ಬೆಂಗಳೂರು: ಸೆಪ್ಟೆಂಬರ್ 30ರೊಳಗೆ ನಿಮ್ಮ PPF, SCSS, NSC ಸೇರಿದಂತೆ ಹಲವು ಸಣ್ಣ ಉಳಿತಾಯ (Small savings) ಯೋಜನೆಗಳಿಗೆ ಆಧಾರ್ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಇದನ್ನು ಸಲ್ಲಿಸಲು ನೀವು ವಿಫಲರಾದರೆ ನಿಮ್ಮ ಖಾತೆಗೆ ಬರಬೇಕಾದ ಬಡ್ಡಿ ಹಣದ (Interest rate) ಪಾವತಿ ನಿಲ್ಲಬಹುದು. ಯಾವ್ಯಾವ ಉಳಿತಾಯ ಯೋಜನೆಗಳು? ಇಲ್ಲಿದೆ ವಿವರ.
ನೀವು ಸಾರ್ವಜನಿಕ ಭವಿಷ್ಯ ನಿಧಿ (PPF), ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS), ಅಥವಾ ಪೋಸ್ಟ್ ಆಫೀಸ್ ಸಮಯ ಠೇವಣಿಗಳ (POTD) ಇಂತಹ ಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ್ದರೆ ಸೆಪ್ಟೆಂಬರ್ 30, 2023ರೊಳಗೆ ನಿಮ್ಮ ಆಧಾರ್ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.
PPF, SCSS, NSC ಮತ್ತು ಇತರ ಪೋಸ್ಟ್ ಆಫೀಸ್ ಉಳಿತಾಯ
ನಿಮ್ಮ PPF, ಸುಕನ್ಯಾ ಸಮೃದ್ಧಿ ಯೋಜನೆ (SSY), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC), ಹಿರಿಯ ನಾಗರಿಕರ ಉಳಿತಾಯ ಯೋಜನೆ (SCSS) ಅಥವಾ ಯಾವುದೇ ಇತರ ಸಣ್ಣ ಉಳಿತಾಯ ಯೋಜನೆಯ ಜತೆಗೆ ಮುಂದಿನ ತಿಂಗಳಿನಿಂದ ನಿಮ್ಮ ಆಧಾರ್ ಸಂಖ್ಯೆ ಜೋಡಣೆಯಾಗಿರುವುದು ಕಡ್ಡಾಯವಾಗಿದೆ. ಒಂದು ವೇಳೆ ಖಾತೆಯನ್ನು ತೆರೆಯುವಾಗ ನಿಮ್ಮ ಆಧಾರ್ ಕಾರ್ಡ್ ಅನ್ನು ನೀವು ಸಲ್ಲಿಸಿರದಿದ್ದರೆ, ನೀವು ಅದನ್ನು ಸೆಪ್ಟೆಂಬರ್ 30ರೊಳಗೆ ಸಲ್ಲಿಸಬೇಕು.
ಆತಂಕ ಪಡುವ ಅಗತ್ಯವಿಲ್ಲ
ನೀವು ಏಪ್ರಿಲ್ 1, 2023ರಂದು ಅಥವಾ ನಂತರ ನಿಮ್ಮ ಸಣ್ಣ ಉಳಿತಾಯ ಖಾತೆಗಳನ್ನು ತೆರೆದಿದ್ದರೆ, ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಆಧಾರ್ ಮತ್ತು ಪ್ಯಾನ್ ವಿವರಗಳು ಈಗಾಗಲೇ ದಾಖಲೆಗೆ ಜೋಡಣೆಯಾಗಿರುತ್ತವೆ.
ಆಧಾರ್ ಸಲ್ಲಿಸಲು ವಿಫಲವಾದರೆ ಏನಾಗುತ್ತದೆ?
ಸೆಪ್ಟೆಂಬರ್ 30, 2023ರೊಳಗೆ ನಿಮ್ಮ ಪೋಸ್ಟ್ ಆಫೀಸ್ ಯೋಜನೆಗೆ ಆಧಾರ್ ಅನ್ನು ಸಲ್ಲಿಸಲು ನೀವು ವಿಫಲರಾದರೆ, ನಿಮ್ಮ ಸಣ್ಣ ಉಳಿತಾಯ ಯೋಜನೆಯ ಖಾತೆಯು ನಿಷ್ಕ್ರಿಯವಾಗಬಹುದು. ಅಂದರೆ PPF, NSC ಅಥವಾ SCSSನಂತಹ ಸಣ್ಣ ಉಳಿತಾಯ ಯೋಜನೆ ಖಾತೆಯಲ್ಲಿರುವ ನಿಮ್ಮ ಹಣಕ್ಕೆ ಸಂಚಿತ ಬಡ್ಡಿಯನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದಿಲ್ಲ.
ನಿಮ್ಮ ಸಣ್ಣ ಉಳಿತಾಯ ಯೋಜನೆಯಿಂದ ಬರುವ ಬಡ್ಡಿ ಆದಾಯವನ್ನು ನೀವು ಅವಲಂಬಿಸಿದ್ದರೆ, ಖಂಡಿತವಾಗಿಯೂ ಆದಷ್ಟು ಬೇಗನೆ ಗಡುವಿನ ಮೊದಲು ನಿಮ್ಮ ಆಧಾರ್ ವಿವರಗಳನ್ನು ಸಲ್ಲಿಸಬೇಕು.
ಇದನ್ನೂ ಓದಿ: Money Guide: ಅಕ್ಟೋಬರ್ 1ರ ಮೊದಲೇ ಇದೆಲ್ಲ ಮಾಡಿಕೊಳ್ಳಿ… ಇಲ್ಲದಿದ್ದರೆ ಹಣ ಕಳೆದುಕೊಳ್ಳುವಿರಿ!