ಬೆಂಗಳೂರು: 2024-25ನೇ ಸಾಲಿನ ಎಂಬಿಎ, ಎಂಸಿಎ, ಎಂ.ಟೆಕ್, ಎಂಇ, ಎಂ.ಆರ್ಕಿಟೆಕ್ಟರ್ ಸ್ನಾತಕೋತ್ತರ ಕೋರ್ಸ್‌ಗಳ ಪ್ರವೇಶಕ್ಕೆ ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ (PGCET 2024) ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ದಿನಾಂಕ ನಿಗದಿ ಮಾಡಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಜುಲೈ 13 ಮತ್ತು 14ರಂದು ಪಿಜಿಸಿಇಟಿ-24 ನಡೆಯಲಿದೆ.
ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಟರ್ ಕೋರ್ಸ್‌ಗಳ ಪ್ರವೇಶ ಪರೀಕ್ಷೆಯನ್ನು ಜುಲೈ 13 ರಂದು ಹಾಗೂ ಎಂಸಿಎ ಮತ್ತು ಎಂಬಿಎ ಕೋರ್ಸ್ ಪ್ರವೇಶ ಪರೀಕ್ಷೆಯನ್ನು ಜುಲೈ 14ರಂದು ನಡೆಸಲಾಗುತ್ತದೆ. ಪಿಜಿಸಿಇಟಿ ಪರೀಕ್ಷೆಗೆ ಮೇ 27ರಿಂದ ಜೂನ್ 17 ರವರೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಜೂನ್ 18 ಶುಲ್ಕ ಪಾವತಿಸಲು ಕೊನೆಯ ದಿನಾಂಕವಾಗಿದೆ.
ಎಂಜಿನಿಯರಿಂಗ್ ಹಾಗೂ ಟೆಕ್ನಾಲಜಿ ವಿಭಾಗದಲ್ಲಿ ಗೇಟ್ (GATE) ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳು ಮಾತ್ರ ವಿಟಿಯು, ಬೆಳಗಾವಿ ಅಡಿಯಲ್ಲಿನ ವಿವಿಧ ಎಂ.ಟೆಕ್ ಕೋರ್ಸುಗಳಿಗೆ ಪ್ರವೇಶ ಪಡೆಯಲು ಅರ್ಹರಾಗುತ್ತಾರೆ. ಗೇಟ್ ಪರೀಕ್ಷೆಯಲ್ಲಿ ಮಾನ್ಯತೆ ಅಂಕಗಳನ್ನು ಹೊಂದಿರುವವರು (Valid GATE Score) ಎಂಇ / ಎಂ.ಟೆಕ್ / ಎಂ. ಆರ್ಕ್ ಕೋರ್ಸ್‌ಗಳ ಪ್ರವೇಶಕ್ಕಾಗಿ, ಪಿಜಿಸಿಇಟಿ-2024ಕ್ಕೆ ಹಾಜರಾಗುವ ಅವಶ್ಯಕತೆ ಇರುವುದಿಲ್ಲ. ಆದರೆ ಅಂತಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡಿ ಶುಲ್ಕವನ್ನು ಪಾವತಿಸಿ ಪ್ರವೇಶಕ್ಕೆ ಅರ್ಹರಾಗಬಹುದು. ಎಸ್-ಎಸ್‌ಟಿ, ಒಬಿಸಿ ಅರ್ಹತಾ ಮಾನದಂಡಗಳು ಕರ್ನಾಟಕದ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
ಇನ್ನು ಕರ್ನಾಟಕೇತರ ಅಭ್ಯರ್ಥಿಗಳು ಎಂಬಿಎ ಮತ್ತು ಎಂಸಿಎ ಪ್ರವೇಶಕ್ಕೆ ಆಡಳಿತ ಮಂಡಳಿಯವರು ಸರ್ಕಾರಕ್ಕೆ ಬಿಟ್ಟುಕೊಡುವ ಸೀಟುಗಳನ್ನು ಮಾತ್ರ ಆಯ್ಕೆ ಮಾಡಲು ಅರ್ಹತೆ ಪಡೆಯುತ್ತಾರೆ. ಕರ್ನಾಟಕೇತರ ಅಭ್ಯರ್ಥಿಗಳಿಗೆ ಯಾವುದೇ ಮೀಸಲಾತಿಯ ಸವಲತ್ತುಗಳು ಅನ್ವಯಿಸುವುದಿಲ್ಲ. ಆದ್ದರಿಂದ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಿರುವ ಕನಿಷ್ಠ ಅಂಕಗಳನ್ನು ಪಡೆದಿದ್ದಲ್ಲಿ ಮಾತ್ರ (50%) ಅರ್ಹತೆಯನ್ನು ಪಡೆಯಬಹುದಾಗಿದೆ ಹಾಗೂ ಪ್ರವೇಶಕ್ಕಾಗಿ ನೊಂದಣಿಯನ್ನು ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ | COMEDK UGET Result 2024: ಕಾಮೆಡ್ ಕೆ ಫಲಿತಾಂಶ ಪ್ರಕಟ; ಬೆಂಗಳೂರಿನ ಬಾಲಸತ್ಯ ಸರವಣನ್ ಫಸ್ಟ್ ರ‍್ಯಾಂಕ್
ಎಂಬಿಎ, ಎಂಸಿಎ, ಎಂಇ, ಎಂ.ಟೆಕ್, ಎಂ.ಆರ್ಕಿಟೆಕ್ಟರ್ ಕೋರ್ಸುಗಳ ಪ್ರವೇಶಕ್ಕೆ, ಅಭ್ಯರ್ಥಿಗಳು ಅರ್ಹತಾ ಪರೀಕ್ಷೆಯಲ್ಲಿ ಒಟ್ಟು ಕನಿಷ್ಟ ಶೇ.50 ಹಾಗೂ ಕರ್ನಾಟಕದ ಎಸ್.ಸಿ., ಎಸ್.ಟಿ., ಪ್ರವರ್ಗ-1 ರ ಅಭ್ಯರ್ಥಿಗಳು ಕನಿಷ್ಠ ಶೇ.45% ಅಂಕಗಳನ್ನು ಪಡೆದಿರಬೇಕು. CGPA / SGPA ಗ್ರೇಡ್‌ಗಳ ಮಾದರಿಯಲ್ಲಿ ನಿಗದಿಪಡಿಸಿರುವ ಅರ್ಹತಾ ಪರೀಕ್ಷೆಯ ಅಂಕಗಳು, ಅಗತ್ಯವಿರುವ ಕನಿಷ್ಠ ಅರ್ಹತಾ ಅಂಕಗಳನ್ನು ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗ್ರೇಡ್‌ಗಳ ಅಂಕಗಳು ಸೂಚಿಸುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು ಎಂದು ಕೆಇಎ ಮಾಹಿತಿ ನೀಡಿದೆ.