ಡಾ. ಮೋಹನ ರಾಘವನ್
ಗಂಗಾತೀರದಲ್ಲಿ ಎತ್ತರದ ಮರವೊಂದಿತ್ತು. ಹಣ್ಣು ಹೂವುಗಳಿಂದ ತುಂಬಿದ ಮರವು ಅನೇಕ ಪಶುಪಕ್ಷಿಗಳಿಗೆ ಬಿಡಾರವಾಗಿತ್ತು. ಅವುಗಳ ಪೈಕಿ ಕಪಿಯೂ ಒಂದಿತ್ತು. ಕೆಳಗಿಳಿದರೆ ಮಧುರವಾದ ಜಲ. ಮರ ಹತ್ತಿದರೆ ಮಧುರವಾದ ಫಲಗಳನ್ನು ಆಸ್ವಾದಿಸುತ್ತಾ ಕಾಲವನ್ನು ಸುಖಮಯವಾಗಿ ಕಳೆಯುತ್ತಿತ್ತು. ಕೆಳಗೆ ನೀರಿನಲ್ಲಿ ಮೊಸಳೆಯೊಂದು ಸಪರಿವಾರವಾಗಿ ವಾಸ ಮಾಡುತ್ತಿತ್ತು. ಕಾಲ ಉರುಳುತ್ತಾ ಮೊಸಳೆಗೂ ಕಪಿಗೂ ಗಾಢವಾದ ಮೈತ್ರಿ ಬೆಳೆದುಹೋಯಿತು.
ಪ್ರತಿದಿನವೂ ಅವರ ಹರಟೆ ಮುಗಿದು ಮೊಸಳೆ ಮನೆಗೆ ತೆರಳುವಾಗ ಕಪಿಯು ಬಳುವಳಿಯಾಗಿ ಒಂದು ಹಣ್ಣನ್ನು ಮೊಸಳೆಗೆ ಕೊಡುತ್ತಿತ್ತು. ಈ ಹಣ್ಣು ಮೊಸಳೆಯ ಹೆಂಡತಿಗೆ ತುಂಬ ಪ್ರಿಯವಾಗಿತ್ತು. ದುರಾಸೆಗೆ ಇಳಿದ ಅದು ಗಂಡನಿಗೆ ದುಷ್ಟವಾದ ಸಲಹೆಯನ್ನು ನೀಡಿತು. ಆ ಕಪಿಯು ಇಂತಹ ಅಮೃತದಂತಹ ಹಣ್ಣುಗಳನ್ನು ತಿಂದೇ ಬೆಳೆದಿದೆ. ಇನ್ನು, ಅದರ ಹೃದಯವನ್ನೇ ತಿಂದರೆ ಅದಿನ್ನೆಷ್ಟು ಮಧುರವಾಗಿರಬೇಕು! ಆ ಕಪಿಯನ್ನೇ ಆಹಾರವಾಗಿ ತಂದುಕೊಡು ಎಂದು ಕುಬುದ್ಧಿಯ ಮಾತನಾಡಿತು. ಹೆಂಡತಿಯ ಮಾತನ್ನು ಪ್ರತಿಭಟಿಸಲಾರದೆ ಮೊಸಳೆಯು ಕುಮಾರ್ಗಕ್ಕೆ ದುಡುಕಿ ಇಳಿಯಿತು.
ಕಪಿಯನ್ನು ತನ್ನ ಮನೆಗೆ ಔತಣಕ್ಕಾಗಿ ಕರೆಯಿತು. ವಿಶ್ವಾಸದಿಂದ ಕಪಿಯು ಒಪ್ಪಿಕೊಂಡು ಮೊಸಳೆಯ ಹೆಗಲೇರಿ ಕುಳಿತುಕೊಂಡಿತು. ಮೊಸಳೆಯು ನದಿಯ ಮಧ್ಯದಲ್ಲಿದ್ದಾಗ ಬೇಸರ ತಡೆಯಲಾರದೇ ನಿಜವನ್ನು ಕಪಿಗೆ ತಿಳಿಸಿತು. ಕಪಿ ಕ್ಷಣಕಾಲ ಆಲೋಚಿಸಿ ಹೇಳಿತು “ಅಯ್ಯೋ ಮಿತ್ರ ! ಮೊದಲೇ ಹೇಳಿದ್ದರೆ ಸರಿಯಾಗಿರುತ್ತಿತ್ತು. ನಾನು ನನ್ನ ಹೃದಯವನ್ನು ಮರದ ಮೇಲೆಯೇ ಬಿಟ್ಟು ಬಂದುಬಿಟ್ಟೆ. ಹೋಗಿ ತೆಗೆದುಕೊಂಡು ಬರೋಣ ಬಾ. ನಿನ್ನ ಹೆಂಡತಿಗೆ ನಿರಾಸೆಯಾಗಬಾರದು”.
ಮೊಸಳೆ ಪುನಃ ತೀರಕ್ಕೆ ಬರುತ್ತಿದ್ದಂತೆ, ಕಪಿಯು ಹಾರಿ ಮರವನ್ನು ಆಶ್ರಯಿಸಿತು. “ಎಲೆ ಮೊಸಳೆಯೇ ! ನಿನ್ನ ನೀಚ ಬುದ್ಧಿಯನ್ನು ನಂಬಿದ ನನಗೆ ಇದು ಒಳ್ಳೆಯ ಪಾಠವಾಯಿತು. ತೊಲಗು ಇಲ್ಲಿಂದ”.
ಈ ಮರವು ನಮ್ಮ ಶರೀರವೇ ಆಗಿದೆ. ಮರದ ತುದಿಯಲ್ಲಿ ಮಧುರವಾದ ಜೀವನಫಲವಿದೆ. ಮನವೆಂಬ ಮರ್ಕಟವು ಈ ಆನಂದಮಯವಾದ ಒಂದು ಅನುಭವದ ಫಲವನ್ನು ಅನುಭವಿಸುತ್ತದೆ. ಸಂಯಮ, ಯೋಗಾಭ್ಯಾಸ, ತಪಸ್ಯೆಗಳಿಂದ ಮಾತ್ರ ಈ ಫಲವು ಲಭ್ಯವಾಗುತ್ತದೆ. ಆದರೆ ಮನಮರ್ಕಟವು ಯಾವಾಗಲೂ ಹಾಗೆಯೇ ಇರುವುದಿಲ್ಲ. ಶಾಖೆಯಿಂದ ಶಾಖೆಗೆ ಹಾರುವುದು, ಚಂಚಲತೆಯಿಂದ ಕುಣಿದು ಕುಪ್ಪಳಿಸುವುದು ಇದರ ಸ್ವಭಾವ.
ಮೊಸಳೆಯಂತಿರುವ ಇಂದ್ರಿಯಗಳ ಮೈತ್ರಿ ಬೆಳೆಸುತ್ತದೆ. ಇಂದ್ರಿಯಗಳು ಯಾವಾಗಲೂ ಅತೃಪ್ತವೇ. ದುರಾಸೆಯೇ ಇವುಗಳ ಸ್ವಭಾವ. ಮರದ ಮೇಲಿರುವ ಸುಖ, ಶಾಂತಿ ನೆಮ್ಮದಿಯೆಂಬ ಫಲವು ಮಾತ್ರ ಬೇಕು, ಆದರೆ ಚಾಪಲ್ಯವನ್ನು ಬಿಡಲಾರವು. ಮರವನ್ನು ಹತ್ತುವ ಪ್ರವೃತ್ತಿಯಿಲ್ಲ. ಆದರೆ ಕೊಳಚೆಯಲ್ಲಿದ್ದುಕೊಂಡು ಮಧುರವಾದ ಫಲದ ಮೇಲೆಯೇ ಆಸೆ. ನಾಲಿಗೆಯ ಚಾಪಲ್ಯ, ಕೇಳಬಾರದ್ದನ್ನು ಕೇಳಬೇಕು, ಬೇಡದ್ದನ್ನು ನೋಡಬೇಕು, ಇವು ಇಂದ್ರಿಯಗಳ ಸ್ವಭಾವ. ಮನವು ಇವುಗಳಿಗೆ ಸೋತರೆ ಸರ್ವನಾಶ ಕಾದಿದೆ.
ಆತ್ಮನಿಗನುಗುಣವಾಗಿ ಇಂದ್ರಿಯಗಳನ್ನು ಇಟ್ಟುಕೊಂಡರೆ ಮಾತ್ರ ಜೀವನ ವ್ಯವಸ್ಥಿತವಾಗಿರುತ್ತದೆ ಎಂಬ ಶ್ರೀರಂಗಮಹಾಗುರುಗಳ ಸೂತ್ರವೇ ಈ ಕಥೆಯ ಅಂತರಾರ್ಥವಾಗಿದೆ.
ಲೇಖಕರು ಸಂಸ್ಕೃತಿ ಚಿಂತಕರು
ಅಷ್ಟಾಂಗಯೋಗ ವಿಜ್ಞಾನಮಂದಿರಂ
ಇದನ್ನೂ ಓದಿ | Prerane | ಆಂತರಿಕ ಚೈತನ್ಯದೊಂದಿಗೆ ಸಂಬಂಧ ಸ್ಥಾಪಿಸಿ