ಸ್ವಾಮಿ ಯೋಗೀಶ್ವರನಂದಾ
ಬದುಕಿನ ಒತ್ತಡಗಳು ಎಷ್ಟು ಜೋರಾಗಿರುತ್ತವೆ ಎಂದರೆ ಅವು ಮಾನಸಿಕವಾಗಿ ಮತ್ತು ದೈಹಿಕವಾಗಿ ನಮ್ಮ ಮೇಲೆ ಪರಿಣಾಮ ಬೀರುತ್ತಿರುತ್ತವೆ. ನಮ್ಮಲ್ಲಿ ಬಹುತೇಕರು ಒಂದಲ್ಲಾ ಒಂದು ರೀತಿಯ ಆತಂಕ, ಭಯ, ಖಿನ್ನತೆಗಳನ್ನು ಅನುಭವಿಸುತ್ತಲೇ ಇರುತ್ತೇವೆ. ಇದು ಒತ್ತಡಕ್ಕೆ ಸಂಬಂಧಿತ ಅನಾರೋಗ್ಯವನ್ನು ಉಂಟುಮಾಡಬಹುದು. ನಾವು ಸಿಟ್ಟಾದಾಗ ಅಥವಾ ಬೇಸರಗೊಂಡಾಗ, ದೇಹವು ‘ಹೋರಾಟ ಅಥವಾ ಹಾರಾಟ’ಕ್ಕೆ ಸಿದ್ಧರಾಗುವಂತೆ ಹಾರ್ಮೋನ್‌ಗಳನ್ನು ಬಿಡುಗಡೆ ಮಾಡುತ್ತದೆ ಎಂಬುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ.
ನಮ್ಮ ಮುಂದಿರುವ ಸಾಮಾಜಿಕ ಮಾನದಂಡಗಳು ನಮ್ಮೆಲ್ಲಾ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಶಾಂತಿಯಿಂದ, ತಾರ್ಕಿ ಕವಾಗಿ ಪರಿಹಾರ ಕಂಡುಕೊಳ್ಳುವಂತೆ ಚೌಕಟ್ಟು ನಿಗದಿಪಡಿಸಿವೆ. ಎಲ್ಲಿಯೂ ಪ್ರತಿರೋಧಕ್ಕೆ ಪ್ರೇರಣೆ ನೀಡಲೇಬೇಕೆಂಬ ಹಟವಿಲ್ಲ. ಹೀಗಾಗಿಯೇ ನಮಗೆ ಹುಟ್ಟಿದಾಗಿನಿಂದ ನಮ್ಮ ಭಾವನೆಗಳನ್ನು ಹುದುಗಿರಿಸಿಕೊಳ್ಳುವುದು ಅಭ್ಯಾಸವಾಗಿ ಬಿಟ್ಟಿರುತ್ತದೆ. ಇದರ ಪರಿಣಾಮವೇನು ಗೊತ್ತೇ? ನಮ್ಮ ಹಾರ್ಮೋನ್‌ಗಳು ಅಗೋಚರ ರೀತಿಯಲ್ಲಿ ಕ್ರೋಧಗೊಳ್ಳುತ್ತವೆ. ಅಗ ರಕ್ತದೊತ್ತಡ, ಹೃದಯರೋಗ, ಉಸಿರಾಟದ ತೊಂದರೆ, ಅಜೀರ್ಣ, ತಲೆನೋವು ಇನ್ನಿತರ ಆರೋಗ್ಯ ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಇದಕ್ಕೆ ಪರಿಹಾರ ಪ್ರತಿರೋಧ ವ್ಯಕ್ತಪಡಿಸುವುದು ಕಲಿಯುವುದು ಅಥವಾ ಇವುಗಳಿಂದ ತಪ್ಪಿಸಿಕೊಳ್ಳುವುದು ಅಲ್ಲ, ಇಂತಹ ಪ್ರತಿಕ್ರಿಯೆಗಳು ನಮ್ಮ ಸಂಬಂಧಗಳಲ್ಲಿ ಮತ್ತಷ್ಟು ಸಮಸ್ಯೆಗಳನ್ನು ಹುಟ್ಟುಹಾಕುತ್ತವೆ. ಒತ್ತಡವನ್ನು ಜಯಿಸಲು ಕೆಲವು ಸ್ವೀಕಾರಾರ್ಹ ವಿಧಾನಗಳಿವೆ. ಅದರಲ್ಲಿ ಧ್ಯಾನವು ಒಂದು.
ಧ್ಯಾನ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸಹಕಾರಿ. ಅದು ಸುರಕ್ಷಿತ, ಪರಿಣಾಮಕಾರಿ ಮತ್ತು ಖರ್ಚಿಲ್ಲದ ದಾರಿ. ಹೇಗೆ ಧ್ಯಾನ ಮಾಡಬೇಕೆಂದು ಒಮ್ಮೆ ನಾವು ಅರಿತರೆ, ನಮ್ಮೊಳಗೆ ಒಂದು ಸಿದ್ಧ ಪರಿಹಾರ ವ್ಯವಸ್ಥೆಯನ್ನು ರೂಪಿಸಿಕೊಳ್ಳಬಹುದಾಗಿದೆ ಮತ್ತು ಅದನ್ನು ಯಾವ ಸಮಯದಲ್ಲಿಯಾದರೂ, ಎಲ್ಲಿಯಾದರೂ ಬಳಸಬಹುದು.
ಧ್ಯಾನವು ದೈಹಿಕ ವಿರಾಮವನ್ನು ನೀಡುತ್ತದೆ. ಒಂದು ಹಿತವಾದ, ಆನಂದಮಯ ಅನುಭವದಲ್ಲಿ ಮುಳುಗುವಂತೆ ಮಾಡುತ್ತದೆ ಮತ್ತು ಆಗ ನಾವು ಪ್ರಾಪಂಚಿಕ ಜಗತ್ತಿನ ಸಮಸ್ಯೆಗಳಿಗೆ ವಿಚಲಿತರಾಗುವುದಿಲ್ಲ. ಧ್ಯಾನದ ಪ್ರಕ್ರಿಯೆಯು ನಮ್ಮ ಲಕ್ಷ್ಯವನ್ನು ಹಣೆಯ ಮಧ್ಯದ ಒಂದು ಬಿಂದುವಿನ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಆಗ ನಾವು ನಮ್ಮ ಬಾಹ್ಯ ದೇಹದ ಮೇಲಿನ ಲಕ್ಷ್ಯವನ್ನು ಕಳೆದುಕೊಳ್ಳುತ್ತೇವೆ. ದೇಹವು ನಿದ್ರೆಯಲ್ಲಿರುವಂತೆ ವಿರಮಿಸುತ್ತದೆ.
ಧ್ಯಾನದಲ್ಲಿ ಮೆದುಳಿನ ತರಂಗಗಳು ಶಾಂತಿ ಮತ್ತು ಸಂಪೂರ್ಣ ವಿರಾಮ ಭಾವದಲ್ಲಿರುವ ತರಂಗಾಂತರದಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಆಂತರಿಕ ಬೆಳಕು ಮತ್ತು ಶಬ್ದದ ಕುರಿತ ಅಧ್ಯಯನದ ಮೂಲಕ ನಮಗೆ ಹೆಚ್ಚುವರಿ ಲಾಭ ದೊರೆಯುತ್ತದೆ. ಅದು ನಮ್ಮನ್ನು ಭೌತಿಕ ಜಗತ್ತಿನ ಆಚೆಯಿಂದ ಬರುವ ಚೈತನ್ಯದೊಂದಿಗೆ ಸಂಪರ್ಕದಲ್ಲಿರಿಸುತ್ತದೆ. ಅದು ದಿವ್ಯ ಪ್ರೇಮ, ಪ್ರಜ್ಞೆ ಮತ್ತು ಆನಂದದ ಶಕ್ತಿಶಾಲಿ ಪ್ರವಾಹ.
ಅದು ಅಳತೆಗೆ ಮೀರಿದ ಆಧ್ಯಾತ್ಮಿಕ ಅನುಭವ. ಪ್ರತಿ ವ್ಯಕ್ತಿಯೊಳಗಿನ ಈ ಪ್ರವಾಹವು ವ್ಯಕಿಯ ಒಳಗೇ ಇರುತ್ತದೆ ಮತ್ತು ಮೂರನೇ ಕಣ್ಣ್ಣಿನಿಂದ ಅದನ್ನು ಸಂಪರ್ಕಿಸಬಹುದು. ಅದು ನಮಗೆ ದೈಹಕ ವಿರಾಮಕ್ಕಿಂತ ಹೆಚ್ಚಿನದನ್ನು ನೀಡುತ್ತದೆ. ನಮ್ಮನ್ನು ಯಾವುದೇ ಬಾಹ್ಯ ಭಾವಪರವಷತೆಗಿಂತ ಮಿಗಿಲಾದ ಅತ್ಯಂತ ಶಕ್ತಿಶಾಲಿ ಮತ್ತು ಶಾಶ್ವತ ಭಾವಪರವಷತೆ ಯಲ್ಲಿ ಮೀಯಿಸುತ್ತದೆ. ನಮ್ಮ ದೇಹ, ಮನಸ್ಸು ಮತ್ತು ಆತ್ಮವು ದೇಹದ ಪ್ರತೀ ಭಾಗದ ಮೂಲಕ ಚಿಮ್ಮುವ ಚಿರಂತನ ಅಲೆಗಳ ಅನುಭವವನ್ನು ಹೊಂದುತ್ತದೆ.
ನಮ್ಮ ಆತ್ಮದಿಂದ ಹುಟ್ಟುವ ಈ ಅನುಭವವು ಬೆಳಕು ಮತ್ತು ಶಬ್ದದ ಪ್ರವಾಹದ ರೂಪದಲ್ಲಿರುವ ಸ್ವಂತ ಸಾರದೊಂದಿಗೆ ಸಂಪರ್ಕಕ್ಕೆ ಬರುತ್ತದೆ. ಈ ಪ್ರವಾಹವು ಪ್ರತಿಯೊಂದನ್ನು ಅಸ್ತಿತ್ವಕ್ಕೆ ತರುವ ಬಲವಾಗಿದೆ. ನಮ್ಮ ಆತ್ಮವು ಆ ಸಾರದ ಒಂದು ಹನಿ ಮಾತ್ರ. ಈ ಸೃಷ್ಟಿಶೀಲ ಶಕ್ತಿ, ಅದರಿಂದ ಹರಿಯುವ ಪ್ರವಾಹ ಮತ್ತು ನಮ್ಮ ಆತ್ಮ ಎಲ್ಲವನ್ನೂ ಪ್ರೀತಿ, ಪ್ರಜ್ಞೆ ಮತ್ತು ಆನಂದವೆಂದು ಹೇಳಲಾಗುತ್ತದೆ.
ನಾವು ಕೇವಲ ನಮ್ಮ ದೇಹ ಮತ್ತು ಮನಸ್ಸಿನ ಕುರಿತು ಜಾಗೃತರಾಗಿದ್ದೇವೆ. ನಮಗೆ ನಮ್ಮ ನೈಜ ಲಕ್ಷಣ, ಆತ್ಮದ ಕುರಿತು ಗಮನವಿಲ್ಲ. ಧ್ಯಾನದಲ್ಲಿ, ದೇಹ ಮತ್ತು ಮನಸ್ಸು ನಿಶ್ಯಬ್ದವಾಗಿದ್ದಾಗ, ನಾವು ಆತ್ಮದ ಲಕ್ಷಣಕ್ಕೆ ಜಾಗೃತರಾಗುತ್ತೇವೆ.
ಆತ್ಮವು ಪ್ರವಾಹವನ್ನು ಸಂಧಿಸಿದಾಗ, ಅದು ಕಾಂತೀಯವಾಗುತ್ತದೆ. ನಮ್ಮ ಆತ್ಮವು ಪ್ರವಾಹದ ಆರಂಭಬಿಂದುವಿನಲ್ಲಿ ಏಕಾಗ್ರವಾದಾಗ, ಮೂರನೇ ಕಣ್ಣು ಅದರಲ್ಲಿ ಲೀನವಾಗುತ್ತದೆ. ಆಗ ನಾವು ಆ ಪ್ರವಾಹದೊಂದಿಗೆ ಸಾಗತೊಡಗುತ್ತೇವೆ. ನಮ್ಮ ಆತ್ಮವು ಪ್ರಜ್ಞೆಯಿಂದ ಮೇಲೇರುತ್ತದೆ ಮತ್ತು ಉನ್ನತ ಲೋಕದ ಪ್ರಯಾಣಿಸತೊಡಗುತ್ತದೆ.
ಲೇಖಕರು ಸಂಗಮ ಆಶ್ರಮದ ಮುಖ್ಯಸ್ಥರು,
ಆಧ್ಯಾತ್ಮಿಕ ಪ್ರವಚನಕಾರರು
ಇದನ್ನು ಓದಿ| Prerane | ಭಾರತೀಯ ವಿದ್ಯೆಗಳ ವಿಶೇಷತೆ ಏನು?