ಹಾಸನ : ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೊ ಹಗರಣದಲ್ಲಿ (Prajwal Revanna Case) ಪೊಲೀಸರಿಗೆ ಬೇಕಾಗಿರುವ ಭವಾನಿ ರೇವಣ್ಣ ಅವರ ಕಾರು ಚಾಲಕ ಅಜಿತ್ ಮೇಲೆ ಕಳೆದ ಕೆಲವು ದಿನಗಳಿಂದ ದುಷ್ಕರ್ಮಿಗಳು ದಾಳಿ ನಡೆಸುತ್ತಿದ್ದಾರೆ. ಮನೆಗೆ ಕಲ್ಲು ಎಸೆಯುತ್ತಿದ್ದ ಆರೋಪಿಗಳು ಇದೀಗ ರಾತ್ರಿ ವೇಳೆ ಮನೆಗೆ ನುಗ್ಗಿ ಅಜಿತ್ನ ಅಕ್ಕನ ಮಗ ಮೋಹಿತ್ ಮೇಲೆ ಹಲ್ಲೆ ನಡೆಸಿದ್ದಾರೆ. ಬುಧವಾರ ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆ ಮಂದಿಯ ಮುಂದೆಯೇ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮೂಡಲಹಿಪ್ಪೆಯಲ್ಲಿ ಅಜಿತ್ ಅವರ ಮನೆಯಿದ್ದು, ಎರಡು ದಿನಗಳ ಹಿಂದೆ ಮುಂಜಾನೆ 4 ಗಂಟೆಗೆ ಮನೆ ಮೇಲೆ ಕಲ್ಲೆಸೆದಿದ್ದ ಕಿಡಿಗೇಡಿಗಳು ಪರಾರಿಯಾಗಿದ್ದರು. ಆದರೆ, ಬುಧವಾರ ರಾತ್ರಿ ಮನೆ ಮೇಲೆ ದಾಳಿ ಮಾಡಿ ಅಜಿತ್ ಸಂಬಂಧಿಗೆ ಹಲ್ಲೆ ಮಾಡಲಾಗಿದೆ. ಹಲ್ಲೆಯಿಂದ ಗಾಯಗೊಂಡಿರುವ ಮೋಹಿತ್ ಗೆ ಹೊಳೆನರಸೀಪುರ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಗೆ ನುಗ್ಗಿರುವ ಮೂರ್ನಾಲ್ಕು ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Tungabhadra Dam : ಅಬ್ಬರದ ಮಳೆ; ವಿಶ್ವ ವಿಖ್ಯಾತಿಯ ತುಂಗಭದ್ರಾ ಡ್ಯಾಮ್ನಲ್ಲಿ ಹೆಚ್ಚಿದ ಒಳ ಹರಿವು
ಸಂತ್ರಸ್ತೆಯನ್ನು ಅಪಹರಣ ಮಾಡಿರುವ ಪ್ರಕರಣ ದಲ್ಲಿ ಭವಾನಿ ರೇವಣ್ಣ ಕಾರು ಚಾಲಕ ತಲೆ ಮರೆಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ವಿರುದ್ದ ಅತ್ಯಾಚಾರ ಆರೋಪ ಪ್ರಕರಣ ದ ಸಂತ್ರಸ್ಥ ಮಹಿಳೆ ಕಿಡ್ನಾಪ್ ವಿಚಾರದಲ್ಲಿ ಅಜಿತ್ ವಿರುದ್ದ ವಾರಂಟ್ ಜಾರಿಯಾಗಿದೆ. ಹಲವು ಬಾರಿ ವಾರಂಟ್ ಜಾರಿಯಾದರೂ ಎಸ್‌ಐಟಿ ಮುಂದೆ ಅಜಿತ್ ಹಾಜರಾಗಿಲ್ಲ.
ಪ್ರಜ್ವಲ್ ರೇವಣ್ಣಗೆ ಮತ್ತೆ 6 ದಿನ ಎಸ್‌ಐಟಿ ಕಸ್ಟಡಿ
ಬೆಂಗಳೂರು: ಆತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಮತ್ತೆ 6 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಲಾಗಿದೆ. ಕಸ್ಟಡಿಗೆ ನೀಡುವಂತೆ 42ನೇ ಎಸಿಎಂಎಂ ಕೋರ್ಟ್‌ಗೆ ಎಸ್‌ಐಟಿ ಅರ್ಜಿ ಸಲ್ಲಿಸಿತ್ತು. ಮನವಿಯನ್ನು ಪುರಸ್ಕರಿಸಿರುವ ಕೋರ್ಟ್, ಪ್ರಜ್ವಲ್ ರೇವಣ್ಣನನ್ನು ಎಸ್‌ಐಟಿ ಕಸ್ಟಡಿಗೆ ನೀಡಲು ಸೂಚಿಸಿದೆ.
10 ದಿನ ಎಸ್‌ಐಟಿ ಕಸ್ಟಡಿಯಲ್ಲಿದ್ದ ಪ್ರಜ್ವಲ್ ರೇವಣ್ಣನನ್ನು ಜೂನ್ 10ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಜೂನ್ 24ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲು ಸೂಚಿಸಲಾಗಿತ್ತು. ಇನ್ನೂ ವಿಚಾರಣೆ ಬಾಕಿ ಇರುವುದರಿಂದ ಕಸ್ಟಡಿಗೆ ನೀಡುವಂತೆ ಎಸ್‌ಐಟಿ ಮನವಿ ಮಾಡಿದ್ದರಿಂದ, ಇದೀಗ ಮತ್ತೆ 6 ದಿನಗಳ ಕಾಲ ಪ್ರಜ್ವಲ್ ರೇವಣ್ಣನನ್ನು ಎಸ್‌ಐಟಿ ಕಸ್ಟಡಿಗೆ ನೀಡಲು ಕೋರ್ಟ್ ಸಮ್ಮತಿಸಿದೆ.
ನ್ಯಾಯಾಂಗ ಬಂಧನದಲ್ಲಿದ್ದ ಪ್ರಜ್ವಲ್ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲಿನಲ್ಲಿ ಎರಡು ದಿನ ಕಾಲ ಕಳೆದಿದ್ದರು. ಜೈಲಿನ ಕ್ವಾರಂಟೈನ್ ಬ್ಯಾರಕ್‌ನಲ್ಲಿ ಸಾಮಾನ್ಯ ಕೈದಿಯಂತೆ ಪ್ರಜ್ವಲ್ ಇದ್ದರು. ಮಂಗಳವಾರ ರಾತ್ರಿ ಜೈಲಿನಲ್ಲಿ ನೀಡಿದ್ದ ಮುದ್ದೆ, ಚಪಾತಿ, ಅನ್ನ, ಸಾಂಬರ್, ಊಟ ಮಾಡಿದ್ದ ಪ್ರಜ್ವಲ್, ಬೇಗನೇ ನಿದ್ರೆಗೆ ಜಾರಿದ್ದರು. ಇಂದು ಬೆಳಗ್ಗೆ 5 ಗಂಟೆಗೆ ನಿದ್ದೆಯಿಂದ ಎದ್ದು ವಾಕಿಂಗ್ ಮಾಡಿದ್ದರು.
ಕೆಲ ಹೊತ್ತು ವಾಕಿಂಗ್ ಮಾಡಿ ಜೈಲ್ ಸಿಬ್ಬಂದಿ ಕೊಟ್ಟ ಕಾಫಿ ಕುಡಿದ ಬಳಿಕ ದಿನ ಪತ್ರಿಕೆಗಳನ್ನು ಓದಿ ಹೊರಗಿನ ವಿದ್ಯಮಾನಗಳ ಕಡೆ ಕಣ್ಣಾಡಿಸಿದರು. ಮತ್ತೆ ಜೈಲಿನ ಮೆನುವಿನಂತೆ ಪ್ರಜ್ವಲ್‌ಗೆ ಅವಲಕ್ಕಿ ಉಪ್ಪಿಟ್ಟು ನೀಡಲಾಗಿದೆ. ಹೊರಗೆ ಬಿಂದಾಸ್ ಆಗಿ ಓಡಾಡಿಕೊಂಡಿದ್ದ ಮಾಜಿ ಸಂಸದನಿಗೆ ಜೈಲುವಾಸದಲ್ಲಿ ಚಡಪಡಿಸುತ್ತಿರರುವುದು ಕಂಡುಬಂದಿದೆ.