Site icon Vistara News

ಕಾಫಿನಾಡಲ್ಲಿ ವಕೀಲರ ವಿರುದ್ಧ ಪೊಲೀಸರ ಪ್ರತಿಭಟನೆ; ಸಾಮೂಹಿಕ ರಾಜೀನಾಮೆ ಎಚ್ಚರಿಕೆ

police protest in Chikkamagaluru

ಚಿಕ್ಕಮಗಳೂರು: ವಕೀಲನ ಮೇಲೆ ಪೊಲೀಸರ ಹಲ್ಲೆ ಪ್ರಕರಣದಲ್ಲಿ 6 ಪೊಲೀಸರನ್ನು ಅಮಾನತು ಮಾಡಿರುವುದಕ್ಕೆ ಕಾಫಿನಾಡಿನ ಪೊಲೀಸರು ಆಕ್ರೋಶ ಹೊರಹಾಕಿದ್ದಾರೆ. ಚಿಕ್ಕಮಗಳೂರು ನಗರಠಾಣೆ ಮುಂಭಾಗ ಶನಿವಾರ ರಾತ್ರಿ ವಕೀಲರ ವಿರುದ್ಧ ಪ್ರತಿಭಟನೆ ನಡೆಸಿದ ಪೊಲೀಸರು (Police protest), ಸಹಪಾಠಿಗಳನ್ನು ಬಂಧಿಸಿದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಹೆಲ್ಮೆಟ್‌ ಹಾಕದ ಕಾರಣಕ್ಕೆ ಪ್ರೀತಮ್‌ ಎಂಬ ಯುವ ವಕೀಲನ ಮೇಲೆ ನಗರ ಠಾಣೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಪ್ರಕರಣದಲ್ಲಿ ಪಿಎಸ್‌ಐ, ಎಎಸ್‌ಐ, ಮುಖ್ಯ ಪೇದೆ ಹಾಗೂ ಮೂವರು ಪೇದೆಗಳು ಸೇರಿ ಒಟ್ಟು ಆರು ಪೊಲೀಸರನ್ನು ಎಸ್‌ಪಿ ವಿಕ್ರಮ್‌ ಅಮಟೆ ಅಮಾನತು ಮಾಡಿದ್ದಾರೆ. ಜತೆಗೆ ಆರು ಮಂದಿ ವಿರುದ್ಧ ಎಫ್‌ಐಅರ್‌ ದಾಖಲಾಗಿದೆ. ಆದ್ದರಿಂದ ಪ್ರಕರಣದಲ್ಲಿ ಸಹಪಾಠಿಗಳನ್ನು ಯಾವುದೇ ಕಾರಣಕ್ಕೂ ಬಂಧಿಸಬಾರದು, ಪೊಲೀಸರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ಚಿಕ್ಕಮಗಳೂರು ನಗರದ 6 ಠಾಣೆಗಳ ಪೊಲೀಸರು ಪ್ರತಿಭಟನೆಗೆ ಇಳಿದಿದ್ದಾರೆ.

ಇದನ್ನೂ ಓದಿ | Fake Currency : ನಕಲಿ ನೋಟು ಜಾಲದ ಮೇಲೆ NIA ದಾಳಿ; ಬಳ್ಳಾರಿಯಲ್ಲಿ ಒಬ್ಬ ಅರೆಸ್ಟ್‌

ನಗರದ 6 ಠಾಣೆಗಳ 300ಕ್ಕೂ ಹೆಚ್ಚು ಪೊಲೀಸರು ಕೆಲಸ ನಿಲ್ಲಿಸಿ ಪ್ರತಿಭಟನೆಗೆ ಆಗಮಿಸಿದ್ದು, ನಾವ್ಯಾರು ಕೆಲಸ ಮಾಡಲ್ಲ. ಪೊಲೀಸರಿಗೆ ರಕ್ಷಣೆ ಇಲ್ಲ, ಪೊಲೀಸ್ ಕುಟುಂಬಗಳಿಗೆ ಅನ್ಯಾಯ ಆಗಿದೆ‌. ಒಂದು ವೇಳೆ ಪ್ರಕರಣದಲ್ಲಿ ಪೊಲೀಸ್‌ ಸಿಬ್ಬಂದಿಯನ್ನು ಬಂಧಿಸಿದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಸ್‌ಪಿಗೆ ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ

ಅಣ್ಣಾಮಲೈ ಇದ್ದಿದ್ದರೆ ಚೆನ್ನಾಗಿರುತ್ತಿತ್ತು, ಅವರಿಗೆ ಪೋಲಿಸ್ ಸಿಬ್ಬಂದಿ ಬಗ್ಗೆ ಕಾಳಜಿ ಇತ್ತು. ಆದರೆ, ರಾಜ್ಯ ಸರ್ಕಾರಕ್ಕೆ ಕಾಳಜಿ ಇಲ್ಲ ಎಂದು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಪ್ರತಿಭಟನಾಕಾರರು, ಕೈ ಮುಗಿದು ಕೇಳಿಕೊಳ್ತೀವಿ, ದಯಮಾಡಿ ನಮ್ಮ ಸಿಬ್ಬಂದಿಯನ್ನು ಬಂಧಿಸಬೇಡಿ ಎಂದು ಚಿಕ್ಕಮಗಳೂರು ಎಸ್‌ಪಿ ಮುಂದೆ ಕಣ್ಣೀರಿಟ್ಟರು.

ಕುಟುಂಬಗಳಿಗಾಗಿ ಹಗಲು-ರಾತ್ರಿ ಕೆಲಸ ಮಾಡುತ್ತೇವೆ, ನಾಳೆ ನಮಗೆ ಏನಾದ್ರು ಆದ್ರೆ ಜವಾಬ್ದಾರಿ ಯಾರು? ಪೊಲೀಸರಿಗೇ ರಕ್ಷಣೆ ಇಲ್ಲವೆಂದರೆ ಏನು ಮಾಡಬೇಕು, ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ. ಗೃಹ ಸಚಿವ ಪರಮೇಶ್ವರ್ ಕೂಡ ಮೌನ ವಹಿಸಿದ್ದಾರೆ ಎಂದು ಪೊಲೀಸರು ಅಸಮಾಧಾನ ಹೊರಹಾಕಿದ್ದಾರೆ.

ಕಡೂರು- ಮಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ

ಪೊಲೀಸರನ್ನು ಬಂಧಿಸದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಸಿಬ್ಬಂದಿ, ಚಿಕ್ಕಮಗಳೂರಿನಲ್ಲಿ ಕಡೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ಘಟನೆಯಿಂದಾಗಿ ಸಂಚಾರ ದಟ್ಟಣೆ ಉಂಟಾಯಿತು.

ಇದನ್ನೂ ಓದಿ | Pro Pak Slogan: ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಇಬ್ಬರ ಬಂಧನ

ಚಿಕ್ಕಮಗಳೂರು ಎಸ್ಪಿ ಮನವಿಗೂ ಬಗ್ಗದ ಸಿಬ್ಬಂದಿ, 6 ಜನರನ್ನು ಅಮಾನತು ಮಾಡಿದ್ದೀರಿ ಸಾಕು, ಆದರೆ ಅವರನ್ನು ಬಂಧಿಸುವಂತಿಲ್ಲ ಎಂದು ಆಗ್ರಹಿಸಿದರು. ನಗರದ ಹನುಮಂತಪ್ಪ ವೃತ್ತದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪಶ್ಚಿಮ ವಲಯ ಐಜಿಪಿ ಚಂದ್ರಗುಪ್ತ ಭೇಟಿ ನೀಡಿ ಪ್ರತಿಭಟನಾನಿರತರ ಜತೆ ಮಾತುಕತೆ ನಡೆಸುತ್ತಿದ್ದಾರೆ.

Exit mobile version