ಬೆಂಗಳೂರು: ಪ್ಯಾರಿಸ್ ಒಲಿಂಪಿಕ್ಸ್(Paris Olympics) ಕ್ರೀಡಾಕೂಟ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ನಾಳೆ(ಭಾನುವಾರ) ಸಮಾರೋಪ ಸಮಾರಂಭ ನಡೆಯಲಿದ್ದು ಟೂರ್ನಿಗೆ ಅಧಿಕೃತವಾಗಿ ತೆರೆ ಬೀಳಲಿದೆ. ಸದ್ಯ ಪದಕ ಪಟ್ಟಿಯಲ್ಲಿ(Paris Olympics Medal Table) ಅಮೆರಿಕ ಅಗ್ರಸ್ಥಾನ ಪಡೆದಿದೆ. ಚೀನಾ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನಿಯಾಗಿ ಕಾಣಿಸಿಕೊಂಡಿದೆ. ಭಾರತ 6 ಪದಕ ಗೆದ್ದು 69ನೇ ಸ್ಥಾನಿಯಾಗಿದೆ. ಪಾಕಿಸ್ತಾನ ಏಕೈಕ ಪದಕ ಗೆದ್ದರೂ ಭಾರತಕ್ಕಿಂತ 8 ಸ್ಥಾನ ಪ್ರಗತಿ ಸಾಧಿಸಿ 58ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಒಂದು ಪದಕ ಗೆದ್ದರೂ ಪಾಕಿಸ್ತಾನ ಭಾರತಕ್ಕಿಂತ ಮೇಲೆ ಹೇಗೆ ಸ್ಥಾನ ಪಡೆಯಿತು ಎನ್ನುವುದು ಕ್ರೀಡಾಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಇದಕ್ಕೆ ಉತ್ತರ ಇಲ್ಲಿದೆ.
ಶುಕ್ರವಾರ ರಾತ್ರಿಯ ವರೆಗೂ ಪದಕದ ಖಾತೆಯನ್ನೇ ತೆರೆಯದೇ ಇದ್ದ ಪಾಕಿಸ್ತಾನಕ್ಕೆ ಪುರುಷರ ಜಾವೆಲಿನ್ ಎಸೆತದಲ್ಲಿ ಬರೋಬ್ಬರಿ 92.97 ಮೀಟರ್ ದೂರ ಜಾವೆಲಿನ್ ಎಸೆದು ಒಲಿಂಪಿಕ್ಸ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದು ಬೀಗಿದ್ದರು. ಈ ಮೂಲಕ ಪಾಕ್ಗೆ ಪದಕದ ಖಾತೆ ತೆರೆದಿದ್ದರು. ಜತೆಗೆ 40 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಚಿನ್ನದ ಪದವೊಂದನ್ನು ಗೆದ್ದ ಸಾಧನೆ ಮಾಡಿದ್ದರು. ಭಾರತ 6 ಪದಕ ಗೆದ್ದರೂ ಕೂಡ ಪದಕ ಪಟ್ಟಿಯಲ್ಲಿ ಪಾಕ್ಗಿಂತ ಕೆಳಗಿರಲು ಕಾರಣ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯಲ್ಲಿರುವ ನಿಯಮ.
ನಿಯಮ ಏನು ಹೇಳುತ್ತೆ?
ಹೌದು, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ(ಐಒಸಿ) ಆಯ್ಕೆ ಮಾಡಿಕೊಂಡ ರ‍್ಯಾಂಕಿಂಗ್ ವಿಧಾನದ ಪ್ರಕಾರ ಒಲಿಂಪಿಕ್ ಕೂಟದಲ್ಲಿ ಆಯಾ ದೇಶ ಗೆದ್ದ ಚಿನ್ನದ ಪದಕದ ಆಧಾರದಲ್ಲಿ ರ‍್ಯಾಂಕಿಂಗ್ ನೀಡಲಾಗುತ್ತದೆ. ಉದಾಹರಣೆಗೆ ಒಂದು ದೇಶ 10 ಬೆಳ್ಳಿ ಅಥವಾ ಕಂಚಿನ ಪದಕ ಪಡೆದರೂ, ಏಕೈಕ ಚಿನ್ನದ ಪದಕ ಪಡೆದ ರಾಷ್ಟ್ರಕ್ಕಿಂತ ಕೆಳಗಿರುತ್ತದೆ. ಎರಡು ದೇಶಗಳು ಸಮಾನ ಸಂಖ್ಯೆಯ ಚಿನ್ನದ ಪದಕ ಗೆದ್ದಲ್ಲಿ, ಬೆಳ್ಳಿ ಹಾಗೂ ಕಂಚಿನ ಪದಕಗಳು ಗಣನೆಗೆ ಬರುತ್ತವೆ. ಒಟ್ಟಾರೆ ಚಿನ್ನದ ಪದಕ ಗೆದ್ದ ಆಧಾರದಲ್ಲಿ ಅಂಕಟ್ಟಿಯಲ್ಲಿ ಸ್ಥಾನ ನಿರ್ಧಾರವಾಗುತ್ತದೆ. ಹೀಗಾಗಿ ಭಾರತ ಪಾಕಿಸ್ತಾನಕ್ಕಿಂತ ಕೆಳಗಿನ ಸ್ಥಾನ ಪಡೆದಿದೆ.
ಭಾರತದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ (Vinesh Phogat) ಅವರ ಒಲಿಂಪಿಕ್ ಅನರ್ಹತೆ ಮತ್ತು ಮಹಿಳೆಯರ 50 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಜಂಟಿ ಬೆಳ್ಳಿ ಪದಕಕ್ಕಾಗಿ ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (ಸಿಎಎಸ್)ಗೆ ಸಲ್ಲಿಸಿದ ಮನವಿಯ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮುಖ್ಯಸ್ಥ ಥಾಮಸ್ ಬಾಕ್ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ. ಸ್ಪರ್ಧೆಯಲ್ಲಿ ಎರಡು ಬೆಳ್ಳಿ ಪದಕಗಳನ್ನು ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದು ಬಾಕ್ ಹೇಳಿದ್ದಾರೆ. ಆದಾಗ್ಯೂ, ಚಿನ್ನದ ಪದಕದ ಪಂದ್ಯಕ್ಕೆ ಮುಂಚಿತವಾಗಿ ಅನರ್ಹಗೊಂಡ ಭಾರತೀಯ ಕುಸ್ತಿಪಟುವಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದೇನೆ ಎಂಬುದಾಗಿ ನುಡಿದಿದ್ದಾರೆ.
ಪ್ಯಾರಿಸ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಥಾಮಸ್, ಸಿಎಎಸ್ ನಿರ್ಧಾರಕ್ಕೆ ಐಒಸಿ ಬದ್ಧವಾಗಿರುತ್ತದೆ ಎಂದು ಹೇಳಿದರು. ಎರಡು ಬೆಳ್ಳಿ ಪದಕಗಳನ್ನು ನೀಡುವುದು ತಪ್ಪು ಎಂದರು.