ನವದೆಹಲಿ: ಭಾರತದಲ್ಲಿ ನಡೆದ ಏಕ ದಿನ ವಿಶ್ವ ಕಪ್ ನಲ್ಲಿ ನ್ಯೂಜಿಲ್ಯಾಂಡ್ ಪರ ಅತಿ ಹೆಚ್ಚು ಸ್ಕೋರ್ ಗಳಿಸಿದ್ದ ರಚಿನ್ ರವೀಂದ್ರ (Rachin Ravindra) ಬುಧವಾರ ಸರ್ ರಿಚರ್ಡ್ ಹ್ಯಾಡ್ಲೀ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ ವೇಳೆ ನ್ಯೂಜಿಲ್ಯಾಂಡ್ನ ಮಹಿಳೆಯರ ವಿಭಾಗದಲ್ಲಿ ಲೆಗ್ಸ್ಪಿನ್ ಆಲ್ರೌಂಡರ್ ಅಮೆಲಿಯಾ ಕೆರ್ ಪ್ರಮುಖ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೇನ್ ವಿಲಿಯಮ್ಸನ್ ಟೆಸ್ಟ್ ಕ್ರಿಕೆಟ್ನ ಅತ್ಯುತ್ತಮ ಫಾರ್ಮ್ಗಾಗಿ ವರ್ಷದ ಟೆಸ್ಟ್ ಆಟಗಾರ ಪ್ರಶಸ್ತಿ ಪಡೆದರು. ಅವರಿಗೆ ರೆಡ್ಪಾಥ್ ಪ್ರಶಸ್ತಿ ಒಲಿದಿದೆ.
24 ವರ್ಷದ ರವೀಂದ್ರ ಅವರು 2023ರಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ನ ಕೆಂಪು ಮತ್ತು ಬಿಳಿ ಚೆಂಡು ತಂಡಗಳ ಪ್ರಮುಖ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಈ ಪ್ರಶಸ್ತಿಯ ಇತಿಹಾಸದಲ್ಲಿ ಅತ್ಯಂತ ಕಿರಿಯ ವಿಜೇತರಾಗಿದ್ದಾರೆ. ಕಳೆದ ವರ್ಷ ಮಾರ್ಚ್ನಲ್ಲಿ 50 ಓವರ್ಗಳ ಕಿವೀಸ್ ತಂಡಕ್ಕೆ ಪ್ರವೇಶಿಸಿದ ನಂತರ ರವೀಂದ್ರ ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್ನಲ್ಲಿ ಮಿಂಚಿದ್ದರು. ಅಹಮದಾಬಾದ್ನಲ್ಲಿ ಇಂಗ್ಲೆಂಡ್ ವಿರುದ್ಧದ ಟೂರ್ನಿಯ ಮೊದಲ ಪಂದ್ಯದಲ್ಲಿ ಅಜೇಯ 123 ರನ್ ಸೇರಿದಂತೆ ಮೂರು ಶತಕಗಳು ಮತ್ತು ಎರಡು ಅರ್ಧಶತಕಗಳನ್ನು ಸಿಡಿಸಿದ್ದರು. 64 ಸರಾಸರಿಯಲ್ಲಿ 578 ರನ್ ಬಾರಿಸಿ ಮಿಂಚಿದ್ದರು ಪರಿಣಾಮವಾಗಿ ಅವರು 2023ರ ಐಸಿಸಿಯ ವರ್ಷದ ಉದಯೋನ್ಮುಖ ಆಟಗಾರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಜತೆಗೆ 1.8 ಕೋಟಿ ರೂಪಾಯಿಗೆ ಐಪಿಎಲ್ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ.
ಬೇ ಓವಲ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ನಲ್ಲಿ 240 ರನ್ ಗಳಿಸುವ ಮೂಲಕ ರವೀಂದ್ರ ನ್ಯೂಜಿಲೆಂಡ್ ಪರ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಅತ್ಯಧಿಕ ರನ್ ಬಾರಿಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಟಿ 20 ಅಂತಾರಾಷ್ಟ್ರೀಯ ವೇದಿಕೆಯಲ್ಲಿಯೂ ಮಿಂಚಿದ್ದಾರೆ. ಈ ಋತುವಿನಲ್ಲಿ 14 ಟಿ20 ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಕೈ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ 20 ಐನಲ್ಲಿ 35 ಎಸೆತಗಳಲ್ಲಿ 68 ರನ್ ಗಳಿಸಿದ್ದರು.
ಇದನ್ನೂ ಓದಿ : IPL 2024 : ಐಪಿಎಲ್ ಇತಿಹಾಸದಲ್ಲಿ ದಾಖಲಾಗಿರುವ ಅತಿವೇಗದ ಶತಕಗಳ ವಿವರ ಈ ಕೆಳಗಿನಂತಿದೆ
ನ್ಯೂಜಿಲ್ಯಾಂಡ್ ಏಕದಿನ ಮತ್ತು ಟಿ 20ಐ ವರ್ಷದ ಆಟಗಾರ್ತಿ ಖ್ಯಾತಿ ಪಡೆದ ಅಮೇಲಿಯಾ ಕೆರ್, ಡೆಬ್ಬಿ ಹಾಕ್ಲೆ ಪದಕ ಮತ್ತು ಡ್ರೀಮ್ 11 ಸೂಪರ್ ಸ್ಮಾಶ್ ಮಹಿಳಾ ಆಟಗಾರ್ತಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಲೆಗ್ ಸ್ಪಿನ್ ಆಲ್ರೌಂಡರ್ ಏಕದಿನ ರನ್ ಮಾದರಿಯಲ್ಲಿ 67 ಸರಾಸರಿಯಲ್ಲಿ 541 ರನ್ ಗಳಿಸಿದ್ದಾರೆ. ವರ್ಷದಲ್ಲಿ ಅವರು ಎರಡು ಶತಕಗಳನ್ನು ಬಾರಿಸಿದ್ದಾರೆ. 42ರ ಸರಾಸರಿಯಲ್ಲಿ 252 ರನ್ ಹಾಗೂ 118ರ ಸ್ಟ್ರೈಕ್ ರೇಟ್ನಲ್ಲಿ 252 ರನ್ ಗಳಿಸಿದ ಅವರು ತಂಡದ ಜಂಟಿ ಪ್ರಮುಖ ಟಿ20 ವಿಕೆಟ್ ಟೇಕರ್ ಮತ್ತು ಎರಡನೇ ಅತಿ ಹೆಚ್ಚು ಟಿ20 ರನ್ ಸ್ಕೋರರ್ ಎನಿಸಿಕೊಂಡಿದ್ದಾರೆ.
2023ರ ವರ್ಷದ ಮಹಿಳಾ ಏಕದಿನ ಮತ್ತು ಟಿ 20 ಐ ಐಸಿಸಿ ತಂಡಗಳೆರಡರಲ್ಲೂ ಆಯ್ಕೆಯಾಗುವ ಮೂಲಕ ಅಂತರರಾಷ್ಟ್ರೀಯ ರಂಗದಲ್ಲಿ ಕೆರ್ ಅವರ ಪ್ರದರ್ಶನವನ್ನು ಗುರುತಿಸಲಾಗಿದೆ.