ಬೆಂಗಳೂರು: ಲೈಂಗಿಕ ದೌರ್ಜನ್ಯ, ಮತ್ತು ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಹಾಸನ ಜೆಡಿಎಸ್ ಸಂಸದ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣನನ್ನು (Prajwal Revanna Case) ಕೊನೆಗೂ ಎಸ್ಐಟಿ ಪೊಲೀಸರ ವಶಕ್ಕೆ ಸಿಕ್ಕಿದ್ದಾರೆ. ವಿಡಿಯೊಗಳು ವೈರಲ್ ಆಗುತ್ತಲೇ ವಿದೇಶಕ್ಕೆ ಪರಾರಿಯಾಗಿದ್ದ ಪ್ರಜ್ವಲ್ ರೇವಣ್ಣ, ಶುಕ್ರವಾರ (ಮೇ 31) ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಬಂಧನಕ್ಕೆ ಒಳಗಾಧರು.
ಜರ್ಮನಿಯ ಮ್ಯೂನಿಚ್ನಿಂದ ಮಧ್ಯಾಹ್ನ ಹೊರಟ ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ರೇವಣ್ಣ ಆಗಮಿಸಿದರು. ಸಂಸದರಾಗಿರುವ ಕಾರಣ ಹಲವು ಪ್ರಕ್ರಿಯೆಗಳನ್ನು ನಡೆಸಿದ ಬಳಿಕ ಎಸ್‌ಐಟಿ ಅಧಿಕಾರಿಗಳ ವಶಕ್ಕೆ ಪಡೆದರು.
ಪ್ರಜ್ವಲ್ ರೇವಣ್ಣ ನೇರವಾಗಿ ಎಸ್ಐಟಿ ವಶಕ್ಕೆ ಸಿಗಲಿಲ್ಲ. ರಾಜತಾಂತ್ರಿಕ ಪಾಸ್ ಪೋರ್ಟ್ ಇದ್ದ ಕಾರಣ ಅವರನ್ನು ನೇರವಾಗಿ ವಶಕ್ಕೆ ಪಡೆಯಲು ಸಾಧ್ಯವಾಗಲಿಲ್ಲ. ಲೋಕಸಭಾ ಸ್ಪೀಕರ್ ಗೆ ಮನವಿ ಮಾಡಿದ ವಲಸೆ ಅಧಿಕಾರಿಗಳು ಅನುಮತಿ ಪಡೆದುಕೊಂಡಿದ್ದರು. ಅಂತೆಯ ಪ್ರಕರಣಕ್ಕೆ ಸಂಬಂಧಿಸಿದ 55 ಪುಟಗಳ ದಾಖಲೆಗಳನ್ನು ತಂದು ಎಸ್ಐಟಿ ಮುಖ್ಯಸ್ಥ ಹಾಗೂ ಪ್ರಜ್ವಲ್ ರೇವಣ್ಣ ಪರ ವಕೀಲರ ಮುಂದೆ ಸಹಿ ಹಾಕಲಾಯಿತು. ಅಲ್ಲಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಜ್ವಲ್ ರೇವಣ್ಣ ವಿಮಾನದಿಂದಿಳಿದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪ್ರಕ್ರಿಯೆ ನಡೆಯಿತು.
ಬಿಗಿ ಬಂದೋಬಸ್ತ್
ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸಾದ ಕಾರಣ ಏರ್ಪೋರ್ಟ್ ಸುತ್ತಮುತ್ತು ಭಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ವಿಮಾನ ನಿಲ್ದಾಣದ ಟರ್ಮಿನಲ್ 2 ಬಳಿ ಬ್ಯಾರಿಕೇಡ್ಗಳನ್ನು ಹಾಕಿ ಜನ ದಟ್ಟಣೆ ನಿಯಂತ್ರಿಸಲಾಗಿತ್ತು. ಅದೇ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಆಗಮಿಸುವ ರಸ್ತೆಯುದ್ದಕ್ಕೂ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಪ್ರತಿಭಟನಾಕಾರರು ಅಥವಾ ಇನ್ಯಾವುದೇ ದಾಳಿಯನ್ನು ತಡೆಯುವ ಉದ್ದೇಶ ಪೊಲೀಸರದ್ದಾಗಿತ್ತು.
ಸಿಐಡಿ ಕಚೇರಿ ಮುಂದೆಯೂ ಬಿಗಿ ಪೊಲೀಸ್ ಬಂದೋಬಸ್ತೆ ಏರ್ಪಡಿಸಲಾಗಿತ್ತು. ಅಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು. ಹೆಚ್ಚುವರಿಯಾಗಿ ಕೆಎಸ್ಆರ್ಪಿ ತುಕಡಿ ನಿಯೋಜನೆ ಮಾಡಲಾಗಿತ್ತು. ಐಡಿ ಕಚೇರಿ ಮುಂದೆ ಬ್ಯಾರಿಕೇಡ್ ಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆಯನ್ನು ಪೊಲೀಸರು ವಹಿಸಿದ್ದರು.
ಮುಂದೇನು?
ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದ ಕಾರಣ ಪ್ರಜ್ವಲ್ ರೇವಣ್ಣ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಇಮಿಗ್ರೇಷನ್ ಅಧಿಕಾರಿಗಳು ಸಂಸದನ ಪಾಸ್‌ಪೋರ್ಟ್‌ಗೆ ಶೀಲ್ ಹಾಕಿದರು. ಪ್ರಜ್ವಲ್ ರೇವಣ್ಣನನ್ನು ಬಂಧಿಸಿರುವ ಎಸ್‌ಐಟಿ ಅಧಿಕಾರಿಗಳು ಮೊದಲು ಅವರನ್ನು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಲಿದ್ದಾರೆ. ಅಲ್ಲಿನ ಪ್ರಕ್ರಿಯೆ ಮುಗಿಸಿ ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಲಾಗುತ್ತದೆ ಎಂದು ತಿಳಿದುಬಂದಿದೆ. ಬಂಧಿಸಿದ 24 ಗಂಟೆಯೊಳಗೆ ಎಸ್‌ಐಟಿ ಅಧಿಕಾರಿಗಳು ಸಂಸದನನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.