Site icon Vistara News

Manu Bhaker : ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಐತಿಹಾಸಿಕ ಪದಕ ಗೆದ್ದ ಮನು ಭಾಕರ್ ಗೆ ಪ್ರಧಾನಿ ಮೋದಿ ಅಭಿನಂದನೆ

Manu Bhaker

ನವದೆಹಲಿ: 2024 ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು ಭಾರತದ ಮೆಡಲ್​ಗಳ ಖಾತೆ ತೆರೆದ ಹರಿಯಾಣದ ಮನು ಭಾಕರ್ (Manu Bhaker) ಅವರನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಅಭಿನಂದಿಸಿದ್ದಾರೆ. ಒಲಿಂಪಿಕ್ ಕ್ರೀಡಾಕೂಟದಲ್ಲಿ ಶೂಟಿಂಗ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ 22 ವರ್ಷದ ಮನು ಭಾಕರ್ ಪಾತ್ರರಾಗಿದ್ದಾರೆ. ಅಭಿನವ್ ಬಿಂದ್ರಾ, ರಾಜ್ಯವರ್ಧನ್ ಸಿಂಗ್ ರಾಥೋಡ್, ವಿಜಯ್ ಕುಮಾರ್ ಮತ್ತು ಗಗನ್ ನಾರಂಗ್ ನಂತರ ಶೂಟಿಂಗ್​​ನಲ್ಲಿ ಒಲಿಂಪಿಕ್ ಪದಕ ಗೆದ್ದ ಐದನೇ ಶೂಟರ್ ಅವರಾಗಿದ್ದಾರೆ.

ಇದೊಂದು ಐತಿಹಾಸಿಕ ಪದಕ. ಪ್ಯಾರಿಸ್​ ಒಲಿಂಪಿಕ್ಸ್​​ನಲ್ಲಿ ಭಾರತಕ್ಕಾಗಿ ಮೊದಲ ಪದಕ ಗೆದ್ದಿದ್ದಕ್ಕೆ ಅಭಿನಂದನೆಗಳು. ಕಂಚಿನ ಪದಕಕ್ಕೆ ಶುಭಾಶಯಗಳು. ಈ ಯಶಸ್ಸು ಇನ್ನೂ ವಿಶೇಷವಾಗಿದೆ. ಏಕೆಂದರೆ ಅವರು ಭಾರತಕ್ಕಾಗಿ ಶೂಟಿಂಗ್​​​ನಲ್ಲಿ ಪದಕ ಗೆದ್ದ ಮೊದಲ ಮಹಿಳೆಯಾಗಿದ್ದಾರೆ ಎಂಬುದು ನಂಬಲಾಗದ ಸಾಧನೆ ” ಎಂದು ಪಿಎಂ ಮೋದಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಕೂಡ ಹರಿಯಾಣದ ಮಗಳಿಂದ ಇಡೀ ದೇಶ ನಿರೀಕ್ಷಿಸುತ್ತಿದ್ದ ಪದಕದ ಭರವಸೆ ಈಡೇರಿದೆ ಎಂದು ಹೇಳಿದ್ದಾರೆ.

ದೇಶದ ಹೆಮ್ಮೆಯ ಮಹಿಳಾ ಶೂಟರ್ ಮನು ಭಾಕರ್ ಪ್ಯಾರಿಸ್​ನಲ್ಲಿ ತಮ್ಮ ಶಕ್ತಿ ತೋರಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ 10 ಮೀಟರ್ ಮಹಿಳಾ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಮನು ಭಾಕರ್ ದೇಶಕ್ಕೆ ಕಂಚಿನ ಪದಕ ಗೆದ್ದಿದ್ದಾರೆ ಎಂದು ಸೈನಿ ಪೋಸ್ಟ್ ಮಾಡಿದ್ದಾರೆ.

ಇಂದು, 22 ವರ್ಷದ ಮನು ಭಾಕರ್ ಇಡೀ ದೇಶ ಮತ್ತು ಹರಿಯಾಣ ರಾಜ್ಯವು ಹೆಮ್ಮೆಪಡುವಂತಹ ಸಾಧನೆಯನ್ನು ಮಾಡಿದ್ದಾರೆ. ಪ್ರತಿಯೊಬ್ಬ ಹರ್ಯಾಣ ಜನ ಎದೆ ಉಬ್ಬಿಸಿಕೊಂಡು ನಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಎಕ್ಸ್ ಗೆ ತೆರಳಿ ಮಹಿಳಾ ಅಥ್ಲೀಟ್ ಗೆ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.

“ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶೂಟಿಂಗ್​​ನಲ್ಲಿ 12 ವರ್ಷಗಳ ಪದಕಗಳ ಬರವನ್ನು ಕೊನೆಗೊಳಿಸಿದ್ದಾರೆ. ಈ ಸಾಧನೆಯೊಂದಿಗೆ ಮನು ಭಾಕರ್​ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Paris Olympics Boxing: 16ರ ಸುತ್ತಿಗೇರಿದ​ ಬಾಕ್ಸರ್​​ ನಿಖತ್ ಜರೀನ್; ಮುಂದಿನ ಪಂದ್ಯದಲ್ಲಿ ಕಠಿಣ ಸವಾಲು

ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಮನು ಭಾಕರ್ ಅವರನ್ನು ಅಭಿನಂದಿಸಿದ್ದಾರೆ ಮತ್ತು “ಭಾರತಕ್ಕೆ ಮೊದಲ ಪದಕ ಪಡೆದ ಮನು ಭಾಕರ್ ಅವರಿಗೆ ಅಭಿನಂದನೆಗಳು ಎಂದು ಬರೆದುಕೊಂಡಿದ್ದಾರೆ.

Exit mobile version