Site icon Vistara News

Paris Olympics 2024 : ಕಂಚು ಗೆದ್ದ ಹಾಕಿ ತಂಡದ ಪಂಜಾಬ್​​ನ ಆಟಗಾರರಿಗೆ ತಲಾ 1 ಕೋಟಿ ರೂ. ಬಹುಮಾನ ಪ್ರಕಟ

Paris Olympics 2024

ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics 2024) ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡದ ಭಾಗವಾಗಿದ್ದ ತಮ್ಮ ರಾಜ್ಯದ ಎಲ್ಲಾ ಆಟಗಾರರಿಗೆ ಪಂಜಾಬ್ ಮುಖ್ಯಮಂತ್ರಿ (Punjab CM) ಭಗವಂತ್ ಮಾನ್ 1 ಕೋಟಿ ರೂಪಾಯಿ ನಗದು ಬಹುಮಾನ ಘೋಷಿಸಿದ್ದಾರೆ. ಈ ಬಹುಮಾನವು ತಮ್ಮ ಕ್ರೀಡಾ ನೀತಿಯ ಒಂದು ಭಾಗವಾಗಿದೆ ಎಂದು ಭಗವಂತ್ ಮಾನ್ ಹೇಳಿದ್ದಾರೆ. ಆಗಸ್ಟ್ 8 ರಂದು ಸ್ಪೇನ್ ತಂಡವನ್ನು 2-1 ರಿಂದ ಸೋಲಿಸಿದ ನಂತರ ಒಲಿಂಪಿಕ್ ಕಂಚಿನ ಪದಕ ಗೆದ್ದ ಆಟಗಾರರ ಖಾತೆಗೆ ಹಣ ಹೋಗಲಿದೆ. ಅಂದ ಹಾಗೆ ಹಾಕಿ ತಂಡದಲ್ಲಿ ನಾಯಕ ಹರ್ಮನ್​ಪ್ರೀತ್​ ಸಿಂಗ್ ಸೇರಿದಂತೆ 10 ಮಂದಿ ಪಂಜಾಬ್ ಆಟಗಾರರು ಇದ್ದಾರೆ.

ಭಗವಂತ್ ಮಾನ್ ಆರಂಭದಲ್ಲಿ ಭಾರತೀಯ ಹಾಕಿ ತಂಡವನ್ನು ಅಭಿನಂದಿಸಿದರು. ಬಳಿಕ ಕಂಚಿನ ವಿಜೇತರಿಗೆ ಬಹುಮಾನದ ಮೊತ್ತವನ್ನು ಘೋಷಿಸಿದ್ದಾರೆ.

“ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತೀಯ ಹಾಕಿ ತಂಡವು ಸ್ಪೇನ್ ಅನ್ನು 2-1 ಅಂತರದಿಂದ ಸೋಲಿಸಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಪ್ಯಾರಿಸ್​​ನಲ್ಲಿ ಭಾರತಕ್ಕೆ 4ನೇ ಒಲಿಂಪಿಕ್ ಪದಕ ಗೆದ್ದ ಹಾಕಿ ತಂಡದ ಆಟಗಾರರಿಗೆ ಅಭಿನಂದನೆಗಳು. ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಉಪನಾಯಕ ಹಾರ್ದಿಕ್ ಸಿಂಗ್ ಸೇರಿದಂತೆ 10 ಪಂಜಾಬಿ ಆಟಗಾರರು ಇದ್ದರು ಎಂಬುದು ನಮಗೆ ಇನ್ನಷ್ಟು ಹೆಮ್ಮೆಯ ವಿಷಯ. ತಂಡದ ಪ್ರತಿಯೊಬ್ಬ ಆಟಗಾರರೂ ಉತ್ಸಾಹದಿಂದ ಆಡಿದರು” ಎಂದು ಭಗವಂತ್ ಮಾನ್ ಟ್ವೀಟ್ ಮಾಡಿದ್ದಾರೆ.

“ನಮ್ಮ ಕ್ರೀಡಾ ನೀತಿಯ ಪ್ರಕಾರ ನಾವು ಪಂಜಾಬ್​​ ಪ್ರತಿ ಕಂಚಿನ ಪದಕ ವಿಜೇತರಿಗೆ 1 ಕೋಟಿ ರೂ.ಗಳನ್ನು ನೀಡುತ್ತೇವೆ” ಎಂದು ಭಗವಂತ್ ಮಾನ್ ಟ್ವೀಟ್ ಮಾಡಿದ್ದಾರೆ.

ಕಂಚಿನ ಪದಕ ಗೆದ್ದ ಹಾಕಿ ತಂಡದ ಆಟಗಾರರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

ಬೆಂಗಳೂರು: ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಸತತ ಎರಡನೇ ಕಂಚಿನ ಪದಕ ಗೆದ್ದ ಭಾರತೀಯ ಹಾಕಿ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಪ್ಯಾರಿಸ್​​ನಲ್ಲಿ (Paris Olympics 2024) ನಡೆದ ಕಂಚಿನ ಪದಕ ಪಂದ್ಯದಲ್ಲಿ ಸ್ಪೇನ್ ವಿರುದ್ಧ ಗೆದ್ದ ಕೆಲವೇ ಕ್ಷಣಗಳಲ್ಲಿ ಪ್ರಧಾನಿ ಮೋದಿ ಭಾರತೀಯ ಹಾಕಿ ತಂಡಕ್ಕೆ ಕರೆ ಮಾಡಿದರು. ಸ್ಪೇನ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಭಾರತ ಕಂಚಿನ ಪದಕ ತನ್ನದಾಗಿಸಿಕೊಂಡಿತು. ಭಾರತ ತಂಡ ಜರ್ಮನಿ ವಿರುದ್ಧದ ಸೆಮಿಫೈನಲ್​​ನಲ್ಲಿ 2-3 ಗೋಲುಗಳಿಂದ ಸೋಲನುಭವಿಸಿ ಫೈನಲ್ ತಲುಪಲು ವಿಫಲವಾಗಿತ್ತು.

ಇದನ್ನೂ ಓದಿ: Chess Player : ಪ್ರತಿಸ್ಪರ್ಧಿಗೆ ವಿಷ ಹಾಕಿ ಕೊಲ್ಲಲು ಯತ್ನಿಸಿದ ರಷ್ಯಾದ ಚೆಸ್ ಆಟಗಾರ್ತಿ; ಇಲ್ಲಿದೆ ವಿಡಿಯೊ

ಪಿಎಂ ಮೋದಿ ಇಡೀ ತಂಡವನ್ನು ಅವರೆಲ್ಲರ ಐತಿಹಾಸಿಕ ಸಾಧನೆಗಾಗಿ ಅಭಿನಂದಿಸಿದರು. ಇದು ಕೌಶಲ್ಯ, ಪರಿಶ್ರಮ ಮತ್ತು ತಂಡದ ಮನೋಭಾವದ ಯಶಸ್ಸು ಎಂದು ಬಣ್ಣಿಸಿದರು. ಈ ಸಾಧನೆಯು ಯುವಜನರಲ್ಲಿ ಹಾಕಿಯನ್ನು ಇನ್ನಷ್ಟು ಜನಪ್ರಿಯಗೊಳಿಸುತ್ತದೆ ಎಂದು ಪ್ರಧಾನಿ ಹೇಳಿದರು.

52 ವರ್ಷಗಳ ನಂತರ ಭಾರತವು ಕ್ರೀಡಾಕೂಟದಲ್ಲಿ ಸತತ ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. 1972ರ ಒಲಿಂಪಿಕ್ಸ್​ನಲ್ಲಿ ಭಾರತ ಕೊನೆಯ ಬಾರಿ ಸತತ ಪದಕಗಳನ್ನು ಗೆದ್ದಿತ್ತು. 96 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಭಾರತವು ಎಂಟು ಚಿನ್ನ, ಒಂದು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ 14 ಪದಕಗಳನ್ನು ಗೆದ್ದಿದೆ.

Exit mobile version