ಬೆಂಗಳೂರು: ಶಿವಮೊಗ್ಗ ಗಲಭೆ ವಿಷಯದಲ್ಲಿ ತ್ರಿಶೂಲ, ಖಡ್ಗ ಚರ್ಚೆಯ ವಿಷಯವೇ ಅಲ್ಲ. ಅದನ್ನು ನಾವು ಚರ್ಚೆ ಮಾಡಲೇಬಾರದು. ನಾವು ನಮ್ಮ ಆಚರಣೆಯಲ್ಲಿ ತ್ರಿಶೂಲವನ್ನು ಬಳಸುತ್ತೇವೆ. ಅವರು ಖಡ್ಗವನ್ನು ಬಳಸುತ್ತಾರೆ. ನಾವು ಇದನ್ನು ಚರ್ಚೆ ಮಾಡಬಾರದು. ಅದು ಒರಿಜಿನಲ್ಲಾ, ಡೂಪ್ಲಿಕೇಟಾ ಎಂಬುದಾಗಿ ಚರ್ಚೆ ಮಾಡುವ ಪ್ರಶ್ನೆಯೇ ಬಾರದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು (Education Minister Madhu Bangarappa) ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು.
ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ (Hariprakash Konemane) ಅವರು ನಡೆಸಿಕೊಡುವ “ಪವರ್ ಪಾಯಿಂಟ್ ವಿತ್ ಎಚ್‌ಪಿಕೆ” ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಅವರು ಖಡ್ಗವನ್ನು ಬಳಕೆ ಮಾಡಿದ್ದರಿಂದ ನಮಗೇನಾದರೂ ತೊಂದರೆಯಾಗಿದ್ದರೆ ಅದು ನಮ್ಮ ಸರ್ಕಾರದ ಇಲ್ಲವೇ ಪೊಲೀಸರ ವೈಫಲ್ಯ ಆಗುತ್ತಿತ್ತು. ಇದು ಅದರದ್ದು ಅಲ್ಲ. ಇದನ್ನು ಹಾಳು ಮಾಡುವ ಉದ್ದೇಶವನ್ನು ಹಿಂಬದಿ ಮೂಲಕ ಮಾಡಲಾಗಿದೆ. ಇದಕ್ಕೆ ನಾವೇನೂ ಮಾಡಲು ಆಗುವುದಿಲ್ಲ ಎಂದು ಉತ್ತರಿಸಿದರು.
ಮೆಂಟಲ್ ಸ್ಟೆಬಿಲಿಟಿ ಇಲ್ಲದವರಿಂದ ಈ ಕೃತ್ಯ
ಈ ಒಟ್ಟಾರೆ ಗಲಭೆ ಪ್ರಕರಣದ ಬಗ್ಗೆ ತಪ್ಪಿತಸ್ಥರ ಮೇಲೆ ಕ್ರಮವನ್ನು ಕೈಗೊಳ್ಳಿ ಎಂದು ಮುಸ್ಲಿಂ ಮುಖಂಡರು ಸಹ ಹೇಳಿದ್ದಾರೆ. ಪೊಲೀಸ್‌ನವರು ಸಹ ಅವರ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಇದನ್ನು ನಾವು ಎಲ್ಲೂ ಚರ್ಚೆ ಮಾಡಿಲ್ಲ. ಇವೆಲ್ಲ ಕಾಣದೇ ಇರುವ ಚರ್ಚೆಗಳನ್ನು ಅಧಿಕಾರಿಗಳು ಮಾಡಿದ್ದಾರೆ. ಈಗ ಇಂತಹ ಆಪಾದನೆ ಬಂದಿದ್ದರಿಂದ ನಾನು ಇದರ ಬಗ್ಗೆ ಹೇಳುತ್ತಿದ್ದೇನೆ. ಯಾರೋ ಒಬ್ಬ ತಲೆಹರಟೆ ಮಾಡಿದ ಕೆಲಸಕ್ಕೆ ಇಷ್ಟೆಲ್ಲ ಆಗಿದೆ. ಇಲ್ಲಿ ನಾನು ತಲೆ ಹರಟೆ ಎಂದು ಹೇಳಲು ಕಾರಣ ಇದೆ. ಆತ ಯಾವುದೇ ಸಮುದಾಯ, ಧರ್ಮದವನಾಗಿರಬಹುದು. ಆತನಿಗೆ ಮೆಂಟಲ್ ಸ್ಟೆಬಿಲಿಟಿ ಎಂಬುದೇ ಇರುವುದಿಲ್ಲ ಎಂದು ಹೇಳಿದರು.
ಇದು ದ್ವೇಷದ ಗಲಭೆ; ಹಿಂದು – ಮುಸ್ಲಿಂ ಗಲಾಟೆ ಅಲ್ಲ
ಇನ್ನು ನಾನು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಹೆಣ್ಣು ಮಕ್ಕಳನ್ನು ಮಾತನಾಡಿಸಿದ್ದೇನೆ. ಅವರು ನನ್ನ ಬಳಿ ಹೇಳಿದ್ದು ಇಷ್ಟೇ, “ಸರ್ ನಾವಿಲ್ಲಿ ಹಿಂದು – ಮುಸ್ಲಿಂ ಸಮುದಾಯದವರು ಅನ್ಯೋನ್ಯವಾಗಿದ್ದೇವೆ. ಇಲ್ಲಿ ಇಂತಹ ತಪ್ಪನ್ನು ಯಾರೇ ಮಾಡಲಿ? ಹಿಂದು ಇರಲಿ, ಮುಸ್ಲಿಂ ಇರಲಿ, ತಪ್ಪು ಮಾಡಿದವರಿಗೆ ಶಿಕ್ಷೆ ನೀಡಿ ಎಂದು ನನ್ನ ಬಳಿ ಮನವಿ ಮಾಡಿದ್ದಾರೆ. ಅದಕ್ಕೆ ನಾನೂ ಸಹ, “ತಪ್ಪು ಮಾಡಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತೇವೆ” ಎಂದು ಹೇಳಿದ್ದೇನೆ. ಅದಕ್ಕೆ ಅವರೆಲ್ಲರೂ, “ಅಷ್ಟು ಮಾಡಿ ಸಾಕು. ನಿಮ್ಮ ಮೇಲೆ ನಮಗೆ ವಿಶ್ವಾಸ ಇದೆ ಎಂದು ಹೇಳಿದ್ದಾರೆ. ಅಂದರೆ ಇದರರ್ಥ ಅವರಿಗೆ ನಮ್ಮ ಮೇಲೆ ವಿಶ್ವಾಸ ಇದೆ. ಅಲ್ಲಿ ನಡೆದ ಗಲಾಟೆ ಹಿಂದು – ಮುಸ್ಲಿಂಗೆ ಸಂಬಂಧಪಟ್ಟಿದ್ದಲ್ಲ ಎಂದು ನನಗೆ ಅನ್ನಿಸುತ್ತದೆ. ಇದರ ಹಿಂದೆ ಯಾವುದೋ ದ್ವೇಷವನ್ನು ಇಟ್ಟುಕೊಂಡು ಮಾಡಲಾಗಿದೆ ಎಂದು ಮಧು ಬಂಗಾರಪ್ಪ ಹೇಳಿದರು.
ಇದನ್ನೂ ಓದಿ: Power Point with HPK : ಶಿವಮೊಗ್ಗದಲ್ಲಿ 10 ಮನೆಗಳಿಗೆ ಕಲ್ಲು ಬಿದ್ದಿದೆ; ಅದು ಕೋಮು ಗಲಭೆ ಅಲ್ಲ!
ಟಿಪ್ಪು – ಔರಂಗಾಜೇಬ್ ಕಟೌಟ್ ಬಗ್ಗೆ ಹೇಳಿದ್ದಿಷ್ಟು
ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ನಮ್ಮ ಸಂವಿಧಾನದಲ್ಲಿ ಅವರವರಿಗೆ ಅವರದ್ದೇ ಆದ ಧಾರ್ಮಿಕ ಆಚರಣೆಯ ಅವಕಾಶ ಇದ್ದೇ ಇದೆ. ಅದೇ ರೀತಿಯಾಗಿ ಹಿಂದುಗಳ ಆಚರಣೆ ವೇಳೆ ಏನೂ ಸಮಸ್ಯೆ ಇಲ್ಲದೆ ನಡೆದುಹೋಯಿತು. ಆದರೆ, ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ಹಾಕಲಾಗಿದ್ದ ಟಿಪ್ಪು ಸುಲ್ತಾನ್ ಕಟೌಟ್ ಬಗ್ಗೆ ವಿವಾದ ಆಯಿತು. ಅದಕ್ಕೆ ಕೆಲವು ಮುಸ್ಲಿಂ ಮುಖಂಡರು ಸಹ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು. ಆದರೆ, ಕೆಲವು ಯುವಕರು ಅವರ ಮಾತನ್ನು ತಲೆಗೆ ಹಾಕಿಕೊಳ್ಳಲಿಲ್ಲ. ಕೊನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಪೋಸ್ಟರ್‌ನಲ್ಲಿ ವಿವಾದಾತ್ಮಕ ಚಿತ್ರಗಳ ಮೇಲೆ ಪೇಂಟ್ ಮಾಡಲಾಗಿದೆ. ಅಲ್ಲಿಗೆ ಆ ವಿಷಯ ಮುಗಿದು ಹೋಯಿತು ಎಂದು ಸಚಿವ ಮಧು ಬಂಗಾರಪ್ಪ ಅವರು ಟಿಪ್ಪು ಸುಲ್ತಾನ್ ಹಾಗೂ ಔರಂಗಾಜೇಬ್ ಕಟೌಟ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.