Site icon Vistara News

IPL 2024 : ಬುದ್ಧಿ ಹೇಳಿದರೂ ಕೇಳದ ಕೆಕೆಆರ್​ ಬೌಲರ್​ ರಾಣಾಗೆ ಮತ್ತೆ ದಂಡ ; ಒಂದು ಪಂದ್ಯದಿಂದ ಸಸ್ಪೆಂಡ್​​

IPL 2024

ಬೆಂಗಳೂರು: ಐಪಿಎಲ್ 2024 ರ ಋತುವಿನಲ್ಲಿ ಎರಡನೇ ಬಾರಿಗೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಕೆಕೆಆರ್ ವೇಗದ ಬೌಲರ್ ಹರ್ಷಿತ್ ರಾಣಾ ಅವರನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗಿದೆ. ಅವರಿಗೆ ಪಂದ್ಯದ ಶುಲ್ಕದ ಶೇಕಡಾ 100 ರಷ್ಟು ದಂಡ ವಿಧಿಸಲಾಗಿದೆ. ಏಪ್ರಿಲ್ 29 ರ ಮಂಗಳವಾರ ಈಡನ್ ಗಾರ್ಡನ್ಸ್​​ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಕೆಕೆಆರ್ ಗೆಲುವಿನ ಸಂದರ್ಭದಲ್ಲಿ ಹರ್ಷಿತ್ ಎರಡನೇ ಅಪರಾಧ ಎಸಗಿದ್ದಾರೆ. ಐಪಿಎಲ್ 2024 ರಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ನಿಷೇಧ ಶಿಕ್ಷೆ ಎದುರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಹರ್ಷಿತ್ ರಾಣಾ ಪಾತ್ರರಾಗಿದ್ದಾರೆ.

ಈಡನ್ ಗಾರ್ಡನ್ಸ್​​ನಲ್ಲಿ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಹರ್ಷಿತ್ ರಾಣಾ 4 ಓವರ್​​ಗಳಲ್ಲಿ 28 ರನ್​ ನೀಡಿ 2 ವಿಕೆಟ್ ಪಡೆದು ಕೆಕೆಆರ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಂದ್ಯದ 7 ನೇ ಓವರ್​ನಲ್ಲಿ ಎಡಗೈ ಬ್ಯಾಟ್ಸ್ಮನ್ ಅಭಿಷೇಕ್​ ಪೊರೆಲ್​ ವಿಕೆಟ್ ಪಡೆದ ನಂತರ ಅವರತ್ತ ಕೈಬೀಸಿ ಲೇವಡಿ ಮಾಡಿದ್ದಾರೆ. ಇದು ಐಪಿಎಲ್​ ನಿಯಮಗಳ ಉಲ್ಲಂಘನೆಯಾಗಿದೆ. ಈ ರೀತಿಯ ತಪ್ಪು ಮಾಡುತ್ತಿರುವುದು ಎರಡನೇ ಬಾರಿಯಾಗಿರುವ ಕಾರಣ ಅವರಿಗೆ ನಿಷೇಧ ಶಿಕ್ಷೆ ನೀಡಲಾಗಿದೆ. ಹೀಗಾಗಿ ಮೇ 3 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ವಿರುದ್ಧದ ಕೆಕೆಆರ್ ಪಂದ್ಯಕ್ಕೆ ಹರ್ಷಿತ್ ಲಭ್ಯವಿರುವುದಿಲ್ಲ.

ಮಾರ್ಚ್ 23 ರಂದು ಎಸ್ಆರ್​ಎಚ್​ ವಿರುದ್ಧದ ಕೆಕೆಆರ್ ಪಂದ್ಯದ ವೇಳೆ ಮೊದಲ ಬಾರಿಗೆ ನಿಯಮ ಉಲ್ಲಂಘಿಸಿದ್ದಕ್ಕಾಗಿ ಹರ್ಷಿತ್ ರಾಣಾಗೆ ದಂಡ ವಿಧಿಸಲಾಗಿತ್ತು. ಈಡನ್ ಗಾರ್ಡನ್ಸ್​ನಲ್ಲಿ ನಡೆದ ಆ ಪಂದ್ಯದಲ್ಲಿ ಬ್ಯಾಟರ್​ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದ ಫ್ಲೈಯಿಂಗ್ ಕಿಸ್ ನೀಡಿದ್ದರು. ಅದಕ್ಕಾಗಿ ಅವರಿಗೆ ದಂಡ ವಿಧಿಸಲಾಗಿತ್ತು.

“ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ರಾಣಾ ಲೆವೆಲ್ 1 ಅಪರಾಧವನ್ನು ಮಾಡಿದ್ದಾರೆ. ಅವರು ಅಪರಾಧವನ್ನು ಒಪ್ಪಿಕೊಂಡರು ಮತ್ತು ಮ್ಯಾಚ್ ರೆಫರಿಯ ಅನುಮತಿಯನ್ನು ಸ್ವೀಕರಿಸಿದ್ದರೆ. ನಿಯಮಗಳ ಲೆವೆಲ್ 1 ಉಲ್ಲಂಘನೆಗಾಗಿ ಮ್ಯಾಚ್ ರೆಫರಿ ನಿರ್ಧಾರವು ಅಂತಿಮ ಮತ್ತು ಬದ್ಧವಾಗಿರುತ್ತದೆ. ಈ ಹಿಂದೆ ಐಪಿಎಲ್ ನೀತಿ ಸಂಹಿತೆಯಡಿ ಈ ಆಟಗಾರನಿಗೆ ದಂಡ ವಿಧಿಸಲಾಗಿತ್ತು, “ಎಂದು ಐಪಿಎಲ್ ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ IPL 2024 : ಐಪಿಎಲ್ ಪ್ಲೇಆಫ್​ ಹಂತಕ್ಕೆ ಇಂಗ್ಲೆಂಡ್ ಆಟಗಾರರು ಅಲಭ್ಯ; ಇದಕ್ಕೂ ಒಂದು ಕಾರಣವಿದೆ

ಡೆಲ್ಲಿ ನಾಯಕ ರಿಷಭ್ ಪಂತ್ ಸೇರಿದಂತೆ ಕ್ಯಾಪಿಟಲ್ಸ್ ತಂಡದ ಒಂದೆರಡು ಕ್ಯಾಚ್​​ ಳನ್ನು ಬಿಟ್ಟುಕೊಟ್ಟ ನಂತರ ಒತ್ತಡದಲ್ಲಿದ್ದ ಹರ್ಷಿತ್ ರಾಣಾ ಕೋಪಗೊಂಡಿದ್ದರು. ಆದಾಗ್ಯೂ, ಡಿಸಿಯನ್ನು 20 ಒವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 153 ರನ್​ಗಳಿಗೆ ನಿಯಂತ್ರಿಸಿತ್ತು. ಫಿಲ್ ಸಾಲ್ಟ್ 33 ಎಸೆತಗಳಲ್ಲಿ 68 ರನ್ ಸಿಡಿಸಿದ ಕಾರಣ ಕೆಕೆಆರ್ ಬೆವರು ಸುರಿಸದೆ ಗುರಿ ತಲುಪಿತು.

ಹರ್ಷಿತ್ ರಾಣಾ 8 ಪಂದ್ಯಗಳಲ್ಲಿ 11 ವಿಕೆಟ್ ಪಡೆದು ಕೆಕೆಆರ್ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.

Exit mobile version