಂಡ ಸಿಎಸ್​ಕೆಯನ್ನು ಸೋಲಿಸಿದ ಬಳಿಕ ಎರಡೂ ತಂಡಗಳ ಅಭಿಮಾನಿಗಳ ನಡುವೆ ನಡೆದಿರುವ ಮಾತಿನ ಸಮರ ದೊಡ್ಡ ಮಟ್ಟದ್ದರು. ಇಂಥ ಸೂಕ್ಷ್ಮವನ್ನು ಮುಂದಿಟ್ಟುಕೊಂಡ ಆರ್​ಸಿಬಿ ಸೋಶಿಯಲ್ ಮೀಡಿಯಾದ ಅಡ್ಮಿನ್​ ಆ ತಂಡದ ಕಾಲೆಳೆದಿದೆ.

ಐಪಿಎಲ್​ನಲ್ಲಿ ಆರ್​ಸಿಬಿ ಕೆಂಪು ದಿರಸನ್ನು ಹಾಕಿಕೊಂಡರೆ, ಸಿಎಸ್​ಕೆ ಹಳದಿ ಬಣ್ಣವನ್ನು ಧರಿಸುತ್ತದೆ. ಆರ್​ಸಿಬಿ ಆರಂಭದಿಂದ ಇಲ್ಲಿಯವರೆಗೆ ಹಲವು ಭಾರಿ ತಮ್ಮ ಜೆರ್ಸಿಯನ್ನು ಬದಲಾಯಿಸಿದೆ. ಆದರೆ ಸಿಎಸ್​ಕೆ ಎಂದಿದೂ ತಮ್ಮ ಯೆಲ್ಲೋ ಬಣ್ಣವನ್ನು ಬದಲಾಯಿಸಿಲ್ಲ. ಅದೇ ಬಣ್ಣದಲ್ಲಿ ಆಡಿ ಐದು ಕಪ್​ಗಳನ್ನು ಗೆದ್ದಿದೆ.

ಆರ್​​ಸಿಬಿಯ ಸೋಶಿಯಲ್​ ಮೀಡಿಯಾ ಮೆಸೇಜ್ ನೋಡಿದ ಸಿಎಸ್​ಕೆ ಅಭಿಮಾನಿಗಳು ಕೆರಳಿದ್ದಾರೆ. ಟ್ವೀಟ್​ನ ಪ್ರತಿಕ್ರಿಯೆಯೂ ಆಸಕ್ತಿಕಾರವಾಗಿದೆ. ಯೆಲ್ಲೊ ಜೆರ್ಸಿಯಿಂದ ಹೊಡೆಸಿಕೊಳ್ಳುವುದು ಕೂಡ ಖುಷಿಯ ವಿಚಾರ ಅಲ್ವೇ ಎಂದು ಒಬ್ಬರು ಕೇಳಿದರೆ, ವಿಷಲ್​ಪೋಡು ಸಿಎಸ್​​ಕೆ ಫ್ಯಾನ್​ ಪೇಜ್​, ನಾವು ಹಳದಿ ಬಣ್ಣ ಧರಿಸುವುದಕ್ಕೆ ಖುಷಿಯಿದೆ. ಆ ಕೆಂಪು ಮತ್ತು ಬಂಗಾರದ ಬಣ್ಣ ಧರಿಸಿದ್ದರೆ ನಮ್ಮ ಕತೆ ಕೇಳುವುದೇ ಬೇಡ ಎಂದು ತಿರುಗೇಟು ಕೊಟ್ಟಿದೆ.

ಹಾಖಿ ಪಂದ್ಯದಲ್ಲಿ ಏನಾಯಿತು?

ಒಲಿಂಪಿಕ್ಸ್​ನ ಡಿ ಗುಂಪಿನ ಈ ಪಂದ್ಯದಲ್ಲಿ ಭಾರತವು ಆಕ್ರಮಣಕಾರಿ ಆಟವಾಡಿತು. ಭಾರತದ ದಾಳಿಯ ಬೆದರಿಕೆಯನ್ನು ಎದುರಿಸಲು ಆಸ್ಟ್ರೇಲಿಯಾದ ಆಟಗಾರ ನಿಧಾನವಾಗಿ ಆಟ ಪ್ರಾರಂಭಿಸಿತು.

ಮೊದಲ ಕ್ವಾರ್ಟರ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ನೇತೃತ್ವದ ತಂಡ ಎರಡು ಗೋಲುಗಳ ಮುನ್ನಡೆ ಸಾಧಿಸಿತು. ಫಾರ್ವರ್ಡ್ ಆಟಗಾರ ಅಭಿಷೇಕ್ 12ನೇ ನಿಮಿಷದಲ್ಲಿ ಭಾರತದ ಪರ ಮೊದಲ ಗೋಲು ಗಳಿಸಿದರು. ಒಂದು ನಿಮಿಷದ ನಂತರ ಹರ್ಮನ್ ಪ್ರೀತ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿ ತಂಡಕ್ಕೆ 2-0 ಮುನ್ನಡೆ ತಂದುಕೊಟ್ಟರು.

ಇದನ್ನೂ ಓದಿ: Lakshya Sen : ಒಲಿಂಪಿಕ್ಸ್​ನ ಸೆಮಿ ಫೈನಲ್​ಗೇರಿ ಇತಿಹಾಸ ನಿರ್ಮಿಸಿದ ಷಟ್ಲರ್ ಲಕ್ಷ್ಯ ಸೇನ್​

25ನೇ ನಿಮಿಷದಲ್ಲಿ ಕ್ರೇಗ್ ಥಾಮಸ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿ ಅಂತರವನ್ನು ಒಂದು ಗೋಲಿಗೆ ಇಳಿಸಿದರು. 32ನೇ ನಿಮಿಷದಲ್ಲಿ ಹರ್ಮನ್ ಪ್ರೀತ್ ಮತ್ತೊಂದು ಪೆನಾಲ್ಟಿ ಕಾರ್ನರ್ ಮೂಲಕ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 55ನೇ ನಿಮಿಷದಲ್ಲಿ ಬ್ಲೇಕ್ ಗ್ರೋವರ್ ಗಳಿಸಿದ ಪೆನಾಲ್ಟಿ ಸ್ಟ್ರೋಕ್ ಮೂಲಕ ಆಸ್ಟ್ರೇಲಿಯಾ ನಾಲ್ಕನೇ ಕ್ವಾರ್ಟರ್​ನಲ್ಲಿ ಭಾರತಕ್ಕೆ ಬೆದರಿಕೆ ಒಡ್ಡಿತು. ಕೊನೆಯ ನಿಮಿಷಗಳಲ್ಲಿ ಸಮಬಲದ ಹೋರಾಟ ತೋರಿದ ಆಸೀಸ್ ಕಠಿಣ ಪ್ರಯತ್ನ ನಡೆಸಿದರೂ ಗೋಲು ಗಳಿಸಲು ವಿಫಲವಾಯಿತು.

Exit mobile version