Site icon Vistara News

Paris Olympics 2024 : ಒಲಿಂಪಿಕ್ಸ್ ಕ್ವಾರ್ಟರ್​ಫೈನಲ್​ಗೇರಿ ದಾಖಲೆ ಸೃಷ್ಟಿಸಿದ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್​- ಚಿರಾಗ್​

Paris Olympics 2024 :Satwik-Chirag reach men's doubles quarter-finals

ಬೆಂಗಳೂರು: ಭಾರತದ ಪುರುಷರ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ (Paris Olympics 2024) ಕ್ವಾರ್ಟರ್ ಫೈನಲ್ಸ್​​ ತಲುಪಿದ್ದಾರೆ. ಈ ಮೂಲಕ ಅವರು ಒಲಿಂಪಿಕ್ಸ್​ನಲ್ಲಿ ಎಂಟರ ಘಟ್ಟಕ್ಕೇರಿದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗುಂಪು ಹಂತದಲ್ಲಿ ಇವರಿಬ್ಬರ ಪ್ರಭಾವಶಾಲಿ ಪ್ರದರ್ಶನವು ಪ್ಯಾರಿಸ್ ಒಲಿಂಪಿಕ್ಸ್ ನ ಕೊನೆಯ ಎಂಟರಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಂಡಿತು. ಸಾತ್ವಿಕ್-ಚಿರಾಗ್ ಜರ್ಮನಿಯ ಮಾರ್ಕ್ ಲ್ಯಾಮ್ಸ್ಫಸ್ ಮತ್ತು ಮಾರ್ವಿನ್ ಸೀಡೆಲ್ ಅವರನ್ನು ಎದುರಿಸಬೇಕಿತ್ತು, ಆದರೆ ಲ್ಯಾಮ್ಸ್ಫಸ್ ಅವರ ಗಾಯದಿಂದಾಗಿ ಜರ್ಮನ್ ಜೋಡಿ ಹಿಂದೆ ಸರಿದರು. ಹೀಗಾಗಿ ಕ್ವಾರ್ಟರ್​ ಫೈನಲ್ ಸ್ಥಾನ ಖಚಿತಪಡಿಸಿಕೊಂಡರು.

ವಿಶ್ವದ 3ನೇ ಶ್ರೇಯಾಂಕಿತ ಜೋಡಿ ಪ್ಯಾರಿಸ್ 2024ರ ಅಭಿಯಾನವನ್ನು 40ನೇ ಶ್ರೇಯಾಂಕಿತ ಫ್ರಾನ್ಸ್ನ ಲ್ಯೂಕಾಸ್ ಕಾರ್ವಿ ಮತ್ತು ರೋನನ್ ಲಾಬರ್ ವಿರುದ್ಧ ಜಯಗಳಿಸುವ ಮೂಲಕ ಆರಂಭಿಸಿತು. ಕಾರ್ವಿ ಮತ್ತು ಲಾಬರ್ ನಂತರ ವಿಶ್ವದ 7 ನೇ ಶ್ರೇಯಾಂಕದ ಇಂಡೋನೇಷ್ಯಾದ ಮುಹಮ್ಮದ್ ರಿಯಾನ್ ಅರ್ಡಿಯಾಂಟೊ ಮತ್ತು ಫಜರ್ ಅಲ್ಫಿಯಾನ್ ವಿರುದ್ಧ ಸೋತರು. ಎರಡು ಸೋಲುಗಳೊಂದಿಗೆ ಫ್ರೆಂಚ್ ಜೋಡಿ ನಿರ್ಗಮಿಸಿದ್ದು, ಚಿರಾಗ್-ಸಾತ್ವಿಕ್ ಮತ್ತು ಅರ್ಡಿಯಾಂಟೊ-ಅಲ್ಫಿಯಾನ್ ಸಿ ಗುಂಪಿನ ಅಗ್ರ ಎರಡು ಸ್ಥಾನಗಳನ್ನು ಪಡೆಯುವುದು ಖಚಿತವಾಗಿದೆ. ಗುಂಪಿನ ಅಗ್ರ ಸ್ಥಾನಕ್ಕಾಗಿ ಭಾರತ ಮತ್ತು ಇಂಡೋನೇಷ್ಯಾ ಜೋಡಿಗಳು ಮಂಗಳವಾರ ಸ್ಪರ್ಧಿಸಲಿವೆ.

ಇದನ್ನೂ ಓದಿ: Paris Olympics 2024 : ಭಾರತಕ್ಕೆ ಶೂಟಿಂಗ್​ನಲ್ಲಿ ಕಂಚಿನ ಪದಕ ಜಸ್ಟ್​ ಮಿಸ್​!

ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಭಾರತದ ತನಿಶಾ ಕ್ರಾಸ್ಟೊ ಮತ್ತು ಅಶ್ವಿನಿ ಪೊನ್ನಪ್ಪ 21-11, 21-12 ಅಂತರದಲ್ಲಿ ವಿಶ್ವದ 4ನೇ ಶ್ರೇಯಾಂಕಿತ ಜಪಾನ್​​ ನಮಿ ಮತ್ಸುಯಾಮಾ ಮತ್ತು ಚಿಹಾರು ಶಿಡಾ ವಿರುದ್ಧ ಸೋತು ನಿರ್ಗಮಿಸುವ ಅಂಚಿನಲ್ಲಿದ್ದಾರೆ. ಪ್ರಸ್ತುತ ಸಿ ಗುಂಪಿನಲ್ಲಿ ನಾಲ್ಕನೇ ಸ್ಥಾನದಲ್ಲಿರುವ ಭಾರತದ ಜೋಡಿ ತನ್ನ ಆರಂಭಿಕ ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ಕಿಮ್ ಸೊ-ಯೊಂಗ್ ಮತ್ತು ದಕ್ಷಿಣ ಕೊರಿಯಾದ ಕಾಂಗ್ ಹೀ-ಯೊಂಗ್ ವಿರುದ್ಧ 21-18, 21-10 ಅಂತರದಲ್ಲಿ ಸೋತಿತ್ತು. ವಿಶ್ವ ರ್ಯಾಂಕಿಂಗ್​​ನಲ್ಲಿ 19ನೇ ಸ್ಥಾನದಲ್ಲಿರುವ ಕ್ರಾಸ್ಟೊ-ಪೊನ್ನಪ್ಪ ಮಂಗಳವಾರ ನಡೆಯಲಿರುವ ಅಂತಿಮ ಗ್ರೂಪ್ ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಸೆಟ್ಯಾನಾ ಮಾಪಾಸಾ ಮತ್ತು 26ನೇ ಶ್ರೇಯಾಂಕದ ಏಂಜೆಲಾ ಯು ಅವರನ್ನು ಎದುರಿಸಲಿದ್ದಾರೆ.

ಪದಕದ ಮೇಲೆ ಕಣ್ಣು: ಭಾರತ ಬ್ಯಾಡ್ಮಿಂಟನ್

ಕ್ವಾರ್ಟರ್ ಫೈನಲ್​ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿರುವ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಈಗ ಇಂಡೋನೇಷ್ಯಾ ವಿರುದ್ಧದ ಮುಂಬರುವ ಪಂದ್ಯದತ್ತ ಗಮನ ಹರಿಸಲಿದ್ದು, ಗುಂಪು ಹಂತವನ್ನು ಉನ್ನತ ಮಟ್ಟದಲ್ಲಿ ಮುಗಿಸುವ ಗುರಿ ಹೊಂದಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಪದಕಕ್ಕಾಗಿ ತಮ್ಮ ಪ್ರಭಾವಶಾಲಿ ಓಟ ಮತ್ತು ಸವಾಲನ್ನು ಮುಂದುವರಿಸಲು ಭಾರತೀಯ ಜೋಡಿ ಉತ್ಸುಕವಾಗಿದೆ.

ಇವರಿಬ್ಬರ ಸಾಧನೆಯು ಭಾರತೀಯ ಬ್ಯಾಡ್ಮಿಂಟನ್​ಗೆ ಮಹತ್ವದ ಮೈಲಿಗಲ್ಲಾಗಿದೆ. ಇದು ಅಭಿಮಾನಿಗಳಲ್ಲಿ ಅಪಾರ ಉತ್ಸಾಹವನ್ನು ಸೃಷ್ಟಿಸಿದೆ. ಒಲಿಂಪಿಕ್ಸ್​ನಲ್ಲಿ ಇತಿಹಾಸವನ್ನು ಸೃಷ್ಟಿಸಲು ಎದುರು ನೋಡುತ್ತಿರುವ ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಅವರಿಗಾಗಿ ಇಡೀ ದೇಶವು ಬೆನ್ನೆಲುಬಾಗಿದೆ.

ಲಕ್ಷ್ಯ ಸೇನ್​ಗೆ ಜಯ

ಲಾ ಚಾಪೆಲ್ ಅರೆನಾದಲ್ಲಿ ನಡೆದ ಪುರುಷರ ಸಿಂಗಲ್ಸ್ ಗ್ರೂಪ್ ಹಂತದ ಪಂದ್ಯದಲ್ಲಿ ಭಾರತದ ಲಕ್ಷ್ಯ ಸೇನ್ ಬೆಲ್ಜಿಯಂನ ಜೂಲಿಯನ್ ಕರಾಗಿ ವಿರುದ್ಧ 21-19, 21-14 ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್​​ನಲ್ಲಿ 18ನೇ ಸ್ಥಾನದಲ್ಲಿರುವ ಸೇನ್ ಮೊದಲ ಗೇಮ್​​​ನಲ್ಲಿ ಕಠಿಣ ಪ್ರದರ್ಶನ ನೀಡಿ ನಂತರದ ಹಂತಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ನಂತರ ಅವರು ಎರಡನೇ ಗೇಮ್ ನಲ್ಲಿ ವಿಶ್ವದ 52 ನೇ ಶ್ರೇಯಾಂಕದ ಜೂಲಿಯನ್ ಕರಾಗ್ಗಿ ಅವರನ್ನು ಸೋಲಿಸಿ ಬಲವಾದ ಗೆಲುವು ಸಾಧಿಸಿದರು.

ಲಕ್ಷ್ಯ ಸೇನ್ ಗ್ವಾಟೆಮಾಲಾದ ಕೆವಿನ್ ಕಾರ್ಡನ್ ವಿರುದ್ಧ ಜಯಗಳಿಸುವ ಮೂಲಕ ತಮ್ಮ ಒಲಿಂಪಿಕ್ ಅಭಿಯಾನವನ್ನು ಪ್ರಾರಂಭಿಸಿದ್ದರು.

Exit mobile version