Site icon Vistara News

ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪ್ರಧಾನಿ ಮೋದಿ ಅಭಿನಂದನೆ

murmu-modi

ನವ ದೆಹಲಿ: ದೇಶದ ೧೫ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರನ್ನು ಪ್ರಧಾನಿ ನರೇಂದ್ರ ಮೋದಿ ಗುರುವಾರ ಭೇಟಿಯಾಗಿ ಅಭಿನಂದನೆಗಳನ್ನು ಸಲ್ಲಿಸಿದರು.

ಇದಕ್ಕೂ ಮುನ್ನ ಆಯ್ಕೆಯಾಗುತ್ತಿದ್ದಂತೆ ಸರಣಿ ಟ್ವೀಟ್‌ಗಳ ಮೂಲಕ ಪ್ರಧಾನಿ ಮೋದಿ ಅವರು ಅಭಿನಂದಿಸಿದರು. ದ್ರೌಪದಿ ಮುರ್ಮು ಅವರನ್ನು ದಾಖಲೆಯ ಮತಗಳಿಂದ ಗೆಲ್ಲಲು ಸಹಕರಿಸಿದ್ದಕ್ಕಾಗಿ ಎಲ್ಲ ಪಕ್ಷಗಳ ಸಂಸದರು, ಶಾಸಕರಿಗೆ ಅವರು ಧನ್ಯವಾದಗಳನ್ನು ಸಲ್ಲಿಸಿದರು.

ದ್ರೌಪದಿ ಮುರ್ಮು ಉತ್ತಮ ಶಾಸಕಿ, ಮಂತ್ರಿಯಾಗಿ ಸೇವೆ ಸಲ್ಲಿಸಿದವರು. ಜಾರ್ಖಂಡ್‌ ರಾಜ್ಯಪಾಲರಾಗಿಯೂ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ್ದರು. ಅವರು ನಿಶ್ಚಿತವಾಗಿಯೂ ರಾಷ್ಟ್ರಪತಿ ಹುದ್ದೆಯಲ್ಲಿ ಭಾರತದ ಅಭಿವೃದ್ಧಿಯ ಯಾತ್ರೆಯನ್ನು ಬಲಪಡಿಸಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಮೋದಿ ಹೇಳಿದ್ದಾರೆ.

ಭಾರತ ಇಂದು ಇತಿಹಾಸವನ್ನೇ ಸೃಷ್ಟಿಸಿದೆ. ೧೩೦ ಕೋಟಿ ಭಾರತೀಯರು ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಪೂರ್‌ ಭಾರತದ ಹಿಂದುಳಿದ ಬುಡಕಟ್ಟು ಸಮುದಾಯದ ಪುತ್ರಿಯೊಬ್ಬಳು ಭಾರತದ ರಾಷ್ಟ್ರಪತಿಯಾಗುತ್ತಿರುವುದು ಸಂತಸದ ಮತ್ತು ಹೆಮ್ಮೆಯ ಕ್ಷಣವಾಗಿದೆ, ಈ ಮಹೋನ್ನತ ಸಾಧನೆಗೆ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ದ್ರೌಪದಿ ಮುರ್ಮು ಅವರ ಬದುಕಿನ ಆರಂಭಿಕ ಘಟ್ಟ ಹೋರಾಟದಿಂದ ಕೂಡಿತ್ತು. ಅವರ ಸಮೃದ್ಧ ಸೇವೆ, ಸ್ಪೂರ್ತಿದಾಯಕ ಸಾಧನೆ ಪ್ರತಿಯೊಬ್ಬ ಭಾರತೀಯರಿಗೂ ಪ್ರೇರಣಾದಾಯಿ. ಅವರು ನಮ್ಮ ನಾಗರಿಕರ, ಮುಖ್ಯವಾಗಿ ಬಡವರ ಮತ್ತು ಹಿಂದುಳಿದವರ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ ಎಂದು ಪ್ರಧಾನಿ ಮೋದಿ ಟ್ವೀಟ್‌ ಮಾಡಿದ್ದಾರೆ.

Exit mobile version