Site icon Vistara News

Bharat Ratna 2024: ಅಡ್ವಾಣಿ, ಪಿವಿಎನ್‌ ಸೇರಿ ಐವರು ಮಹನೀಯರಿಗೆ ಭಾರತರತ್ನ ಪ್ರದಾನ

Bharat Ratna 2024

President Droupadi Murmu confers Bharat Ratna 2024 To LK Advani And 4 Others

ನವದೆಹಲಿ: ದೇಶದ ಕೃಷಿ, ಆಡಳಿತ, ಸಮಾಜಸೇವೆ ಸೇರಿ ಹಲವು ಕ್ಷೇತ್ರಗಳಲ್ಲಿ ಗಣನೀಯ ಕೊಡುಗೆ ನೀಡಿದ ಐವರು ಮಹನೀಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನ ನೀಡಿ ಗೌರವಿಸಿದ್ದಾರೆ. ಬಿಜೆಪಿ ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ (LK Advani), ಬಿಹಾರ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್, ಮಾಜಿ ಪ್ರಧಾನಿಗಳಾದ ಪಿ.ವಿ.ನರಸಿಂಹರಾವ್‌ (PV Narasimha Rao), ಚೌಧರಿ ಚರಣ್‌ ಸಿಂಗ್‌ (Charan singh chaudhary) ಹಾಗೂ ಹಸಿರು ಕ್ರಾಂತಿ ಪಿತಾಮಹ ಎಂ.ಎಸ್.ಸ್ವಾಮಿನಾಥನ್‌ (MS Swaminathan) ಅವರಿಗೆ ಭಾರತರತ್ನ ನೀಡಲಾಗಿದೆ. ಮರಣೋತ್ತರವಾಗಿ ಪ್ರಶಸ್ತಿ ಘೋಷಿಸಿದ ಕಾರಣ ಅಡ್ವಾಣಿ ಹೊರತುಪಡಿಸಿ ಉಳಿದ ನಾಲ್ವರ ಕುಟುಂಬಸ್ಥರು ಪ್ರಶಸ್ತಿ ಸ್ವೀಕರಿಸಿದರು. ಮೂಲಗಳ ಪ್ರಕಾರ, ಎಲ್‌.ಕೆ. ಅಡ್ವಾಣಿ ಅವರಿಗೆ ಮಾರ್ಚ್‌ 31ರಂದು ಅವರ ನಿವಾಸದಲ್ಲಿಯೇ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.

ಪಿ.ವಿ. ನರಸಿಂಹರಾವ್‌ ಅವರ ಪುತ್ರ ಪಿ.ವಿ. ಪ್ರಭಾಕರ್‌ ರಾವ್‌, ಎಂ.ಎಸ್.ಸ್ವಾಮಿನಾಥನ್‌ ಅವರ ಪುತ್ರಿ ನಿತ್ಯಾ ರಾವ್‌, ಚೌಧರಿ ಚರಣ್‌ ಸಿಂಗ್‌ ಅವರ ಮೊಮ್ಮಗ ಜಯಂತ್‌ ಸಿಂಗ್‌, ಕರ್ಪೂರಿ ಠಾಕೂರ್‌ ಅವರ ಪುತ್ರ ರಾಮನಾಥ್‌ ಠಾಕೂರ್‌ ಅವರು ಪ್ರಶಸ್ತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವರು ಇದ್ದರು.

ಎಲ್‌.ಕೆ. ಅಡ್ವಾಣಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನ ಪುರಸ್ಕಾರ ನೀಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿ 3ರಂದು ಬೆಳಗ್ಗೆ ಘೋಷಿಸಿದ್ದರು. “ಎಲ್.ಕೆ.ಅಡ್ವಾಣಿ ಅವರಿಗೆ ಭಾರತ ರತ್ನ ನೀಡಲಾಗುವುದು ಎಂದು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ. ನಾನು ಅವರೊಂದಿಗೆ ಮಾತನಾಡಿದ್ದೇನೆ ಮತ್ತು ಈ ಗೌರವವನ್ನು ಪಡೆದಿರುವುದಕ್ಕೆ ಅವರನ್ನು ಅಭಿನಂದಿಸಿದ್ದೇನೆ” ಎಂದು ಪೋಸ್ಟ್‌ ಮಾಡಿದ್ದರು.

ಬಿಹಾರದ ಮಾಜಿ ಸಿಎಂ, ಜನ ನಾಯಕ ಎಂದು ಖ್ಯಾತರಾಗಿದ್ದ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತರತ್ನ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಕರ್ಪೂರಿ ಠಾಕೂರ್ ಅವರು 1970ರಿಂದ 1971ರವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಆಗ ಅವರು ಸಮಾಜವಾದಿ ಮತ್ತು ಭಾರತೀಯ ಕ್ರಾಂತಿ ದಳ ಪಕ್ಷದಲ್ಲಿದ್ದರು. ಮತ್ತೆ 1977ರಿಂದ 1979ರವರೆಗೆ ಎರಡನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿದ್ದರು. ಆಗ ಜನತಾ ಪಾರ್ಟಿಯಲ್ಲಿದ್ದರು.

ಕರ್ಪೂರಿ ಠಾಕೂರ್ ಅವರು ಉತ್ತರ ಭಾರತದಲ್ಲಿ ಹಿಂದುಳಿದ ವರ್ಗಗಳ ನಾಯಕರಾಗಿ ಗುರುತಿಸಿಕೊಂಡಿದ್ದರು. ಬಿಹಾರದ ರಾಜಕಾರಣದಲ್ಲಿ ಅಗ್ರಮಾನ್ಯರಾಗಿದ್ದರು. ನಾಯ್ (ಕ್ಷೌರಿಕ) ಸಮುದಾಯದಲ್ಲಿ ಗೋಕುಲ್ ಠಾಕೂರ್ ಮತ್ತು ರಾಮ್ದುಲಾರಿ ದೇವಿ ದಂಪತಿಗೆ ಜನಿಸಿದ ಕರ್ಪೂರಿ ಅವರು ಜನಿಸಿದರು. ಈಗ ಕರ್ಪುರಿ ಗ್ರಾಮ ಎಂದು ಕರೆಯಲಾಗುವ ಪಿತೌಂಜಿಯಾ ಗ್ರಾಮದಿಂದ ಹಿಡಿದು ಬಿಹಾರದ ಮುಖ್ಯಮಂತ್ರಿಯಾಗುವವರೆಗಿನ ಅವರ ಪಯಣವು ಸಮರ್ಪಣೆ, ಸಾರ್ವಜನಿಕ ಸೇವೆಗೆ ಸಾಕ್ಷಿಯಾಗಿದೆ.

ಇದನ್ನೂ ಓದಿ: LK Advani: ನನ್ನ ತತ್ವಗಳಿಗೆ ಸಂದ ಗೌರವ; ಭಾರತರತ್ನ ಬಳಿಕ ಅಡ್ವಾಣಿ ಭಾವುಕ ನುಡಿ

ಹಸಿರು ಕ್ರಾಂತಿ ಮೂಲಕ ಭಾರತದ ಕೃಷಿಗೆ ಮಹೋನ್ನತ ಕೊಡುಗೆ ನೀಡಿದ ಎಂ.ಎಸ್.ಸ್ವಾಮಿನಾಥನ್‌, ದೇಶದ ಆರ್ಥಿಕತೆಗೆ ಭದ್ರ ಬುನಾದಿ ಹಾಕಿದ ಪಿ.ವಿ.ನರಸಿಂಹರಾವ್‌ ಹಾಗೂ ಸ್ವಾತಂತ್ರ್ಯ ಹೋರಾಟ, ದೇಶದಲ್ಲಿ ಉತ್ತಮ ಆಡಳಿತ ನೀಡಿದ ಚೌಧರಿ ಚರಣ್‌ ಸಿಂಗ್‌ ಅವರಿಗೆ ಭಾರತರತ್ನ ಘೋಷಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಈಗ ಐವರಿಗೂ ರಾಷ್ಟ್ರಪತಿ ಅವರು ಭಾರತರತ್ನ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version