ನವದೆಹಲಿ: ರಾಮ ಮಂದಿರ (Ram Mandir ) ಉದ್ಘಾಟನೆ ಕುರಿತಂತೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಅವರ ಪುತ್ರಿ ಸುರಣ್ಯ ಅಯ್ಯರ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಜನವರಿ 20, 2024 ಮತ್ತು ಇತರ ದಿನಾಂಕಗಳಲ್ಲಿ ಸುರಣ್ಯ ಅಯ್ಯರ್ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ವಕೀಲ ಮತ್ತು ಬಿಜೆಪಿ ಮುಖಂಡ ಅಜಯ್ ಅಗರ್ವಾಲ್ ದೂರು ನೀಡಿದ್ದಾರೆ.
ಜನವರಿ 20 ರಂದು ಪೋಸ್ಟ್ ಮಾಡಿದ ವೀಡಿಯೊ ಕ್ಲಿಪ್ ಲಿಂಕ್ ಅನ್ನು ಸಹ ಅವರು ಪೊಲೀಸರಿಗೆ ಸಲ್ಲಿಸಿದ್ದಾರೆ. ಸುರಣ್ಯ ಅಯ್ಯರ್ ಅವರು ಜನವರಿ 20, 2024 ಮತ್ತು ಇತರ ದಿನಾಂಕಗಳಲ್ಲಿ ಫೇಸ್ಬುಕ್, ಯೂಟ್ಯೂಬ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಗಂಭೀರ ಆಕ್ಷೇಪಾರ್ಹ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ ಎಂದು ಅಜಯ್ ಅಗರ್ವಾಲ್ ಶನಿವಾರ ದೆಹಲಿ ಸೈಬರ್ ಅಪರಾಧ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸುರಣ್ಯ ಅಯ್ಯರ್ ಅವರ ವೀಡಿಯೊ ಲಿಂಕ್ ಸೇರಿಸಿದ ಬಿಜೆಪಿ ಮುಖಂಡ ಅಜಯ್ ಅಗರ್ವಾಲ್, ಈ ಸಂಬಂಧ ಪ್ರಕರಣ ದಾಖಲಿಸುವಂತೆ ದೆಹಲಿ ಪೊಲೀಸ್ ಅಪರಾಧ ವಿಭಾಗಕ್ಕೆ ವಿನಂತಿಸಿದ್ದಾರೆ.
“ದಯವಿಟ್ಟು ಪೂರ್ಣ ಕ್ಲಿಪ್ ಅನ್ನು ಓದಿ ಮತ್ತು ಸೆಕ್ಷನ್ 153-ಎ (ಧರ್ಮದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತಿದ್ದಕ್ಕಾಗಿ) ಮತ್ತು ಐಪಿಸಿಯ ಸೆಕ್ಷನ್ ಆಧಾರದಲ್ಲಿ ಎಫ್ಐಆರ್ ದಾಖಲಿಸಿ” ಎಂದು ಅಗರ್ವಾಲ್ ಪೊಲೀಸರಿಗೆ ಬರಿದಿದ್ದಾರೆ.
ನಿವಾಸಿಗಳ ಸಂಘದಿಂದಲೇ ಔಟ್
ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲಕ ರಾಮನ ‘ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಸಾಮಾಜಿಕ ಮಾಧ್ಯಮ ಪೋಸ್ಟ್ನಲ್ಲಿ ಖಂಡಿಸಿದ ನಂತರ ದೆಹಲಿಯ ಜಂಗ್ಪುರ ಎಕ್ಸ್ಟೆನ್ಷನ್ನ ನಿವಾಸಿಗಳ ಕಲ್ಯಾಣ ಸಂಘ (ಆರ್ಡಬ್ಲ್ಯುಎ ) ಕಳೆದ ಬುಧವಾರ ಸುರಣ್ಯಾ ಅಯ್ಯರ್ ಅವರನ್ನು ಹೊರಹೋಗುವಂತೆ ಹೇಳಿತ್ತು.
ಶಾಂತಿ ಪ್ರಿಯ ಪ್ರದೇಶದಲ್ಲಿ ನಿಮ್ಮಂತಹ ನಿವಾಸಿಗಳ ದ್ವೇಷ ಭಾಷಣ ಮತ್ತು ಕೃತ್ಯವು ಅತ್ಯಂತ ದುರದೃಷ್ಟಕರ ಎಂದು ನಿವಾಸಿಗಳ ಸಂಘ ನೋಟಿಸ್ ಹೊರಡಿಸಿತ್ತು.
ಇದನ್ನೂ ಓದಿ: ನಾಟಕದಲ್ಲಿ ಸೀತೆ ಧೂಮಪಾನ ಮಾಡುವ ದೃಶ್ಯ; ಪ್ರೊಫೆಸರ್ ಸೇರಿ 6 ವಿದ್ಯಾರ್ಥಿಗಳ ಬಂಧನ
“ಪ್ರತಿಯೊಬ್ಬ ನಾಗರಿಕನಿಗೂ ಹೆಮ್ಮೆಯ ವಿಷಯವಾಗಿರುವ ರಾಮ ಮಂದಿರದ ಪ್ರತಿಷ್ಠಾಪನೆಯ ಬಗ್ಗೆ ನಿಮಗೆ ಅಸಮಾಧಾನವಿದ್ದರೆ, ನೀವು ನ್ಯಾಯಾಲಯಕ್ಕೆ ಹೋಗಿ ಅದರ ತೀರ್ಪನ್ನು ಪ್ರಶ್ನಿಸಬಹುದು. ಆದರೆ ಮತ್ತೊಮ್ಮೆ, ಕಾಲೊ ನಿಯ ಸುತ್ತಲೂ ದ್ವೇಷ ಉಂಟುಮಾಡುವ ಅಂತಹ ಚಟುವಟಿಕೆಗಳನ್ನು ಪರಿಶೀಲಿಸಬೇಡಿ” ಎಂದು ಅದು ಹೇಳಿತ್ತು.
ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ವಿರುದ್ಧ ಪ್ರತಿಭಟಿಸುವ ಬಗ್ಗೆ ನೀವು ಯೋಚಿಸುತ್ತಿದ್ದರೆ, ದಯವಿಟ್ಟು ಬೇರೆ ಕಡೆಗೆ ಹೋಗಬೇಕೆಂದು ನಾವು ಸೂಚಿಸುತ್ತೇವೆ ಎಂದು ನೋಟಿಸ್ನಲ್ಲಿ ತಿಳಿಸಲಾಗಿತ್ತು.