Site icon Vistara News

Paris Olympics 2024 : ಪ್ಯಾರಿಸ್​​ನಲ್ಲಿ ಸಿಕ್ಕಾಪಟ್ಟೆ ಸೆಖೆ; ಅಥ್ಲೀಟ್​ಗಳಿಗಾಗಿ 40 ಎಸಿ ಕಳುಹಿಸಿದ ಕ್ರೀಡಾ ಸಚಿವಾಲಯ

Paris Olympics 2024

ಪ್ಯಾರಿಸ್: ಒಲಿಂಪಿಕ್ಸ್​ ನಡೆಯುತ್ತಿರುವ ಪ್ಯಾರಿಸ್​​ನಲ್ಲಿ (Paris Olympics 2024) ತಾಪಮಾನ ಹೆಚ್ಚುತ್ತಿದೆ. ಹೀಗಾಗಿ ಕ್ರೀಡಾ ಗ್ರಾಮದಲ್ಲಿರುವ ತಮ್ಮ ಕೊಠಡಿಗಳಲ್ಲಿ ಅಥ್ಲೀಟ್​ಗಳು ಪರಿತಪಿಸುವಂತಾಗಿದೆ. ಸೆಖೆಯ ಸಮಸ್ಯೆಯಿಂದ ಹೋರಾಡುತ್ತಿರುವ ಭಾರತೀಯ ಕ್ರೀಡಾಪಟುಗಳ ಅನುಕೂಲಕ್ಕಾಗಿ ಕ್ರೀಡಾ ಸಚಿವಾಲಯವು 40 ಪೋರ್ಟಬಲ್ ಹವಾನಿಯಂತ್ರ ವ್ಯವಸ್ಥೆಯನ್ನು ಕಳುಹಿಸಿದೆ. ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮತ್ತು ಫ್ರೆಂಚ್ ರಾಯಭಾರ ಕಚೇರಿಯೊಂದಿಗೆ ಚರ್ಚಿಸಿದ ನಂತರ ಹವಾನಿಯಂತ್ರಣಗಳನ್ನು ಕ್ರೀಡಾಕೂಟದ ಗ್ರಾಮಕ್ಕೆ ಕಳುಹಿಸಲಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಪ್ಯಾರಿಸ್ನಲ್ಲಿನ ತಾಪಮಾನ ಮತ್ತು ಆರ್ದ್ರತೆಯಿಂದಾಗಿ ಒಲಿಂಪಿಕ್ ಗೇಮ್ಸ್ ಗ್ರಾಮದಲ್ಲಿ ಕ್ರೀಡಾಪಟುಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಗಣನೆಗೆ ತೆಗೆದುಕೊಂಡು, ಭಾರತೀಯ ಕ್ರೀಡಾಪಟುಗಳು ತಂಗಿರುವ ಗೇಮ್ಸ್ ವಿಲೇಜ್ ಕೊಠಡಿಗಳಲ್ಲಿ 40 ಎಸಿಗಳನ್ನು ಒದಗಿಸಲು ಕ್ರೀಡಾ ಸಚಿವಾಲಯ ನಿರ್ಧರಿಸಿದೆ” ಎಂದು ಮೂಲಗಳು ಪಿಟಿಐಗೆ ತಿಳಿಸಿವೆ.

ಎರಡು ಪ್ರಮುಖ ಒಲಿಂಪಿಕ್ ಕ್ರೀಡಾಕೂಟದ ಸ್ಥಳಗಳಾದ ಪ್ಯಾರಿಸ್ ಮತ್ತು ಚಟೌರೌಕ್ಸ್ ಎರಡರಲ್ಲೂ ತಾಪಮಾನ ಮಿತೀಮೀರಿದೆ. ಪುರುಷರ 50 ಮೀಟರ್ ರೈಫಲ್ 3-ಪೊಸಿಷನ್ಸ್ ಸ್ಪರ್ಧೆಯ ವೇಲೆ ಭಾರತದ ಕಂಚಿನ ವಿಜೇತ ಸ್ವಪ್ನಿಲ್ ಕುಸಾಲೆ ಸೇರಿದಂತೆ ಎಲ್ಲಾ ಎಂಟು ಅಂತಿಮ ಸ್ಪರ್ಧಿಗಳು ಚಟೌರೌಕ್ಸ್ ಶೂಟಿಂಗ್ ರೇಂಜ್​ನಲ್ಲಿ ಸಾಕಷ್ಟು ಸಮಸ್ಯೆ ಎದುರಿಸಿದರು. ಅವರಿಗೆ ಸ್ಪರ್ಧೆ ಮಾಡಲೂ ಸಮಸ್ಯೆ ಆಯಿತು.

ಇದನ್ನೂ ಓದಿ: Paris Olympics 2024 : 52 ವರ್ಷಗಳ ಬಳಿಕ ಒಲಿಂಪಿಕ್ಸ್​​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದ ಭಾರತದ ಹಾಕಿ ತಂಡ

ಪ್ಯಾರಿಸ್​​ನಲ್ಲಿ ಕೆಲವು ದಿನಗಳಲ್ಲಿ ತಾಪಮಾನವು ಅಸಹನೀಯ 40 ಡಿಗ್ರಿ ಸೆಲ್ಸಿಯಸ್ ತಲುಪಿದೆ ಎಂದು ವರದಿಗಳಿವೆ. ಡಾಕೂಟ ಪ್ರಾರಂಭವಾಗುವ ಮೊದಲೇ,ಇಂಗಾಲದ ಡೈಆಕ್ಸೈಡ್​ ಹೊರಸೂಸುವಿಕೆಯನ್ನು ತಡೆಯಲು ಹವಾನಿಯಂತ್ರಣ ವ್ಯವಸ್ಥೆ ಬಳಸುವುದಿಲ್ಲ ಸಂಘಟಕರು ಹೇಳಿದ್ದರು. ಹೀಗಾಗಿ ಹಲವಾರು ತಂಡಗಳು ಪ್ಯಾರಿಸ್ನ ತಾಪಮಾನದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದವು.

ಕ್ರೀಡಾಕೂಟದ ಆಯೋಜಕ ಸಮಿತಿಯು ಗೇಮ್ಸ್ ವಿಲೇಜ್​ನಲ್ಲಿ ತಾಪಮಾನ ಕಡಿಮೆ ಮಾಡಲು ಅಂಡರ್ಫ್ಲೋರ್ ಕೂಲಿಂಗ್ ಕಾರ್ಯವಿಧಾನ ಮತ್ತು ಅಂತರ್ನಿರ್ಮಿತ ಇನ್ಸುಲೇಷನ್ ಅನಾವರಣಗೊಳಿಸಿತು. ಆದಾಗ್ಯೂ, ಕ್ರಮಗಳ ಬಗ್ಗೆ ಸಮಾಧಾನಗೊಳ್ಳದ ಯುಎಸ್ಎ ತುಕಡಿ ಪೋರ್ಟಬಲ್ ಏರ್ ಕಂಡೀಷನರ್​​ ಜತೆಗೆ ಪ್ರಯಾಣಿಸಿತ್ತು.

ಶಾಖವನ್ನು ನಿರ್ವಹಿಸಲು ಇತರ ದೇಶಗಳು ಪೋರ್ಟಬಲ್ ಎಸಿಗಳನ್ನು ಖರೀದಿಸಲು ಆಶ್ರಯಿಸಿವೆ ಎಂದು ವರದಿಗಳು ಸೂಚಿಸಿವೆ. ಭಾರತ ಈಗ ಈ ಸಾಲಿಗೆ ಸೇರಿಕೊಂಡಿದೆ. “ಶುಕ್ರವಾರ ಮುಂಜಾನೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ವೆಚ್ಚವನ್ನು ಸಚಿವಾಲಯವು ಭರಿಸುತ್ತಿದೆ” ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.

ಎಸಿಗಳು ಪ್ಲಗ್ ಮತ್ತು ಪ್ಲೇ ಘಟಕಗಳಾಗಿವೆ. ಕ್ರೀಡಾಪಟುಗಳು ಈಗಾಗಲೇ ಅವುಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಇದರೊಂದಿಗೆ ಅವರು ಹೆಚ್ಚು ಆರಾಮದಾಯಕವಾಗಿ ಉಳಿದುಕೊಳ್ಳಬಹುದು. ಉತ್ತಮ ಪ್ರದರ್ಶನವನ್ನು ನೀಡಬಹುದು “ಎಂದು ಮೂಲಗಳು ಹೇಳಿವೆ.

Exit mobile version