Site icon Vistara News

Narendra Modi : ಚಾಂಪಿಯನ್ನರ ಜತೆ ಸ್ಮರಣೀಯ ಸಂಭಾಷಣೆ; ಭಾರತ ಕ್ರಿಕೆಟ್ ತಂಡದ ಜತೆಗಿನ ಮಾತುಕತೆಯ ವಿಡಿಯೊ ಬಿಡುಗಡೆ ಮಾಡಿದ ಮೋದಿ

Narendra Modi

ಬೆಂಗಳೂರು: ವೆಸ್ಟ್​​ ಇಂಡೀಸ್ ಹಾಗೂ ಅಮೆರಿಕದ ಆತಿಥ್ಯದಲ್ಲಿ ನಡೆದ ಟಿ20 ವಿಶ್ವ ಕಪ್​ನಲ್ಲಿ (T20 World Cup) ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ್ದು ಕ್ರಿಕೆಟ್​ ಪ್ರೇಮಿಗಳ ಪಾಲಿಗೆ ಅತ್ಯಂತ ಸಂಭ್ರಮದ ವಿಷಯ. ಅಂತೆಯೇ ಭಾರತಕ್ಕೆ ವಾಪಸಾದ ಟೀಮ್ ಇಂಡಿಯಾ ಸದಸ್ಯರಿಗೆ ಮುಂಬೈನ ಬೀದಿ ಬೀದಿಗಳಲ್ಲಿ ಅದ್ಧೂರಿ ಸ್ವಾಗತ ದೊರಕಿದೆ. ತೆರೆದ ಬಸ್​​ನಲ್ಲಿ ಮೆರವಣಿ, ಐತಿಹಾಸಿಕ ವಾಂಖೆಡೆ ಸ್ಟೇಡಿಯಮ್​​ನಲ್ಲಿ ಅವಿಸ್ಮರಣೀಯ ಸಮಾರಂಭವನ್ನೂ ಆಯೋಜಿಸಲಾಗಿತ್ತು. ಈ ಎಲ್ಲ ಕ್ಷಣಗಳು ಭಾರತೀಯ ಕ್ರಿಕೆಟ್ ಇತಿಹಾಸದ ಪುಸ್ತಕದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲಾಗಿದೆ. ಆದರೆ, ಇದಕ್ಕಿಂತ ಮೊದಲು ಭಾರತಕ್ಕೆ ಏರ್​ ಇಂಡಿಯಾದ ವಿಶೇಷ ವಿಮಾನದಲ್ಲಿ ಬಂದಿಳಿದ ಚಾಂಪಿಯನ್ ಭಾರತ ತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ತಮ್ಮ ನಿವಾಸದಲ್ಲಿ ವಿಶೇಷ ಆತಿಥ್ಯ ನೀಡಿದ್ದರು. ಗುರುವಾರ (ಜುಲೈ4ರಂದು) ಬೆಳಗ್ಗೆ 11 ಗಂಟೆಯಿಂದ 12 ಗಂಟೆಯ ತನಕ ಮೋದಿ ಕ್ರಿಕೆಟಿಗರೊಂದಿಗೆ ಮಾತುಕತೆ ನಡೆಸಿದ್ದರು.

ಮೋದಿ ಹಾಗೂ ಕ್ರಿಕಟಿಗರ ನಡುವಿನ ಸಂಭ್ರಮದ ಕ್ಷಣಗಳು ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಕ್ರಿಕೆಟಿಗರು ಚಾಂಪಿಯನ್ ಎಂದು ಬರೆದುಕೊಂಡಿದ್ದ ಜೆರ್ಸಿಯನ್ನ ಧರಿಸಿಕೊಂಡು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು, ಮೋದಿಯೊಂದಿಗೆ ಕೈ ಕುಲುಕಿ ಮಾತನಾಡಿರುವುದು, ಟ್ರೋಫಿಯೊಂದಿಗೆ ಫೋಟೊ ತೆಗೆಸಿಕೊಂಡಿರುವುದು ವಿಶೇವಾಗಿತ್ತು. ಕೊನೆಯಲ್ಲಿ ಮೋದಿ ಅವರಿಗೆ ಚಾಂಪಿಯನ್​ ಎಂದು ಬರೆದಿದ್ದ 1 ಸಂಖ್ಯೆಯ ಜೆರ್ಸಿಯನ್ನೂ ನೀಡಿದ್ದರು. ಈ ಎಲ್ಲ ಕ್ಷಣಗಳು ಮೋದಿ ಅವರಿಗೆ ಖುಷಿ ಕೊಟ್ಟಿತ್ತು. ಈ ಬಗ್ಗೆ ಅವರು ಶುಕ್ರವಾರ ಸೋಶಿಯಲ್ ಮೀಡಿಯಾ ಪೋಸ್ಟ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರು ‘ವಿಶ್ವ ಟಿ 20 ಚಾಂಪಿಯನ್ ಭಾರತೀಯ ಕ್ರಿಕೆಟ್ ತಂಡದೊಂದಿಗೆ ಅವಿಸ್ಮರಣೀಯ ಸಂಭಾಷಣೆ,’ ಎಂದು ಬರೆದುಕೊಂಡಿದ್ದಾರೆ.

ವಿಶ್ವ ಕಪ್​ ಗೆದ್ದುಕೊಂಡು ಭಾರತಕ್ಕೆ ಬಂದಿದ್ದ ಆಟಗಾರರಿಗೆ ಪ್ರೇರಣಾದಾಯಕ ಮಾತುಗಳಿಂದ ಮೋದಿ ಹುರಿದುಂಬಿಸಿದ್ದರು. ಅಲ್ಲದೆ ಆಟಗಾರರು ಕಠಿಣ ಹಾಗೂ ಒತ್ತಡದ ಸಂದರ್ಭದಲ್ಲಿ ತೋರಿದ ಮನಸ್ಥಿತಿಯನ್ನು ಹೊಗಳಿದ್ದರು. ಈ ಎಲ್ಲ ಮಾತುಕತೆಯ ತುಣುಕುಗಳನ್ನು ಒಟ್ಟಾಗಿಸಿ ಸಣ್ಣ ವಿಡಿಯೊವೊಂದನ್ನು ಮಾಡಿ ನರೇಂದ್ರ ಮೋದಿ ಅವರು ಅಧಿಕೃತ ಹ್ಯಾಂಡಲ್​ ಮೂಲಕ ಶೇರ್ ಮಾಡಲಾಗಿದೆ.

ಯೂಟ್ಯೂಬ್ ಮೂಲಕ ಬಿಡುಗಡೆ ಮಾಡಿರುವ ವಿಡಿಯೊ ಸುಮಾರು 41 ನಿಮಿಷವಿದೆ. ಅದರಲ್ಲಿ ಆಟಗಾರರು ಹಾಗೂ ಮೋದಿ ನಡುವಿನ ನೇರ ಸಂಭಾಷಣೆಯಿದೆ. ಕೋಚ್​ ದ್ರಾವಿಡ್​, ನಾಯಕ ರೋಹಿತ್​, ಸ್ಟಾರ್ ಬ್ಯಾಟರ್​ ವಿರಾಟ್​ ಸೇರಿದಂತೆ ಎಲ್ಲರ ನಡುವಿನ ಸಂಭಾಷಣೆಯನ್ನು ವಿಡಿಯೊ ಮೂಲಕ ವೀಕ್ಷಿಸಬಹುದು.

ಇದನ್ನೂ ಓದಿ: T20 World Cup :​ ವಿಜಯೋತ್ಸವದ ಕ್ಷಣಗಳನ್ನು ಉಲ್ಲೇಖಿಸಿ ಬಿಸಿಸಿಐಗೆ ಕುಟುಕಿದ ಆದಿತ್ಯ ಠಾಕ್ರೆ

ಮೋದಿ ಅವರ ಜತೆ ಆಟಗಾರರು ಉಪಾಹಾರ ಸೇವಿಸಿದರು. ನಂತರ ಕೆಲ ಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಮೋದಿ ವಿಶ್ವಕಪ್‌ ಹೀರೋಗಳನ್ನು ಸನ್ಮಾನಿಸಿ, ಅಭಿನಂದಿಸಿದರು. ಸುಮಾರು 17 ವರ್ಷಗಳ ಬಳಿಕ ಟಿ-20 ವಿಶ್ವಕಪ್‌ ಗೆದ್ದುಕೊಂಡ ರೋಹಿತ್‌ ಶರ್ಮ ಮತ್ತು ತಂಡದ ಗೆಲುವನ್ನು ಪ್ರಧಾನಿ ಕೊಂಡಾಡಿದರು.

ಆಟಗಾರರಿಗೆ ಕರೆ ಮಾಡಿದ್ದ ಮೋದಿ

ಜೂನ್‌ 29ರಂದು ನಡೆದ ಫೈನಲ್‌ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾದ ವಿರುದ್ಧ ಭಾರತ 7 ರನ್‌ಗಳಿಂದ ಜಯ ಸಾಧಿಸಿತ್ತು. ಆ ವೇಳೆ ಆಟಗಾರರಿಗೆ ಕರೆ ಮಾಡಿ ಮೋದಿ ಅಭಿನಂದನೆ ಸಲ್ಲಿಸಿದ್ದರು. ಮೋದಿ ಅವರು ಟೀಮ್‌ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿ, ಅದ್ಭುತ ನಾಯಕತ್ವಕ್ಕಾಗಿ ಅಭಿನಂದನೆ ತಿಳಿಸಿದರು. ಅವರ ಟಿ20 ವೃತ್ತಿ ಜೀವನವನ್ನು ಶ್ಲಾಘಿಸಿದರು. ಜತೆಗೆ ಪ್ರಧಾನಿ ಫೈನಲ್‌ ಪಂದ್ಯದಲ್ಲಿ ಭಾರತವು ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ಸಹಾಯ ಮಾಡಿದ ವಿರಾಟ್ ಕೊಹ್ಲಿ (76 ರನ್) ಅವರ ಆಟವನ್ನೂ ಮೆಚ್ಚಿಕೊಂಡರು. ಜತೆಗೆ ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ನೀಡಿದ ಕೊಡುಗೆಯನ್ನೂ ನೆನಪಿಸಿಕೊಂಡಿದ್ದರು.

Exit mobile version