Site icon Vistara News

Abhishek Sharma : ಅಭಿಷೇಕ್ ಶರ್ಮಾ ದಾಖಲೆಯ ಶತಕ ಬಾರಿಸಿದ್ದು ಶುಭ್​​ಮನ್ ಗಿಲ್​ ಬ್ಯಾಟ್​ನಲ್ಲಿ!

Abhishek Sharma

ಹರಾರೆ: ಜುಲೈ 7 ರಂದು ಹರಾರೆಯಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ (ZIMvsIND) ಭಾರತದ ಆರಂಭಿಕ ಅಭಿಷೇಕ್ ಶರ್ಮಾ (Abhishek Sharma) ದಾಖಲೆಯ ಶತಕ ಬಾರಿಸಿದ್ದರು. ಇದು ಅವರ ಚೊಚ್ಚಲ ಅಂತಾರಾಷ್ಟ್ರೀಯ ಶತಕ. ಈ ಮೂಲಕ ಅವರು ತಮ್ಮ ಅಂತಾರಾಷ್ಟ್ರೀಯ ಎರಡನೇ ಇನಿಂಗ್ಸ್​​ನಲ್ಲೇ ಶತಕ ಬಾರಿಸಿ ಮಿಂಚಿದರು. ಜತೆಗೆ ಹಲವಾರು ದಾಖಲೆಗಳನ್ನು ಅವರು ಹಿಮ್ಮೆಟ್ಟಿಸಿದರು. ಅಂದ ಹಾಗೆ ಅವರು ಈ ಹೊಡೆಬಡಿಯ ಇನಿಂಗ್ಸ್ ಆಡಿದ್ದ ಸಹ ಆಟಗಾರ ಮತ್ತು ನಾಯಕ ಶುಭ್ಮನ್ ಗಿಲ್ ಅವರ ಬ್ಯಾಟ್ ನಲ್ಲಿ ಎಂಬುದು ವಿಶೇಷ. ಅಂದ ಹಾಗೆ ಇದು ಜಿಂಬಾಬ್ವೆ ವಿರುದ್ಧ ಭಾರತೀಯನೊಬ್ಬನ ಮೊದಲ ಸೆಂಚುರಿ.

ಅಭಿಷೇಕ್​ ಶರ್ಮಾ ಮೊದಲ ಎಸೆತಕ್ಕೆ ಸಿಕ್ಸರ್ ಬಾರಿಸುವುದು ಸೇರಿದಂತೆ ಸಿಕಂದರ್ ರಾಜಾ ನೇತೃತ್ವದ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಯ ಎರಡನೇ ಪಂದ್ಯದಲ್ಲಿ 47 ಎಸೆತಗಳಲ್ಲಿ 100 ರನ್ ಗಳಿಸುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜುಲೈ 6 ರಂದು ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ ಪಂದ್ಯದಲ್ಲಿ ಡಕ್ ಔಟ್ ಆದ ನಂತರ, ಅಭಿಷೇಕ್ ಅವರ ಸ್ಫೋಟಕ ಇನ್ನಿಂಗ್ಸ್ ಮೂಡಿ ಬಂತು. ಮೊದಲ ಪಂದ್ಯದಲ್ಲಿ ಸೊನ್ನೆ ಹಾಗೂ ಎರಡನೇ ಪಂದ್ಯದಲ್ಲಿ 100 ರನ್ ಬಾರಿಸಿದ ಖ್ಯಾತಿ ಅವರಿಗೆ ದೊರಕಿತು.

ನಾಯಕ ಶುಭ್​ಮನ್​ ಗಿಲ್​ ಬೇಗನೆ ಔಟ್ ಅದ ನಂತರ ಋತುರಾಜ್ ಅವರೊಂದಿಗೆ ಕ್ರೀಸ್​ನಲ್ಲಿ ಗಟ್ಟಿಯಾಗಿ ನಿಂತ ಅಭಿಷೇಕ್ ಭರ್ಜರಿ ಇನಿಂಗ್ಸ್ ಆಡಿದರು. ಅವರಿಬ್ಬರು 137 ರನ್​​ ಜೊತೆಯಾಟ ಆಡಿದರು. ಅಂತಿಮವಾಗಿ ಋತುರಾಜ್ 46 ಎಸೆತಗಳಲ್ಲಿ ಅಜೇಯ 77 ರನ್ ಮತ್ತು ರಿಂಕು ಸಿಂಗ್ 22 ಎಸೆತಗಳಲ್ಲಿ 48 ರನ್ ಗಳಿಸಿದರು. ಹೀಗಾಗಿ ಭಾರತ 234 ರನ್ ಬಾರಿಸಿತು.

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ, ಅಭಿಷೇಕ್ ಅವರು ತಮ್ಮ ನಾಯಕನ ಬ್ಯಾಟ್ ಅನ್ನು ಬಳಸಿದ್ದೇನೆ ಎಂದು ಬಹಿರಂಗಪಡಿಸಿದರು.ತಾವು ಅದೇ ರೀತಿ ಮಾಡುತ್ತಿರುವುದು ಇದೇ ಮೊದಲಲ್ಲ ಎಂದೂ ವಿವರಿಸಿದರು. “ನಾನು ಇಂದು ಶುಭ್​​ಮನ್​​ ಬ್ಯಾಟ್​ನಲ್ಲಿ ಆಡಿದ್ದೇನೆ. ನಾನು ಅದನ್ನು ಈ ಹಿಂದೆಯೂ ಮಾಡಿದ್ದೇನೆ. ನನಗೆ ರನ್ ಬೇಕಾದಾಗಲೆಲ್ಲಾ ನಾನು ಅವರ ಬ್ಯಾಟ್ ಕೇಳುತ್ತೇನೆ ಎಂದು ಅಭಿಷೇಕ್ ಹೇಳಿದರು.

ಶುಬ್ಮನ್ ಮತ್ತು ಅಭಿಷೇಕ್ ಇಬ್ಬರೂ ಪಂಜಾಬ್​ನ ದೇಶೀಯ ಕ್ರಿಕೆಟ್ ತಂಡದಲ್ಲಿ ಜತೆಯಾಗಿ ಆಡಿದ್ದಾರೆ. ಹಲವು ವರ್ಷಗಳಿಂದ ಗೆಳೆತನ ಹೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ಸಮಯದಲ್ಲಿಯೂ, ಅಭಿಷೇಕ್ ಗುಜರಾತ್​​ ವಿರುದ್ಧದ ಎಸ್ಆರ್​ಎಚ್​ ಪಂದ್ಯದ ವೇಳೆ ಶುಭ್​ಮನ್​​ಗೆ ತಮ್ಮ ಕುಟುಂಬವನ್ನು ಪರಿಚಯ ಮಾಡಿಸಿಕೊಟ್ಟಿದ್ದರು.

ಇದನ್ನೂ ಓದಿ: WCPL 2024 : ಸಿಪಿಎಲ್​​ನ ಟ್ರಿನ್​ಬ್ಯಾಗೊ ರೈಡರ್ಸ್​ ತಂಡಕ್ಕೆ ಜೆಮಿಮಾ, ಶಿಖಾ ಸೇರ್ಪಡೆ

ಭಾರತಕ್ಕೆ ಭರ್ಜರಿ ವಿಜಯ

ರವಿ ಬಿಷ್ಣೋಯ್, ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್ ಅವರಂತಹ ಅತ್ಯುತ್ತಮ ಬೌಲಿಂಗ್ ಪ್ರದರ್ಶನದೊಂದಿಗೆ ಭಾರತ ಗೆಲುವು 100 ರನ್​ ಸಾಧಿಸಿದೆ. ಈ ಮೂಲಕ ಸರಣಿಯಲ್ಲಿ 1-1 ಸಮಬಲದ ಸೃಷ್ಟಿಯಾಗಿದೆ. ಬೌಲಿಂಗ್​ನಲ್ಲಿ ಆವೇಶ್ ಅವರ 3/15, ಬಿಷ್ಣೋಯ್ ಅವರ 2/11 ಮತ್ತು ಮುಖೇಶ್ ಅವರ 3/37 ಸ್ಪೆಲ್​ಗಳು ಭಾರತಕ್ಕೆ ನೆರವಾಯಿತು. ಸಿಕಂದರ್​ ರಾಜಾ ಅವರ ಜಿಂಬಾಬ್ವೆ ತಂಡ ಕೇವಲ 134 ರನ್​ಗಳಿಗೆ ಆಲ್​ಔಟ್ ಆಯಿತು. ಬುಧವಾರ (ಜುಲೈ9ರಂದು) ಮೂರನೇ ಪಂದ್ಯ ನಡೆಯಲಿದೆ.

Exit mobile version