ಚೆನ್ನೈ: ಹಲವಾರು ತಿಂಗಳ ಲೋಕ ಸಭಾ ಚುನಾವಣಾ ಪ್ರಚಾರದ ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi ) ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ರಾಕ್ ಮೆಮೋರಿಯಲ್ ನಲ್ಲಿ ಕೈಗೊಂಡಿದ್ದ 45 ಗಂಟೆಗಳ ಧ್ಯಾನವನ್ನು ಪೂರ್ಣಗೊಳಿಸಿದ್ದಾರೆ. ಹಿಂದೂ ತತ್ವಜ್ಞಾನಿ ಸ್ವಾಮಿ ವಿವೇಕಾನಂದರು ‘ಭಾರತ ಮಾತೆ’ ಬಗ್ಗೆ ದೈವಿಕ ದರ್ಶನ ಹೊಂದಿದ್ದರು ಎಂದು ನಂಬಲಾಗಿರುವ ಧ್ಯಾನ ಮಂಟಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಆಧ್ಯಾತ್ಮಿಕ ಕೈಂಕರ್ಯ ಮಾಡಿದ್ದರು.
2024 ರ ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನದ ಮುಕ್ತಾಯದೊಂದಿಗೆ ಅವರು ಧ್ಯಾನ ಕಾರ್ಯ ಕೈಗೊಂಡಿದ್ದರು. ಮೇ 30ರ ಗುರುವಾರ ಮೋದಿ ಕನ್ಯಾಕುಮಾರಿಗೆ ಆಗಮಿಸಿದ್ದರು. ಪುರಾಣಗಳ ಪ್ರಕಾರ, ಪಾರ್ವತಿ ದೇವಿಯು ಶಿವನಿಗಾಗಿ ಕಾಯುತ್ತಿದ್ದ ಅದೇ ಸ್ಥಳದಲ್ಲಿ ಒಂದೇ ಕಾಲಿನಲ್ಲಿ ಧ್ಯಾನ ಮಾಡಿದ್ದಳು.
ಇದನ್ನೂ ಓದಿ: Exit Poll 2024: ಸಟ್ಟಾ ಬಜಾರ್, ರಾಜಕೀಯ ಪರಿಣತರ ಪ್ರಕಾರ ಈ ಬಾರಿಯೂ ಮೋದಿ; ನಿಮ್ಮ ಪ್ರಕಾರ ಯಾರಿಗೆ ಅಧಿಕಾರ? ತಿಳಿಸಿ
ಇದು ಭಾರತದ ದಕ್ಷಿಣ ತುದಿಯಾಗಿದೆ. ಇದು ಭಾರತದ ಪೂರ್ವ ಮತ್ತು ಪಶ್ಚಿಮ ಕರಾವಳಿ ಪ್ರದೇಶ ಸಂಗಮವಾಗುವ ಸ್ಥಳವಾಗಿದೆ. ಇದು ಹಿಂದೂ ಮಹಾಸಾಗರ, ಬಂಗಾಳಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಸಂಗಮ ಸ್ಥಳ. ಕನ್ಯಾಕುಮಾರಿಗೆ ಹೋಗುವ ಮೂಲಕ ಮೋದಿ ರಾಷ್ಟ್ರೀಯ ಏಕತೆಯ ಸಂಕೇತವನ್ನು ಸಾರಿದ್ದರು ಎನ್ನಲಾಗಿದೆ.
ಜೂನ್ 1 ರಂದು ನಡೆಯಲಿರುವ 2024 ರ ಲೋಕಸಭಾ ಚುನಾವಣೆಯ ಅಂತಿಮ ಮತ್ತು ಏಳನೇ ಹಂತದ ಹಿನ್ನೆಲೆಯಲ್ಲಿ ಮೋದಿ ಗುರುವಾರ ಪಂಜಾಬ್ ಹೋಶಿಯಾರ್ಪುರದಲ್ಲಿ ತಮ್ಮ ಚುನಾವಣಾ ಪ್ರಚಾರ ಮುಕ್ತಾಯಗೊಳಿಸಿದರು.
ಸುದೀರ್ಘ ಪ್ರಚಾರ ರ್ಯಾಲಿ
ಮೋದಿ 75 ದಿನಗಳಲ್ಲಿ ರ್ಯಾಲಿಗಳು ಮತ್ತು ರೋಡ್ ಶೋಗಳು ಸೇರಿದಂತೆ ಸುಮಾರು 206 ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅವರು ವಿವಿಧ ಸುದ್ದಿ ಮತ್ತು ಮಾಧ್ಯಮ ವೇದಿಕೆಗಳೊಂದಿಗೆ ಸುಮಾರು 80 ಸಂದರ್ಶನಗಳನ್ನು ಮಾಡಿದ್ದಾರೆ. ಚುನಾವಣಾ ಪ್ರಚಾರದ ಕೊನೆಯಲ್ಲಿ ಪ್ರಧಾನಿ ಆಧ್ಯಾತ್ಮಿಕ ಪ್ರವಾಸಗಳನ್ನು ಕೈಗೊಂಡಿದ್ದರು. 2019ರಲ್ಲಿ ಕೇದಾರನಾಥಕ್ಕೆ ಭೇಟಿ ನೀಡಿದ್ದ ಅವರು, 2014ರಲ್ಲಿ ಶಿವಾಜಿಯ ಪ್ರತಾಪಗಢಕ್ಕೆ ಭೇಟಿ ನೀಡಿದ್ದರು. 543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.
ಬಿಹಾರದ ಮಾಜಿ ಉಪಮುಖ್ಯಮಂತ್ರಿ ಮತ್ತು ಮುಖಂಡ ತೇಜಸ್ವಿ ಯಾದವ್ ಅವರು ಶನಿವಾರ ಕನ್ಯಾಕುಮಾರಿಯಲ್ಲಿ ಮೋದಿಯವರ ನಡೆಸುತ್ತಿರುವ ಆಧ್ಯಾತ್ಮಿಕ ಚಟುವಟಿಕೆಯನ್ನು ಫೋಟೋ ಶೂಟ್” ಎಂದು ಲೇವಡಿ ಮಾಡಿದ್ದರು. ಮೋದಿ ಅವರು ಯಾವುದೇ ಧ್ಯಾನ ಮಾಡುತ್ತಿಲ್ಲ, ಫೋಟೋ ಶೂಟ್ ಮಾತ್ರ ನಡೆಯುತ್ತಿದೆ. ಫೋಟೋ ಶೂಟ್ ಮುಗಿದ ನಂತರ, ಅವರು ಹಿಂತಿರುಗುತ್ತಾರೆ” ಎಂದು ತೇಜಸ್ವಿ ಯಾದವ್ ಹೇಳಿದರು.