Site icon Vistara News

Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ ಸ್ಪರ್ಧಾ ಪಟ್ಟಿಯಲ್ಲಿರುವ ಕ್ರೀಡೆಗಳು ಯಾವುವು? ಇವುಗಳಲ್ಲಿ ಅತ್ಯಂತ ಪ್ರಾಚೀನ ಕ್ರೀಡೆಗಳು ಯಾವುದೆಲ್ಲ?

Paris Olympics 2024

ಬೆಂಗಳೂರು : ಪ್ಯಾರಿಸ್ ಒಲಿಂಪಿಕ್ಸ್​ 2024 (Paris Olympics 2024) ಜುಲೈ 26ರಂದು ಆರಂಭಗೊಂಡು ಆಗಸ್ಟ್​ 11ರವರೆಗೆ ನಡೆಯಲಿದೆ. ಒಲಿಂಪಿಕ್ಸ್ ಆಯೋಜನೆಗಾಗಿ ಫ್ರಾನ್ಸ್ ನಗರ ಸಜ್ಜಾಗಿದೆ. ಕ್ರೀಡಾಪಟುಗಳು ಕೂಡ ಪದಕಗಳನ್ನು ಗೆಲ್ಲುವುದಕ್ಕಾಗಿ ಸತತವಾಗಿ ಅಭ್ಯಾಸ ನಡೆಸುತ್ತಿದ್ದಾರೆ. ಹಾಗಾದರೆ ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಎಷ್ಟು ಸ್ಪರ್ಧೆಗಳಿವೆ ಹಾಗೂ ಎಷ್ಟು ಪದಕಗಳು ವಿತರಣೆಯಾಗಲಿವೆ ಎಂಬ ವಿವರ ಇಲ್ಲಿದೆ.

ಪ್ಯಾರಿಸ್ 2024ರ ಒಲಿಂಪಿಕ್ ಕ್ರೀಡಾಕೂಟದ ಸ್ಪರ್ಧೆಯ ಪಟ್ಟಿಯಲ್ಲಿ ಒಟ್ಟು 32 ಕ್ರೀಡೆಗಳಿವೆ. ಅವುಗಳೆಂದರೆ: ಅಕ್ವಾಟಿಕ್ಸ್ (ಈಜು, ಮ್ಯಾರಥಾನ್ ಈಜು, ಡೈವಿಂಗ್, ವಾಟರ್ ಪೋಲೊ, ಆರ್ಟಿಸ್ಟಿಕ್ ಈಜು), ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಬ್ಯಾಸ್ಕೆಟ್ಬಾಲ್ (3×3, ಬ್ಯಾಸ್ಕೆಟ್​ಬಾಲ್​), ಬಾಕ್ಸಿಂಗ್, ಬ್ರೇಕಿಂಗ್, ಕ್ಯಾನೊ (ಕ್ಯಾನೊ ಸ್ಪ್ರಿಂಟ್, ಕ್ಯಾನೊ ಸ್ಲಾಲೋಮ್), ಸೈಕ್ಲಿಂಗ್ (ಬಿಎಮ್ಎಕ್ಸ್ ಫ್ರೀಸ್ಟೈಲ್, ಬಿಎಂಎಕ್ಸ್ ರೇಸಿಂಗ್, ರೋಡ್ ಸೈಕ್ಲಿಂಗ್, ಟ್ರ್ಯಾಕ್ ಸೈಕ್ಲಿಂಗ್), ಈಕ್ವೆಸ್ಟ್ರಿಯನ್ (ಈಕ್ವೆಸ್ಟ್ರಿಯನ್ ಈವೆಂಟಿಂಗ್, ಈಕ್ವೆಸ್ಟ್ರಿಯನ್ ಈವೆಂಟಿಂಗ್, ಈಕ್ವೆಸ್ಟ್ರಿಯನ್ ಡ್ರೆಸ್ಸಿಂಗ್, ಈಕ್ವೆಸ್ಟ್ರಿಯನ್ ಜಂಪಿಂಗ್), ಫೆನ್ಸಿಂಗ್, ಫುಟ್ಬಾಲ್, ಗಾಲ್ಫ್, ಜಿಮ್ನಾಸ್ಟಿಕ್ಸ್ (ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್, ರಿಥಮಿಕ್ ಜಿಮ್ನಾಸ್ಟಿಕ್ಸ್), ಹ್ಯಾಂಡ್ಬಾಲ್, ಹಾಕಿ, ಜೂಡೋ, ಮಾಡರ್ನ್ ಪೆಂಟಾಥ್ಲಾನ್, ರೋಯಿಂಗ್, ರಗ್ಬಿ (ರಗ್ಬಿ ಸೆವೆನ್ಸ್), ನೌಕಾಯಾನ, ಶೂಟಿಂಗ್, ಸ್ಕೇಟ್​ಬೋರ್ಡಿಂಗ್​, ಸ್ಪೋರ್ಟ್ ಕ್ಲೈಂಬಿಂಗ್, ಸರ್ಫಿಂಗ್, ಟೇಬಲ್ ಟೆನಿಸ್, ಟೇಕ್ವಾಂಡೋ, ಟೆನಿಸ್, ಟ್ರಯಥ್ಲಾನ್, ವಾಲಿಬಾಲ್ (ಬೀಚ್ ವಾಲಿಬಾಲ್, ವಾಲಿಬಾಲ್), ವೇಟ್​ಲಿಫ್ಟಿಂಗ್, ಮತ್ತು ಕುಸ್ತಿ (ಗ್ರೀಕೋ-ರೋಮನ್ ಕುಸ್ತಿ, ಫ್ರೀಸ್ಟೈಲ್ ಕುಸ್ತಿ).

ಎಷ್ಟು ಪದಕಗಳಿವೆ

2024ರ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿರುವ 32 ಕ್ರೀಡೆಗಳ ವಿವಿಧ ವಿಭಾಗಗಳಲ್ಲಿ ಒಟ್ಟು ಸುಮಾರು 5,084 ಪದಕಗಳು ವಿತರಣೆಯಾಗಲಿವೆ. ಇದರಲ್ಲಿ ಚಿನ್ನ, ಬೆಳ್ಳಿ ಕಂಚಿನ ಪದಕಗಳು ಸೇರಿಕೊಂಡಿವೆ. ಫ್ರೆಂಚ್ ಮಿಂಟ್ ಮೊನ್ನೈ ಡಿ ಪ್ಯಾರಿಸ್ ಈ ಪದಕಗಳನ್ನು ಉತ್ಪಾದಿಸಿದೆ. ಪ್ಯಾರಿಸ್ ಮೂಲದ ಐಷಾರಾಮಿ ಆಭರಣ ಸಂಸ್ಥೆ ಚೌಮೆಟ್ ಪದಕಗಳನ್ನು ವಿನ್ಯಾಸ ಮಾಡಿದೆ. ಪದಕಗಳ ಹಿಂಭಾಗದಲ್ಲಿ 1896 ರಲ್ಲಿ ಮೊದಲ ಆಧುನಿಕ ಒಲಿಂಪಿಕ್ಸ್​​ಗೆ ಆತಿಥ್ಯ ವಹಿಸಿದ್ದ ಪನಾಥೆನಿಕ್ ಕ್ರೀಡಾಂಗಣದೊಳಗೆ ಗ್ರೀಕ್ ವಿಜಯದ ದೇವತೆ ನೈಕ್ ಚಿತ್ರಿಸಲಾಗಿದೆ.

ಕ್ರೀಡಾಕೂಟದ ಪಟ್ಟಿಯಲ್ಲಿರುವ ಜನಪ್ರಿಯ ಕ್ರಿಡೆಗಳು

ಅಥ್ಲೆಟಿಕ್ಸ್ (ಟ್ರ್ಯಾಕ್ ಮತ್ತು ಫೀಲ್ಡ್) ಒಲಿಂಪಿಕ್ ಕ್ರೀಡೆಗಳ ಪಟ್ಟಿಯಲ್ಲಿರುವ ಹಳೆಯ ಕ್ರೀಡೆಗಳಲ್ಲಿ ಒಂದು. ಅಥೆನ್ಸ್​​ನಲ್ಲಿ (1896) ನಡೆದ ಮೊದಲ ಆಧುನಿಕ ಒಲಿಂಪಿಕ್ ಕ್ರೀಡಾಕೂಟದಿಂದಲೂ ಇದು ಅವಿಭಾಜ್ಯ ಅಂಗವಾಗಿದೆ. 1896 ರ ಕ್ರೀಡಾಕೂಟದಲ್ಲಿ, ಈ ಕ್ರೀಡೆಯು 100 ಮೀಟರ್, 110 ಮೀ ಹರ್ಡಲ್ಸ್, 400 ಮೀ, 800 ಮೀ, 1500 ಮೀ, ಡಿಸ್ಕಸ್ ಥ್ರೋ, ಹೈ ಜಂಪ್, ಲಾಂಗ್ ಜಂಪ್, ಟ್ರಿಪಲ್ ಜಂಪ್, ಮ್ಯಾರಥಾನ್, ಪೋಲ್ ವಾಲ್ಟ್ ಮತ್ತು ಶಾಟ್ ಪುಟ್ ಸೇರಿದಂತೆ 12 ಸ್ಪರ್ಧೆಗಳನ್ನು ಹೊಂದಿತ್ತು. ಈ ವೇಳೆ ಪುರುಷರನ್ನು ಮಾತ್ರ ಒಳಗೊಂಡಿತ್ತು. ಅಥ್ಲೆಟಿಕ್ಸ್ ವಿಭಾಗವು ವರ್ಷಗಳಿಂದ ವಿಕಸನಗೊಂಡಿದೆ. ಮಹಿಳಾ ಕ್ರೀಡಾಪಟುಗಳಿಗೂ ಬಾಗಿಲು ತೆರೆದಿದೆ. ರಿಲೇ, ರೇಸ್ ವಾಕ್, ಜಾವೆಲಿನ್ ಥ್ರೋ ಮುಂತಾದ ಸ್ಪರ್ಧೆಗಳೂ ಸೇರಿಕೊಂಡಿವೆ.

ಫೆನ್ಸಿಂಗ್

ಅಥ್ಲೆಟಿಕ್ಸ್​ನಷ್ಟೇ ಹಳೆಯದಾದ ಫೆನ್ಸಿಂಗ್ (ಕತ್ತಿವರಸೆ) ಆರಂಭದಿಂದಲೂ ಒಲಿಂಪಿಕ್ಸ್​​ನ ಭಾಗವಾಗಿದೆ. ಅಥೆನ್ಸ್ 1896 ರ ಒಲಿಂಪಿಕ್ಸ್ ಸಮಯದಲ್ಲಿ ಪುರುಷರ ಫೆನ್ಸಿಂಗ್ ಸ್ಪರ್ಧೆಯನ್ನು ಮೂರು ಸ್ಪರ್ಧೆ ಆಯೋಜಿಸಿತ್ತು. ಫಾಯಿಲ್ ವೈಯಕ್ತಿಕ, ಫಾಯಿಲ್ ಮಾಸ್ಟರ್ಸ್ ಮತ್ತು ಸೇಬರ್ ವಿಭಾಗವಿತ್ತು. ಆರಂಭದಲ್ಲಿ ಗ್ರೀಸ್ ಮತ್ತು ಫ್ರಾನ್ಸ್ ಪ್ರಾಬಲ್ಯ ಹೊಂದಿತ್ತು.

ಈಜು (ಅಕ್ವಾಟಿಕ್ಸ್)

ಪುರುಷರ 100 ಮೀಟರ್ ಫ್ರೀಸ್ಟೈಲ್, 100 ಮೀಟರ್ ಫ್ರೀಸ್ಟೈಲ್, 400 ಮೀಟರ್ ಫ್ರೀಸ್ಟೈಲ್ ಮತ್ತು 1200 ಮೀಟರ್ ಫ್ರೀಸ್ಟೈಲ್ ಸೇರಿ ಈಜು ಸ್ಪರ್ಧೆಯು 1896 ರ ಕ್ರೀಡಾಕೂಟದ ಆವೃತ್ತಿಯಿಂದಲೂ ಒಲಿಂಪಿಕ್ಸ್​​ ಒಂದು ಭಾಗವಾಗಿದೆ. ಕಾಲಾನಂತರದಲ್ಲಿ, ಒಲಿಂಪಿಕ್ಸ್ 35 ಈಜು ಸ್ಪರ್ಧೆಗಳನ್ನು ಒಳಗೊಂಡಿತು. ಮಹಿಳೆಯರಿಗೆ ವಿವಿಧ ವಿಭಾಗಗಳಲ್ಲಿ ಭಾಗವಹಿಸಲು ಅವಕಾಶ ನೀಡಲಾಯಿತು.

ಜಿಮ್ನಾಸ್ಟಿಕ್ಸ್ (ಆರ್ಟಿಸ್ಟಿಕ್​)

ಕ್ರೀಡಾಕೂಟದ ಪ್ರಾರಂಭದ 1896 ರ ಆವೃತ್ತಿಯಿಂದಲೂ ಕಲಾತ್ಮಕ ಜಿಮ್ನಾಸ್ಟಿಕ್ಸ್ ಒಲಿಂಪಿಕ್ಸ್​​ನ ಭಾಗವಾಗಿದೆ. ಆರಂಭದಲ್ಲಿ, ಇದu ಪುರುಷರಿಗಾಗಿಯೇ ಇತ್ತು, ಇದು ಎಂಟು ತಂಡ ಮತ್ತು ವೈಯಕ್ತಿಕ ಸ್ಪರ್ಧೆಗಳನ್ನು ಒಳಗೊಂಡಿತ್ತು. ನಂತರ, ಈ ಕ್ರೀಡೆಯನ್ನು ಮಹಿಳೆಯರಿಗೆ ತೆರೆಯಲಾಯಿತು, 14 ವಿಭಾಗಗಳಿಗೆ ವಿಸ್ತರಿಸಲಾಯಿತು.

ಸೈಕ್ಲಿಂಗ್​

ಟ್ರ್ಯಾಕ್ ಸೈಕ್ಲಿಂಗ್ ಪ್ರಾರಂಭದಿಂದಲೂ ಒಲಿಂಪಿಕ್ಸ್ ನ ಒಂದು ಭಾಗವಾಗಿದೆ. ಅಥೆನ್ಸ್ ಕ್ರೀಡಾಕೂಟದಲ್ಲಿ, ಟ್ರ್ಯಾಕ್ ಸೈಕ್ಲಿಂಗ್ ಪುರುಷರಿಗೆ ಪ್ರತ್ಯೇಕವಾಗಿ ಐದು ಸ್ಪರ್ಧೆಗಳನ್ನು ಒಳಗೊಂಡಿತ್ತು: 100 ಕಿ.ಮೀ, 10 ಕಿ.ಮೀ, 12 ಗಂಟೆ, 1 ಕಿ.ಮೀ ಟ್ರಯಲ್ ಮತ್ತು ಸ್ಪ್ರಿಂಟ್. ವರ್ಷಗಳಲ್ಲಿ, ಕ್ರೀಡೆಯು ಪುರುಷರು ಮತ್ತು ಮಹಿಳೆಯರಿಗಾಗಿ 12 ಸ್ಪರ್ಧೆಗಳನ್ನು ಒಳಗೊಂಡಿದೆ. ಇದು ವೈಯಕ್ತಿಕ ಮತ್ತು ತಂಡದ ಸ್ಪರ್ಧೆಗಳನ್ನು ಒಳಗೊಂಡಿದೆ.

1904 ಮತ್ತು 1928 ರ ಕ್ರೀಡಾಕೂಟಗಳನ್ನು ಹೊರತುಪಡಿಸಿ, ಶೂಟಿಂಗ್ ಒಲಿಂಪಿಕ್ಸ್​​ನಲ್ಲಿ ಕಾಯಂ ಸ್ಥಾನ ಪಡೆದಿದೆ. ಇದರಲ್ಲಿ ಐದು ಸ್ಪರ್ಧೆಗಳಿವೆ: 25 ಮೀ ಆರ್ಮಿ ಪಿಸ್ತೂಲ್, 25 ಮೀ ರಾಪಿಡ್ ಫೈರ್ ಪಿಸ್ತೂಲ್ 60 ಶಾಟ್​​ಗಳು, 50 ಮೀ ಪಿಸ್ತೂಲ್ 60 ಶಾಟ್​ಗಳು ಆರ್ಮಿ ರೈಫಲ್ 200 ಮೀ, ಮತ್ತು ಆರ್ಮಿ ರೈಫಲ್ 300 ಮೀ. ಗ್ರೀಸ್ ತನ್ನ ಆರಂಭಿಕ ದಿನಗಳಲ್ಲಿ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು, ಈಗ ಅಮೆರಿಕದ ಪ್ರಾಬಲ್ಯವಿದೆ.

ಇದನ್ನೂ ಓದಿ: aris Olympics 2024 : ಒಲಿಂಪಿಕ್ಸ್​ ಕ್ರೀಡಾಕೂಟದ ಇತಿಹಾಸ ಏನು? ಇದನ್ನು ಆಯೋಜಿಸುವರು ಯಾರು?

ವೇಟ್​ಲಿಫ್ಟಿಂಗ್​

ವೇಟ್ ಲಿಫ್ಟಿಂಗ್ 1896 ರ ಅಥೆನ್ಸ್ ಕ್ರೀಡಾಕೂಟದಿಂದಲೂ ಒಲಿಂಪಿಕ್ ಕ್ರೀಡೆಯಾಗಿದೆ. ಆರಂಭದಲ್ಲಿ, ಇದು ಪುರುಷರಿಗೆ ಪ್ರತ್ಯೇಕವಾಗಿ ಎರಡು ಸ್ಪರ್ಧೆಗಳನ್ನು ಒಳಗೊಂಡಿತ್ತು: ಹೆವಿವೇಯ್ಟ್ ಒನ್-ಹ್ಯಾಂಡ್ ಲಿಫ್ಟ್ ಮತ್ತು ಹೆವಿವೇಯ್ಟ್ ಟು-ಹ್ಯಾಂಡ್ ಲಿಫ್ಟ್. ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಐದು ತೂಕದ ವಿಭಾಗಗಳಲ್ಲಿ 10 ಸ್ಪರ್ಧೆಗಳು ನಡೆಯಲಿವೆ. 2000ನೇ ಇಸವಿಯಲ್ಲಿ ಸಿಡ್ನಿ ಒಲಿಂಪಿಕ್ಸ್​ನಲ್ಲಿ ಮಹಿಳಾ ವೇಟ್​ಲಿಫ್ಟಿಂಗ್​ ಪಾದಾರ್ಪಣೆ ಮಾಡಲಾಯಿತು. ಆ ಐತಿಹಾಸಿಕ ಆವೃತ್ತಿಯಲ್ಲಿ, ಭಾರತದ ಕರ್ಣಂ ಮಲ್ಲೇಶ್ವರಿ 69 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದರು.

ಕುಸ್ತಿ

1896 ರ ಅಥೆನ್ಸ್ ಒಲಿಂಪಿಕ್ಸ್​ನಲ್ಲಿ ಸೇರ್ಪಡೆಗೊಂಡ ನಂತರ, ಗ್ರೀಕೋ-ರೋಮನ್ ಕುಸ್ತಿಯನ್ನು ಮುಂದಿನ ಎರಡು ಆವೃತ್ತಿಗಳಿಂದ (1900 ಮತ್ತು 1904) ಕೈಬಿಡಲಾಯಿತು. ಅಥೆನ್ಸ್​ನಲ್ಲಿ ಈ ಕ್ರೀಡೆಯು ಪುರುಷರಿಗೆ ಕೇವಲ ಒಂದು ಸ್ಪರ್ಧೆಯನ್ನು ಒಳಗೊಂಡಿತ್ತು. ಗ್ರೀಕೋ-ರೋಮನ್ ಕುಸ್ತಿ ಕ್ರಮೇಣ ಪುರುಷರು ಮತ್ತು ಮಹಿಳೆಯರಿಗೆ ಆರು ತೂಕದ ವರ್ಗಗಳನ್ನು ಸೇರಿಸಲು ವಿಸ್ತರಿಸಿದೆ.

ಟೆನಿಸ್​

ಟೆನಿಸ್​ 1896 ರ ಅಥೆನ್ಸ್ ಕ್ರೀಡಾಕೂಟದಲ್ಲಿ ಕಾಣಿಸಿಕೊಂಡ ಮತ್ತೊಂದು ಕ್ರೀಡೆ. ಉದ್ಘಾಟನಾ ಒಲಿಂಪಿಕ್ಸ್ ಎರಡು ಟೆನಿಸ್ ಸ್ಪರ್ಧೆಗಳನ್ನು ಒಳಗೊಂಡಿತ್ತು: ಪುರುಷರ ಸಿಂಗಲ್ಸ್ ಮತ್ತು ಪುರುಷರ ಡಬಲ್ಸ್, ಅಲ್ಲಿ ಗ್ರೀಸ್ ಮೂರು ಪದಕಗಳೊಂದಿಗೆ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಈ ಕ್ರೀಡೆಯು ಐದು ಸ್ಪರ್ಧೆಗಳನ್ನು ಒಳಗೊಂಡಿದೆ: ಪುರುಷರ ಸಿಂಗಲ್ಸ್, ಪುರುಷರ ಡಬಲ್ಸ್, ಮಹಿಳಾ ಸಿಂಗಲ್ಸ್, ಮಹಿಳಾ ಡಬಲ್ಸ್ ಮತ್ತು ಮಿಶ್ರ ಡಬಲ್ಸ್.

Exit mobile version