ಸದ್ಗುರು ಜಗ್ಗಿ ವಾಸುದೇವ್
“ನನಗೇನು ಗೊತ್ತೋ, ಅದು ನನಗೆ ಗೊತ್ತು. ನನಗೇನು ಗೊತ್ತಿಲ್ಲವೋ, ಅದು ನನಗೆ ಗೊತ್ತಿಲ್ಲ” ಎನ್ನುವುದನ್ನು ನೋಡುವಷ್ಟು ನೀವು ಪ್ರಾಮಾಣಿಕರಾಗಿದ್ದರೆ, ನೀವು ಆಗಲೇ ಆಧ್ಯಾತ್ಮಿಕತೆಯ ಹಂಬಲಿಗರೆಂದರ್ಥ. “ಕಲ್ಪನೆ ಮಾಡಿಕೊಳ್ಳುವಷ್ಟು ಪೆದ್ದನಲ್ಲ ನಾನು. ನನಗೇನು ತಿಳಿದಿದೆ/ತಿಳಿದಿಲ್ಲವೆನ್ನುವುದನ್ನು ಒಪ್ಪಿಕೊಳ್ಳಲು ನಾನು ಸಿದ್ಧ” ಇದು ಆಧ್ಯಾತ್ಮಿಕತೆಯ ಮೂಲಭೂತ ಅಂಶ.
ಒಮ್ಮೆ ನಿಮಗಿದರ ಅರಿವಾಯಿತೆಂದರೆ, “ನನಗೆ ಗೊತ್ತಿಲ್ಲ” ವೆಂಬುದರೊಟ್ಟಿಗೆ ಬದುಕಲು ಅಸಾಧ್ಯವಾಗುತ್ತದೆ. ಮನುಷ್ಯರ ಬುದ್ಧಿಯ ಸ್ವರೂಪವೇ ಇಂತಹದ್ದು, ಅದಕ್ಕೆ ತಿಳಿದುಕೊಳ್ಳಲೇ ಬೇಕು. ಒಮ್ಮೆ ತಿಳಿಯುವ ಹಂಬಲ ಬಂತೆಂದರೆ, ಅನ್ವೇಷಿಸುವುದೂ ಬರುತ್ತದೆ. ಒಮ್ಮೆ ಅನ್ವೇಷಣೆ ಆರಂಭವಾದರೆ, ಮಾರ್ಗವನ್ನು ಹುಡುಕುವುದು ಸಾಧ್ಯವಾಗಬಹುದು. ಅದಕ್ಕಾಗಿಯೇ, ನೀವು ಆಧ್ಯಾತ್ಮಿಕತೆಯ ಪಥದಲ್ಲಿದಲ್ಲಿರುವಾಗ, ನಿಮ್ಮನ್ನು ಸಾಧಕರು ಎನ್ನುತ್ತೇವೆ.
ಆದರೀಗ, ಇಡೀ ಪ್ರಚಂಚವೇ, “ನನಗೆ ಗೊತ್ತಿಲ್ಲ” ಎನ್ನುವ ಸಾಮಾನ್ಯ ವಿಚಾರದ ವಿರುದ್ಧವಾಗಿರುವಂತೆ ತೋರುತ್ತದೆ. ನಮಗೇನು ಗೊತ್ತಿಲ್ಲವೋ ಅದನ್ನು ನಂಬುತ್ತೇವೆ. ನಿಮ್ಮ ಹೆಸರನ್ನು ನೀವು ಹೇಳಲು ಶಕ್ತರಾಗುವುದಕ್ಕಿಂತ ಮುನ್ನವೇ, ನಿಮಗೆ ‘ದೇವರೆಂದರೆ’ ಯಾರು, ಅವನ ಹೆಂಡತಿ ಯಾರು, ಅವನಿಗೆಷ್ಟು ಮಕ್ಕಳು, ಅವನ ವಿಳಾಸ, ಅವನ ಹುಟ್ಟಿದ ದಿನ, ಅವನ ಇಷ್ಟಾನಿಷ್ಟಗಳು, ಅವನು ಕೆಲಸ ಮಾಡುವ ರೀತಿಯ ಬಗ್ಗೆ ತಿಳಿದಿರುತ್ತದೆ.
ನಿಮಗೆ ಬೇಡದಿರುವ ಉತ್ತರಗಳು ಅಥವಾ ಸಲಹೆಗಳನ್ನು ನೀಡುವ ಬದಲು, ನಿಮ್ಮ ಹೆತ್ತವರು ಹಾಗೂ ಸಮಾಜ, “ನನಗೆ ಗೊತ್ತಿಲ್ಲ” ಎನ್ನುವುದನ್ನು – ವಾಸ್ತವವಾಗಿ ನಿಮಗೆ ಏನೂ ಗೊತ್ತಿಲ್ಲ, ಉದಾಹರಣೆಗೆ – ಎಲ್ಲಿಂದ ಬಂದಿರಿ, ಎಲ್ಲಿಗೆ ಹೋಗುವಿರಿ – ಉತ್ತೇಜಿಸಿದ್ದರೆ, ಮಾನವರ ಬುದ್ಧಿವಂತಿಕೆಯು ಕೇವಲ ತಿನ್ನುವ, ಮಲಗುವ ಮತ್ತು ಚೆನ್ನಾಗಿ ಬಾಳುವುದರಿಂದ ತೃಪ್ತವಾಗದ ಕಾರಣ, ಈ ಭೂಮಿಯಲ್ಲಿರುವರೆಲ್ಲರೂ ಯೋಗಿಗಳಾಗಿರುತ್ತಿದ್ದರು. ತಿಳಿಯಬೇಕೆನ್ನವುದು ಅದರ ಸಹಜ ಗುಣ. ಜನರು ಇದನ್ನೊಂದು ಸಮಸ್ಯೆಯೆಂದೆಣಿಸುತ್ತಾರೆ, ಆದರೆ ಇದೊಂದು ಸಾಧ್ಯತೆಯ ಕೂಡ. ನೀವಿದನ್ನು ಹೀಗಾದರೂ ನೋಡಬಹುದು ಅಥವಾ ಹಾಗಾದರೂ ನೋಡಬಹುದು.
ಜೀವನದ ಮೂಲಭೂತ ಅಂಶಗಳ ಬಗ್ಗೆ ನೀವು ಸಿದ್ಧವಿರುವ ಉತ್ತರಗಳನ್ನು ನಂಬುವುದು “ನನಗೆ ಗೊತ್ತಿಲ್ಲ” ಎನ್ನುವುದನ್ನು ಇಲ್ಲವಾಗಿಸಿದೆ. ಪುಸ್ತಕ ಅಥವಾ ಯಾರೋ ಹೇಳಿದರೆಂಬ ಕಾರಣಕ್ಕೆ ನಿಮಗೆ ತಿಳಿಯದಿರುವ ಬಗ್ಗೆ ನೀವು ಏನನ್ನಾದರೂ ನಂಬಿದರೆ ನೀವು ತಿಳಿದುಕೊಳ್ಳುವ ಎಲ್ಲಾ ಸಾಧ್ಯತೆಗಳನ್ನು ನಾಶಪಡಿಸುತ್ತೀರಿ. ನಿಮಗೆ ಗೊತ್ತಿಲ್ಲದಿರುವ ವಿಷಯದ ಬಗ್ಗೆ ನಾನು ನಿಮಗೆ ಏನನ್ನೋ ಹೇಳಿದೆ ಎಂದಿಟ್ಟುಕೊಳ್ಳಿ. ನಿಮಗಿರುವ ಆಯ್ಕೆಯೆಂದರೆ, ಒಂದೋ ನೀವದನ್ನು ನಂಬಬಹುದು ಅಥವಾ ಅದನ್ನು ನಂಬದೇ ಇರಬಹುದು. ನೀವು ನನ್ನನ್ನು ನಂಬಿದರೆ, ನಂಬದಿದ್ದರೂ ವಾಸ್ತವತೆಗೆ ಹೆಚ್ಚು ಹತ್ತಿರವಾಗದೇ ಇರಬಹುದು. ನಿಮಗೆ ಎಲ್ಲಾದರೂ ತಲುಪಬೇಕಿದ್ದರೆ, ನೀವು ವಾಸ್ತವತೆಯೊಂದಿಗಿರಬೇಕು. ಇಲ್ಲದಿದ್ದರೆ, ನೀವು ಎಲ್ಲಿಯೂ ಹೋಗುವುದಿಲ್ಲ, ನಿಮಗೆ ಗೊತ್ತಿದೆಯೆಂಬ ಭ್ರಮೆಯಲ್ಲಿರುತ್ತೀರಿ.
ಬಹುಶಃ, ನಾನು ನಿಮ್ಮ ದೇವರುಗಳನ್ನು ಕಸಿದುಕೊಳ್ಳುತ್ತಿದ್ದೇನೆಂದು ನೀವು ಯೋಚಿಸಬಹುದು. ನಾನೇನು ಹಾಗೆ ಮಾಡುತ್ತಿಲ! ಒಮ್ಮೆ ಹೀಗಾಯಿತು; ಬಹಳ ಉತ್ಸಾಹಿಗಳಾದ ಇಬ್ಬರು ಸಹೋದರರಿದ್ದರು. ಹುಡುಗರು ತುಂಬಾ ಚುರುಕಾಗಿದ್ದರೆ, ಅವರು ಯಾವಾಗಲೂ ತೊಂದರೆಯಲ್ಲಿ ಸಿಕ್ಕಿಹಾಕಿಕೊಳ್ಳುವುದು ಸಹಜ. ಅವರು ಸ್ವಲ್ಪ ಶಾಂತರಾಗಿದ್ದರೆ, ಒಳ್ಳೆಯ ಹುಡುಗರಾಗಿರುತ್ತಾರೆ. ಅವರೇನಾದರೂ ತುಂಬಾ ಉತ್ಸಾಹಿತರಾಗಿದ್ದರೆ, ನಿಮಗೇ ಧೈರ್ಯವಿರದ ಕೆಲಸಕ್ಕೆಲ್ಲ ಕೈಹಾಕುವ ಕಾರಣ ಅವರು ನಿರಂತರವಾಗಿ ತೊಂದರೆಯಲ್ಲಿರುತ್ತಾರೆ.
ಈ ಹುಡುಗರು ಯಾವಾಗಲೂ ಎಡವಟ್ಟು ಮಾಡಿಕೊಳ್ಳುತ್ತಿದ್ದರು, ಅವರ ನರೆಹೊರೆಯವರೆಲ್ಲ ಇವರುಗಳ ಬಗ್ಗೆಯೇ ಮಾತಾಡುತ್ತಿದ್ದರು. ಎಲ್ಲರೂ ತಮ್ಮ ಮಕ್ಕಳ ಬಗ್ಗೆ ಮಾತಾಡುವುದನ್ನು ಕಂಡ ತಂದೆತಾಯಿಗೆ ಇದರಿಂದ ಮುಜುಗರವಾಗುತ್ತಿದ್ದ ಕಾರಣ, ಅವರಿಗೆ ಈ ಹುಡುಗರನ್ನು ಸರಿಮಾಡಬೇಕೆಂದುಕೊಂಡರು. ಸಂತಾನೋತ್ಪತ್ತಿಯ ಕಾರಣದಿಂದ ನೀವು ಮಕ್ಕಳನ್ನು ಹುಟ್ಟಿಸಬಹುದು, ಆದರೆ ನಿಮಗೆ ಮಕ್ಕಳನ್ನು ಹೇಗೆ ಸರಿಮಾಡುವುದು ಎನ್ನುವುದು ತಿಳಿಯದ ವಿಷಯವಲ್ಲವೇ? ಈ ರಹಸ್ಯವು ಯಾರಿಗೂ ತಿಳಿದಿಲ್ಲ. ಆದ ಕಾರಣ, ಅವರು ಈ ಮಕ್ಕಳನ್ನು ತಮ್ಮ ಮನೆಯ ಹತ್ತಿರದ ಪಾದ್ರಿಯ ಬಳಿ ಕರೆದುಕೊಂಡುಹೋಗಲು ನಿರ್ಧರಿಸಿದರು.
ಒಟ್ಟಿಗಿದ್ದರೆ ಅವರಿಬ್ಬರು ಬಹಳ ಶಕ್ತಿಶಾಲಿಗಳು, ಹಾಗಾಗಿ, ಮೊದಲು ಚಿಕ್ಕವನನ್ನು ಕರೆದುಕೊಂಡು ಹೋಗಲು ನಿರ್ಧರಿಸಿದರು. ಅವನನ್ನು ಪಾದ್ರಿಯ ಕಚೇರಿಯಲ್ಲಿ ಕೂರಿಸಿ ಹೊರಟುಹೋದರು. ಪಾದ್ರಿಯ ತನ್ನ ಉದ್ದನೆಯ ನಿಲುವಂಗಿಯಲ್ಲಿ ಬಂದರು, ಹುಡುಗನನ್ನೊಮ್ಮೆ ನೋಡಿ, ಅವನನ್ನು ನಿರ್ಲಕ್ಷಿಸಿ, ತನ್ನ ಪಾಡಿಗೆ ತಾನು ಮೇಲೆ ಕೆಳಗೆ ಓಡಾಡಲು ಆರಂಭಿಸಿದರು.
ಪಾದ್ರಿಯು ಉಪಾಯವನ್ನೊಂದು ಯೋಚಿಸುತ್ತಿದ್ದರು. “ಈ ಹುಡುಗನಿಗೆ ದೇವರು ಅವನೊಳಗೆ ಇದ್ದಾನೆಂಬುದನ್ನು ನೆನಪು ಮಾಡಿದರೆ, ಅವನ ತುಂಟಾಟವೆಲ್ಲ ನಿಲ್ಲುತ್ತದೆ” ಎಂದು ಯೋಚಿಸಿದರು. ಮಕ್ಕಳನ್ನು ಬೆಳಸದೇ ಇರುವವರಿಗೆ ಅದ್ಭುತವಾದ ಉಪಾಯಗಳಿರುತ್ತವೆ. ಮಕ್ಕಳನ್ನು ಬೆಳಸಿದವರಿಗೆ ಯಾವುದೇ ಉಪಾಯ ಕೆಲಸ ಮಾಡುವುದಿಲ್ಲ ವೆಂದು ತಿಳಿದಿರುತ್ತದೆ. ಅಗತ್ಯವಿರುವ ಪ್ರೀತಿ ಮತ್ತು ತಾಳ್ಮೆ ನಿಮ್ಮಲ್ಲಿದ್ದರೆ, ನೀವೊಂದು ಸುರಕ್ಷಿತವಾದ ಪರಿಸರವನ್ನು ನಿರ್ಮಿಸಿ, ಅವರು ಒಂದರ ಮೇಲೊಂದು ಹಂತವನ್ನು ಮುಗಿಸುತ್ತಾ ಬೆಳೆಯುತ್ತಾರೆಂದು ಕಾಯುತ್ತೀರಿ. ಆದರೆ, ಮಕ್ಕಳನ್ನು ಬೆಳಸದೇ ಇರುವವರಿಗೆ ಅದ್ಭುತವಾದ ಉಪಾಯಗಳಿರುತ್ತವೆ.
ಆ ಪಾದ್ರಿಯು, “ದೇವರು ನಿನ್ನೊಳಗಿದ್ದಾನೆ” ಎಂದು ಆ ಹುಡುಗನಿಗೆ ಹೇಳಿದರೆ, ಅವನ ತುಂಟಾಟವೆಲ್ಲ ಮಾಯವಾಗುತ್ತದೆಯೆಂದು ನಂಬಿದ್ದರು. ಆದ್ದರಿಂದ, ಇದ್ದಕ್ಕಿದಂತೆ, ಅವರು ನಿಂತು, ಗಡಸು ಧ್ವನಿಯಲ್ಲಿ, “ದೇವರೆಲ್ಲಿದ್ದಾನೆ?” ಎಂದು ಕೇಳಿದರು. ಆ ಹುಡುಗನಿಗೆ ಆಶ್ಚರ್ಯವಾಗಿ ಸುತ್ತಲೂ ನೋಡಿದನು; ದೇವರು ಎಲ್ಲಿಯಾದರೂ ಇದ್ದರೆ, ಅವನು ಈ ಪಾದ್ರಿಯ ಕಚೇರಿಯಲ್ಲೇ ಇರಬೇಕು. ಪಾದ್ರಿಯು ಇದನ್ನು ನೋಡಿದಾಗ, ಹುಡುಗನಿಗೆ ತಾನು ಹೇಳಿದ್ದು ಅರ್ಥವಾಗುತ್ತಿಲ್ಲವೆಂದು ಅನಿಸಿತು. ಅವನಿಗೊಂದು ಸುಳಿವನ್ನು ಕೊಡಲು ನೋಡಿದರು.
ಅವರು ಮೇಜಿನ ಮೇಲಿಂದ ವಾಲಿ, ಆ ಹುಡುಗನತ್ತ ಬೆರಳು ತೋರಿಸಿ, “ಅವನು ಇಲ್ಲಿದ್ದಾನೆʼʼ ಎಂದರು.
ಅವರು ಮತ್ತೊಮ್ಮೆ ಕೇಳಿದರು, “ದೇವರೆಲ್ಲಿದ್ದಾನೆ?ʼʼ. ಆ ಹುಡುಗನಿಗೆ ಇನ್ನೂ ಆಶ್ಚರ್ಯವಾಗಿ ಮೇಜಿನ ಕೆಳಗೆ ನೋಡಿದನು. ಇವನಿಗೆ ಅರ್ಥವೇ ಆಗುತ್ತಿಲ್ಲವೆಂದು ಪಾದ್ರಿಗೆ ತಿಳಿದು, ಅವರು ಮೇಜಿನ್ನು ದಾಟಿ ಅವನ ಬಳಿ ಬಂದು, ಆ ಪುಟ್ಟ ಹುಡುಗನ ಎದೆಯ ಮೇಲೆ ಬೆರಳಿಟ್ಟು, “ದೇವರೆಲ್ಲಿದ್ದಾನೆ?ʼʼ ಎಂದರು.
ಆ ಹುಡುಗನು ದಬಕ್ಕನೆ ಎದ್ದು ನಿಂತು, ಕೋಣೆಯಿಂದ ಓಡಿಹೋಗಿ, ಅವನ ಅಣ್ಣನಿಂದ ಜಾಗಕ್ಕೆ ಬಂದು, “ನಾವು ದೊಡ್ಡ ಪೇಚಿನಲ್ಲಿ ಸಿಕ್ಕಿಹಾಕಿಕೊಂಡಿದ್ದೀವಿʼʼ ಎಂದನು. ಅವನಣ್ಣನು, “ಯಾಕೆ?ʼʼ ಎಂದು ಕೇಳಿದನು. ಅದಕ್ಕೆ ಆ ಚಿಕ್ಕವನು, “ಅವರ ದೇವರು ಕಳೆದು ಹೋಗಿದ್ದಾನೆ. ಅದನ್ನು ಮಾಡಿದ್ದು ನಾವು ಎಂದೆಣಿಸಿದ್ದಾರೆʼʼ ಎಂದನು.
ಹಾಗಾಗಿ, ನಾನು ನಿಮ್ಮ ದೇವರುಗಳನ್ನು ಕಸಿದುಕೊಳ್ಳುತ್ತಿಲ್ಲ. ನಿಮಗಿದು ತಿಳಿದಿರಲಿ ; ನಾವು ಸಾಕಷ್ಟು ಶ್ರಮವಹಿಸಿದರೆ, ನೀವು ಏನಾದರನ್ನೂ ನಂಬುವಂತೆ ಮಾಡಬಹುದು. ಭೂಮಿ ಮೇಲಿನ ಅತ್ಯಂತ ಹಾಸ್ಯಾಸ್ಪದ ಸಂಗತಿಗಳನ್ನೂ ನೀವು ನಂಬುವಂತೆ ಮಾಡಬಹುದು. ನೀವು ಹುಟ್ಟಿದಾರಭ್ಯ, ನನ್ನ ಕಿರು ಬೆರಳು ದೇವರೆಂದು ನಾನು ನಿಮಗೆ ಹೇಳಿದ್ದರೆ, ನಾನು ಆ ಬೆರಳನ್ನು ಎತ್ತಿದಾಗೆಲ್ಲ ನಿಮ್ಮಲ್ಲಿ ದೈವೀಕ ಭಾವನೆಗಳು ಉಕ್ಕುತ್ತಿರುತ್ತಿತ್ತು. ಅಥವಾ ನೀವು ಹುಟ್ಟಿದಾಗಿನಿಂದ, ನಾನು ಇದೇ ಕಿರು ಬೆರಳು ಒಂದು ರಾಕ್ಷಸನೆಂದು ಹೇಳಿಕೊಂಡು ಬಂದಿದ್ದರೆ, ನಿಮ್ಮಲ್ಲಿ ಭಯ ಮೂಡಿರುತ್ತಿತ್ತು.
ನಮಗೆ ಗೊತ್ತಿರುವುದು, ಗೊತ್ತಿದೆ; ನಮಗೆ ಗೊತ್ತಿಲ್ಲದಿರುವುದು, ಗೊತ್ತಿಲ್ಲ ; ಇದನ್ನು ನೋಡುವಷ್ಟರ ಮಟ್ಟಿನ ಜಾಗೃತಿಯನ್ನು ಬೆಳೆಸಿಕೊಳ್ಳುವ ಬುದ್ಧಿವಂತಿಕೆ ಜಗತ್ತಿನಲ್ಲಿದೆ. ಜೀವಿಸಲು ಇದು ಸರಳ ಮಾರ್ಗ. ಜಗತ್ತಿನಲ್ಲಿರುವ ಯಾರೊಂದಿಗೊ ನಿಮಗೆ ಪ್ರಾಮಾಣಿಕರಾಗಿರಲು ಸಾಧ್ಯವಿಲ್ಲದಿದ್ದರೆ, ಅದೊಂದು ಸಾಮಾಜಿಕ ಸಮಸ್ಯೆ ; ಅದು ನಿಮಗೆ ಬಿಟ್ಟಿದ್ದು. ಆದರೆ ನೀವು ಆಧ್ಯಾತ್ಮಿಕವಾಗಿ ಮುನ್ನಡೆಯಬೇಕೆಂದರೆ, ನಿಮ್ಮ ಜೀವನದಲ್ಲಿ ಈ ಒಂದು ಹಜ್ಜೆಯನ್ನಾದರೂ ಇಡಬೇಕು: ನಿಮ್ಮೊಂದಿಗೆ ನೀವೇ ಸಂಪೂರ್ಣವಾಗಿ ಪ್ರಾಮಾಣಿಕವಾಗಿರಿ.
ಲೇಖಕರು ಸದ್ಗುರುಗಳು ಯೋಗಿಗಳು, ದಾರ್ಶನಿಕರು ಹಾಗೂ ಆಧ್ಯಾತ್ಮಿಕ ನಾಯಕರು.
ಇದನ್ನೂ ಓದಿ : Prerane : ಅಲ್ಲಿರುವುದು ನಮ್ಮನೆ, ಇಲ್ಲಿಗೆ ಬಂದೆವು ಸುಮ್ಮನೆ!