ನವದೆಹಲಿ: ಭಾರತದ ಮಿಲಿಟರಿ ಶಕ್ತಿಯ ಸ್ವಾಲಂಬನೆ ಹಾಗೂ ತಾಂತ್ರಿಕ ನೈಪುಣ್ಯತೆಯ ಪ್ರದರ್ಶನವಾಗಿರುವ “ಭಾರತ್ ಶಕ್ತಿ’ ಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಪಾಲ್ಗೊಳ್ಳಲಿದ್ದಾರೆ. ಮಾರ್ಚ್ 12 ರಂದು ರಾಜಸ್ಥಾನದ ಪೋಖ್ರಾನ್ನಲ್ಲಿ ಈ ಪ್ರದರ್ಶನ ನಡೆಯಲಿದೆ. ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲಿ ರಕ್ಷಣಾ ವಿಭಾಗದ ಮುಖ್ಯಸ್ಥ ಜನರಲ್ ಅನಿಲ್ ಚೌಹಾಣ್ ಸೇರಿದಂತೆ ಮೂರು ಸೇನಾ ವಿಭಾಗದ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಪೋಖ್ರಾನ್ನಲ್ಲಿ ನಡೆಯಲಿರುವ ಯುದ್ಧ ಸಾಮಗ್ರಿಗಳ ಪ್ರದರ್ಶನವು ಪ್ರಧಾನಿ ಮೋದಿಯವರ ‘ಆತ್ಮನಿರ್ಭರ ಭಾರತ್’ ಪರಿಕಲ್ಪನೆಯನ್ನು ಆಧರಿಸಿದೆ. ಅದೇ ರೀತಿ ಮಿಲಿಟರಿ ವ್ಯವಹಾರಗಳಲ್ಲಿ ಭಾರತ ಕೇಂದ್ರಿತ ಉತ್ಪಾದನಾ ಕ್ರಾಂತಿಗೆ ಉತ್ತೇಜನವಾಗಲಿದೆ. ಈ ಪ್ರದರ್ಶನವು ಭಾರತಕ್ಕಿರುವ ಭದ್ರತಾ ಬೆದರಿಕೆಗಳಿಗೆ ಪ್ರತಿ ತಂತ್ರವಾಗಿದೆ.
ಭಾರತೀಯ ನಿರ್ಮಿತ ಯುದ್ಧ ತಂತ್ರಗಳು ಮತ್ತು ನೆಟ್ವರ್ಕ್ ಕೇಂದ್ರಿತ ವ್ಯವಸ್ಥೆಗಳ ಪರಿಣಾಮವನ್ನು ಪರೀಕ್ಷಿಸುವುದು ಮತ್ತು ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಯನ್ನು ಪ್ರದರ್ಶಿಸುವುದು ‘ಭಾರತ್ ಶಕ್ತಿ’ ಯ ಉದ್ದೇಶವಾಗಿದೆ.
ಜಲಾಂತರ್ಗಾಮಿ ಹಡಗು ನಿರ್ಮಾಣ ಮತ್ತು ವಿಮಾನ ಎಂಜಿನ್ ಉತ್ಪಾದನಾ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಕೇಂದ್ರಿತ ಅಭಿವೃದ್ಧಿ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯಲ್ಲಿ ಸ್ವಾವಲಂಬನೆ ಸಾಧಿಸುವ ಪ್ರಧಾನಿ ಮೋದಿಯವರ ದೃಷ್ಟಿಕೋನವಾಗಿದ್ದು, ಅದು ಈ ಪ್ರದರ್ಶನದಲ್ಲಿ ಅನಾವರಣಗೊಳ್ಳಲಿದೆ. ವಿಶೇಷವೆಂದರೆ, ಭಾರತೀಯ ಸೇನೆಯು ಶೇಕಡಾ 100 ರಷ್ಟು ಸ್ವದೇಶಿಕವಾಗಿದೆ.
ಇದನ್ನೂ ಓದಿ : Anant Ambani: `ನಾಟು ನಾಟು’ಗೆ ಸಖತ್ ಸ್ಟೆಪ್ಸ್ ಹಾಕಿದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್!
‘ಭಾರತ್ ಶಕ್ತಿ’ ಪ್ರದರ್ಶನವು ಸಂವಹನ ವ್ಯವಸ್ಥೆಗಳು ಮತ್ತು ನೆಟ್ವರ್ಕ್ಗಳ ದೃಢತೆ ಮತ್ತು ಸಮಗ್ರತೆಗೆ ಸಾಕ್ಷಿಯಾಗಲಿದೆ. ಪ್ರತಿಕೂಲ ಪರಿಸ್ಥಿತಿಗಳಲ್ಲಿ ಹ್ಯಾಕಿಂಗ್ ತಡೆಗೂ ನೆರವಾಗಲಿದೆ. ಈ ಸಮರಾಭ್ಯಾಸವು ಮೂರು ರಕ್ಷಣಾ ವಿಭಾಗಗಳ ಒಟ್ಟು ಶಕ್ತಿಯನ್ನು ಪ್ರದರ್ಶಿಸುತ್ತದೆ.
ತೇಜಸ್ ಯುದ್ಧ ವಿಮಾನ, ಕೆ -9 ಫಿರಂಗಿಗಳು, ದೇಶೀಯ ಡ್ರೋನ್ಗಳು, ಪಿನಾಕಾ ಮಲ್ಟಿ-ಬ್ಯಾರೆಲ್ ರಾಕೆಟ್ ಲಾಂಚರ್ಗಳು ಮತ್ತು ಕ್ಷಿಪಣಿಗಳನ್ನು ಪ್ರದರ್ಶಿಸಲಾಗುತ್ತದೆ. ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಪೋಖ್ರಾನ್ ಫೀಲ್ಡ್ ಫೈರಿಂಗ್ ರೇಂಜ್ನಲ್ಲಿ ಭಾರತೀಯ ವಾಯುಪಡೆಯ ಅತಿದೊಡ್ಡ ಯುದ್ಧ ವ್ಯಾಯಾಮ ವಾಯುಶಕ್ತಿ -2024 ರಲ್ಲಿ ಭಾಗವಹಿಸಿದ್ದರು. ರಫೇಲ್ ಯುದ್ಧ ವಿಮಾನ ಸೇರಿದಂತೆ 140ಕ್ಕೂ ಹೆಚ್ಚು ವಿಮಾನಗಳು ಮತ್ತು ಹೆಲಿಕಾಪ್ಟರ್ಗಳು ಈ ಅಭ್ಯಾಸದಲ್ಲಿ ಭಾಗವಹಿಸಿದ್ದವು.