ಚಿಕ್ಕಮಗಳೂರು: ಶಿವಮೊಗ್ಗಕ್ಕೆ ಇಂದು ಲೋಕಸಭೆ ಚುನಾವಣೆ (Lok Sabha Election 2024) ಪ್ರಚಾರಾರ್ಥ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ಮೋದಿ ಸಾಗಲಿರುವ 10 ಕಿ.ಮೀ ರಸ್ತೆಯನ್ನು ಸಾರ್ವಜನಿಕರ ಬಳಕೆಗೆ ಬಂದ್ ಮಾಡಲಾಗಿದೆ.
ಶಿವಮೊಗ್ಗ ನಗರದಾದ್ಯಂತ ಪೊಲೀಸ್ ಬಿಗಿ ಭದ್ರತೆ ವಿಧಿಸಲಾಗಿದ್ದು, ವಿಮಾನ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವವರೆಗೂ ರಸ್ತೆ ಬಂದ್ ಮಾಡಲಾಗುತ್ತಿದೆ. ಬೆಳಗ್ಗೆ 11 ಗಂಟೆಯ ಬಳಿಕ ಸಾರ್ವಜನಿಕರ ವಾಹನಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಸಹ್ಯಾದ್ರಿ ಸರ್ಕಲ್, ಹೊಳೆ ಸ್ಟಾಪ್, ಅಮೀರ್ ಅಹ್ಮದ್ ಸರ್ಕಲ್, ಶಿವಪ್ಪ ನಾಯಕ ಸರ್ಕಲ್, ಕೆಎಸ್ಆರ್‌ಟಿಸಿ ಬಸ್‌ಸ್ಟ್ಯಾಂಡ್ ಸರ್ಕಲ್, ಸರ್ಕ್ಯೂಟ್ ಹೌಸ್ ಸರ್ಕಲ್‌ಗಳಲ್ಲಿ ಓಡಾಟ ನಿರ್ಬಂಧಿಸಲಾಗಿದೆ.
ರಸ್ತೆಯ ಎರಡು ಬದಿಗಳಿಗೂ ಬ್ಯಾರಿಕೇಡ್ ಹಾಕಿ ಮುನ್ನೆಚ್ಚರಿಕೆ ನೀಡಲಾಗಿದ್ದು, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ, ಸಾರ್ವಜನಿಕರ ಅಗತ್ಯ ಕಾರ್ಯಗಳಿಗೆ ಓಡಾಟಕ್ಕೆ ಸದ್ಯಕ್ಕೆ ಅವಕಾಶ ನೀಡಲಾಗಿದೆ. 11 ಗಂಟೆಯ ಬಳಿಕ 10 ಕಿ.ಮೀ ಮಾರ್ಗ ಸಂಪೂರ್ಣ ಬಂದ್ ಆಗಲಿದೆ.
ಮೋದಿಯವರು ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಫ್ರೀಡಂ ಪಾರ್ಕ್ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಎರಡು ಗೇಟ್‌ಗಳ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮೂರು ಹಂತಗಳಲ್ಲಿ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಮೋದಿಯವರು ಎಂಟ್ರಿ ಕೊಡುವ ಗೇಟ್‌ನಲ್ಲಿ ಓಡಾಟ ನಿರ್ಬಂಧಿಸಲಾಗಿದೆ. 10 ಗಂಟೆ ನಂತರ ವಿನೋಬಾ ರಸ್ತೆಯನ್ನು ಬಂದ್ ಮಾಡಲಿದ್ದಾರೆ. ಅಂಗಡಿ ಮುಂಗಟ್ಟುಗಳನ್ನು ಸಹ ಬಂದ್ ಮಾಡಿಸಲಾಗಿದೆ.
ಮೋದಿ ಬರುತ್ತಿರುವುದು ಶಕ್ತಿ: ರಾಘವೇಂದ್ರ
ಶಿವಮೊಗ್ಗದಲ್ಲಿ ಕಾರ್ಯಕ್ರಮ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದ ಸಂಸದ ರಾಘವೇಂದ್ರ, ಪ್ರಧಾನಿ ಮೋದಿ ಬರುತ್ತಿರುವುದು ನಮಗೆ ಶಕ್ತಿ ಬಂದ ಹಾಗೆ ಆಗಿದೆ ಎಂದು ಹೇಳಿದ್ದಾರೆ. ವಿಸ್ತಾರ ನ್ಯೂಸ್‌ಗೆ ಅವರು ಹೇಳಿಕೆ ನೀಡಿದ್ದು, “ನಮ್ಮ ಪುಣ್ಯ, ಮೊದಲು ಶಿವಮೊಗ್ಗ ಜಿಲ್ಲೆಯಿಂದ ಚುನಾವಣಾ ಪ್ರಚಾರ ಆರಂಭವಾಗಿದೆ. ನಮ್ಮ ತುಂಗೆಯ ನಾಡಿಗೆ ಹೆಮ್ಮೆಯ ಪ್ರಧಾನಿ ಬರುತ್ತಿದ್ದಾರೆ. ಕಾರ್ಯಕ್ರಮಕ್ಕೆ ತುಂಬಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ” ಎಂದಿದ್ದಾರೆ.
“ಮೂರು ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆ ಇದೆ. ಸುತ್ತಮುತ್ತಲಿನ ಜಿಲ್ಲೆಯ ಜನರು ಕೂಡ ಆಗಮಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ವೇದಿಕೆ ಕೂಡ ಅಚ್ಚುಕಟ್ಟಾಗಿ ಸಿದ್ಧವಾಗಿದೆ. ಈ ಬಾರಿಯೂ ಶಿವಮೊಗ್ಗ ಕ್ಷೇತ್ರದಲ್ಲಿ ನಾವು ಗೆಲ್ಲುತ್ತವೆ. ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರದಲ್ಲೂ ಗೆಲ್ಲಲು ಎಲ್ಲ ಪ್ರಯತ್ನ ನಡೆಯುತ್ತಿದೆ. ರಾಜ್ಯ ಹಾಗೂ ರಾಷ್ಟ್ರ ನಾಯಕರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ” ಎಂದಿದ್ದಾರೆ.
ಇದನ್ನೂ ಓದಿ: PM Narendra Modi: ಇಂದು ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ ಅಬ್ಬರದ ಪ್ರಚಾರ; ಈಶ್ವರಪ್ಪ ಬರ್ತಾರಾ?