ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರಿಗೆ ರಾಮ ಮಂದಿರದ ಪ್ರತಿಕೃತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯ ಭವ್ಯ ರಾಮ ದೇವಾಲಯವನ್ನು ಜನವರಿ 22ರಂದು ಪ್ರಧಾನಿ ಮೋದಿ ಉದ್ಘಾಟಿಸಿದ್ದರು. ಅದೀಗ ಭಾರತದ ಹೆಮ್ಮೆ ಹಾಗೂ ಸಾಂಸ್ಕೃತಿಕ ಸಂಕೇತವಾಗಿದೆ. ಅದನ್ನು ಗಣರಾಜ್ಯೋತ್ಸವ (Republic day 2024) ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮ್ಯಾಕ್ರೋನ್ ಅವರಿಗೆ ನೀಡಲಾಯಿತು.
ಪಿಎಂ ಮೋದಿ ಮತ್ತು ಮ್ಯಾಕ್ರನ್ ಜೈಪುರದಲ್ಲಿ ಗುರುವಾರ ಚಾಯ್ಪೆ ಚರ್ಚಾ ನಡೆಸಿದ್ದಾರೆ. ಚಹಾ ಅಂಗಡಿಗೆ ಭೇಟಿ ನೀಡಿ ಚಹಾ ಕುಡಿಯುತ್ತಾ ಪರಸ್ಪರ ಸಂವಹನ ನಡೆಸಿದರು. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಯುಪಿಐ ಬಳಸಿ ಅಲ್ಲಿ ಹಣ ಪಾವತಿ ಮಾಡಿದ್ದಾರೆ. ಜೈಪುರದ ಹವಾ ಮಹಲ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರಿಗೆ ಯುಪಿಐ ಪಾವತಿ ವ್ಯವಸ್ಥೆಯನ್ನು ಮೋದಿ ವಿವರಿಸಿದರು.
#WATCH | Rajasthan: Prime Minister Narendra Modi gifts a replica of Ram Mandir to French President Emmanuel Macron, in Jaipur. pic.twitter.com/l9K91lOOt8
— ANI (@ANI) January 25, 2024
ಹವಾ ಮಹಲ್ ಗೆ ಭೇಟಿ ನೀಡುವ ಮೊದಲು ಪ್ರಧಾನಿ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಜೈಪುರದಲ್ಲಿ ಮೆಗಾ ರೋಡ್ ಶೋ ನಡೆಸಿದರು. ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಫ್ರೆಂಚ್ ಅಧ್ಯಕ್ಷರು ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ.
ಭರ್ಜರಿ ಸ್ವಾಗತ
ರಾಜಸ್ಥಾನದ ಜೈಪುರದಲ್ಲಿ ರೋಡ್ ಶೋ ನಡೆಸಿದ ಪ್ರಧಾನಿ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರಿಗೆ ಭರ್ಜರಿ ಸ್ವಾಗತ ದೊರೆಯಿತು. ಮ್ಯಾಕ್ರನ್ ಅಲ್ಲಿ ನೆರೆದಿದ್ದ ಜನರತ್ತ ಕೈ ಬೀಸಿದರು. ರೋಡ್ ಶೋಗೆ ಮೊದಲು ಮ್ಯಾಕ್ರನ್ ಜೈಪುರದ ಪಿಂಕ್ ಸಿಟಿಯ ಜಂತರ್ ಮಂತರ್ಗೆ ಭೇಟಿ ನೀಡಿದ್ದರು. ಈ ವೇಳೆ ಮೋದಿ ಹಾಗೂ ಮ್ಯಾಕ್ರನ್ ಪರಸ್ಪರ ಅಭಿನಂದಿಸಿಕೊಂಡರು. ನಂತರ ಅವರು ಜಂತರ್ ಮಂತರ್ ನೋಡಲು ಹೋದರು. ಜಂತರ್ ಮಂತರ್ ಮಹಾರಾಜ ಸವಾಯಿ ಜೈ ಸಿಂಗ್ ಸ್ಥಾಪಿಸಿದ ಪ್ರಸಿದ್ಧ ಸೌರ ವೀಕ್ಷಣಾಲಯವಾಗಿದೆ. ಇದನ್ನು ಜುಲೈ 2010ರಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ.
ಇದನ್ನೂ ಓದಿ : Ram Mandir: ಮೊದಲ ದಿನವೇ ರಾಮಮಂದಿರಕ್ಕೆ 5 ಲಕ್ಷ ಜನ ಭೇಟಿ; 3 ಕೋಟಿ ರೂ. ಆದಾಯ
ಮ್ಯಾಕ್ರನ್ ರಾಜಸ್ಥಾನದ ಜೈಪುರದ ಅಂಬರ್ ಕೋಟೆಗೆ ಭೇಟಿ ನೀಡಿದರು. ಅಲ್ಲಿ ನೆರೆದಿದ್ದ ಶಾಲಾ ವಿದ್ಯಾರ್ಥಿಗಳನ್ನು ಸಹ ಅವರು ಭೇಟಿಯಾದರು. ಕೋಟೆಗೆ ಭೇಟಿ ನೀಡಿದ ಫ್ರೆಂಚ್ ಅಧ್ಯಕ್ಷರೊಂದಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ರಾಜಸ್ಥಾನದ ಉಪಮುಖ್ಯಮಂತ್ರಿ ದಿಯಾ ಕುಮಾರಿ ಇದ್ದರು. ಕೋಟೆಯಲ್ಲಿ, ಮ್ಯಾಕ್ರನ್ ಜೈಶಂಕರ್ ಮತ್ತು ದಿಯಾ ಅವರೊಂದಿಗೆ ಫೋಟೋಗೆ ಪೋಸ್ ನೀಡಿದರು ಮ್ಯಾಕ್ರೋನ್ ರಾಜಸ್ಥಾನಿ ಚಿತ್ರಕಲೆ ಮತ್ತು ಕಲೆಯನ್ನು ಶ್ಲಾಘಿಸಿದರು ಮತ್ತು ಅಂಬರ್ ಕೋಟೆಯಲ್ಲಿ ಕಲಾವಿದರೊಂದಿಗೆ ಸಂವಹನ ನಡೆಸಿದರು.
ಮುಖ್ಯ ಅತಿಥಿ
ನವದೆಹಲಿಯಲ್ಲಿ ನಾಳೆ ನಡೆಯಲಿರುವ 75 ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಫ್ರೆಂಚ್ ಅಧ್ಯಕ್ಷರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಮ್ಯಾಕ್ರನ್ ಅವರ ಅಧಿಕೃತ ಭೇಟಿಯು ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಫ್ರಾನ್ಸ್ನ ಆರನೇ ಉಪಸ್ಥಿತಿಯಾಗಿದೆ.
ಭಾರತಕ್ಕೆ ಭೇಟಿ ನೀಡಲು, ಮ್ಯಾಕ್ರನ್ ಅವರೊಂದಿಗೆ ಸ್ಟೀಫನ್ ಸೆಜೌರ್ನ್ (ಯುರೋಪ್ ಮತ್ತು ವಿದೇಶಾಂಗ ವ್ಯವಹಾರಗಳು), ಸೆಬಾಸ್ಟಿಯನ್ ಲೆಕಾರ್ನು (ಸಶಸ್ತ್ರ ಪಡೆಗಳು) ಮತ್ತು ರಚಿಡಾ ಡಾಟಿ (ಸಂಸ್ಕೃತಿ) ಅವರನ್ನು ಒಳಗೊಂಡ ಸಚಿವರ ನಿಯೋಗವಿದೆ. ಕಳೆದ ವರ್ಷ ಜುಲೈ 14 ರಂದು ಬಾಸ್ಟಿಲ್ ಡೇ ಪರೇಡ್ನಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಲು ಪ್ರಧಾನಿ ಮೋದಿ ಫ್ರಾನ್ಸ್ಗೆ ಪ್ರಯಾಣಿಸಿದ್ದ ಕೆಲವೇ ತಿಂಗಳ ನಂತರ ಫ್ರೆಂಚ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದಾರೆ.