Site icon Vistara News

Rahul Gandhi: ದಿಲ್ಲಿಯಲ್ಲಿ ಕೊನೆಗೂ ರಾಹುಲ್ ಗಾಂಧಿಗೆ ಸಿಕ್ಕಿತು ನೆಲೆ! ಇದು ಮಾಜಿ ಸಿಎಂ ಮನೆ

Rahul Gandhi

ನವದೆಹಲಿ: ಸಂಸತ್ ಸದಸ್ಯತ್ವ ಅನರ್ಹಗೊಂಡ ಕಾರಣಕ್ಕೆ ಸರ್ಕಾರಿ ಬಂಗಲೆಯನ್ನು ತೊರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Congress Leader Rahul Gandhi) ಅವರಿಗೆ ದಿಲ್ಲಿಯಲ್ಲಿ ಮತ್ತೊಂದು ಮನೆ ದೊರೆತಿದೆ. ದಕ್ಷಿಣ ದಿಲ್ಲಿಯ ನಿಜಾಮುದ್ದೀನ್ ಈಸ್ಟ್ ಪ್ರದೇಶದಲ್ಲಿರುವ ಮೂರು ಬೆಡ್‌ ರೂಮ್‌ಗಳಿರುವ (3 BHK House) ಮನೆಗೆ ರಾಹುಲ್ ಗಾಂಧಿ ಅವರು ಶಿಫ್ಟ್ ಆಗಲಿದ್ದಾರೆ. ರಾಹುಲ್ ಈಗ ಹೋಗಲಿರುವ ಮನೆಗೆ ಇತಿಹಾಸವಿದೆ. ಏನೆಂದರೆ, ಇದು ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ ಹಾಗೂ ಕಾಂಗ್ರೆಸ್ ಪ್ರಮುಖ ನಾಯಕಿ ಶೀಲಾ ದೀಕ್ಷಿತ್ (Delhi former CM Sheila Dikishit) ವಾಸವಾಗಿದ್ದ ಮನೆಯಾಗಿದ್ದು, ಅದೇ ಮನೆಗೆ ರಾಹುಲ್ ಗಾಂಧಿ ಅವರು ಎಂಟ್ರಿ ಕೊಡುತ್ತಿದ್ದಾರೆ.

ಲೋಕಸಭೆಯಿಂದ ಅನರ್ಹಗೊಂಡ ಬಳಿಕ ರಾಹುಲ್ ಗಾಂಧಿ ಅವರು ತಮ್ಮ ಸರ್ಕಾರಿ ಬಂಗಲೆಯನ್ನು ಏಪ್ರಿಲ್ 22ರಂದು ಖಾಲಿ ಮಾಡಿದ್ದರು. ತಾತ್ಕಾಲಿಕವಾಗಿ ತಮ್ಮ ತಾಯಿಯ ಮನೆಯಲ್ಲಿ ಅವರು ವಾಸವಾಗಿದ್ದರು. ಜತೆಗೆ, ದಿಲ್ಲಿಯಲ್ಲಿ ಮನೆಯನ್ನು ಹುಡುಕುತ್ತಿದ್ದರು. ಈ ಮಧ್ಯೆ, ರಾಹುಲ್ ಗಾಂಧಿ ಅವರಿಗೆ ಹಲವು ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ತಮ್ಮ ಮನೆಗಳನ್ನು ಬಿಟ್ಟುಕೊಡಲು ಮುಂದಾಗಿದ್ದರು. ಆ ಮೂಲಕ ತಮ್ಮ ನಾಯಕನಿಗೆ ಪ್ರೀತಿ ತೋರಿಸಿದ್ದರು.

2019ರ ಜುಲೈನಲ್ಲಿ ಶೀಲಾ ದೀಕ್ಷಿತ್ ಅವರು ಮೃತಪಟ್ಟಾಗ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ರಾಹುಲ್ ಗಾಂಧಿ ಅವರು ಇದೇ ಮನೆಗೆ ಭೇಟಿ ನೀಡಿದ್ದರು. ಈಗ ಶೀಲಾ ದೀಕ್ಷಿತ್ ಕುಟುಂಬವು ಆ ಮನೆಯನ್ನು ತೊರೆದು ಹತ್ತಿರದ ಫ್ಲ್ಯಾಟ್‌ಗೆ ಶಿಫ್ಟ್ ಆಗುತ್ತಿರುವ ವಿಷಯವು ಗೊತ್ತಾಗುತ್ತಿದ್ದಂತೆ, ರಾಹುಲ್ ಗಾಂಧಿ ಅವರು ಆ ಮನೆಯನ್ನು ಬಾಡಿಗೆ ಪಡೆದುಕೊಳ್ಳಲು ಮುಂದಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: Rahul Gandhi : ರಾಹುಲ್ ಗಾಂಧಿಯ ಬಳಿಯಿದೆ ಕೆಟಿಎಂ 390 ಬೈಕ್​; ಅದರ ವಿಶೇಷತೆಗಳೇನು?

ಈ ಮನೆಯುವ 1,500 ಚದರ ಅಡಿಗಳಷ್ಟು ಸರಳವಾದ ಮನೆಯಾಗಿದೆ. ಈ ಮನೆಯು 12, ಲುಟ್ಯೆನ್ಸ್ ದೆಹಲಿಯ ತುಘಲಕ್ ಲೇನ್‌ನಲ್ಲಿರುವ ವಿಶಾಲವಾದ ಬಂಗಲೆಗೆ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ. ಈ ಮನೆಯಲ್ಲಿ ಸುಮಾರು 20 ವರ್ಷಗಳ ಕಾಲ ಗಾಂಧಿ ವಾಸವಾಗಿದ್ದರು.

ಈಗ ರಾಹುಲ್ ಗಾಂಧಿ ಅವರು ಶಿಫ್ಟ್ ಆಗಲಿರುವ ಮನೆಯು 13ನೇ ಶತಮಾನದ ಸೂಫಿ ಸಂತ ಖ್ವಾಜಾ ನಿಜಾಮುದ್ದೀನ್ ಅಲಿಯಾ ದರ್ಗಾದಿಂದ ಕೂಗಳತೆ ಅಂತರದಲ್ಲಿದೆ. ಈ ಮನೆಗೆ ಸಾಂಸ್ಕೃತಿಕ ಇತಿಹಾಸವೂ ಇದೆ. ಶೀಲಾ ದೀಕ್ಷಿತ್ ಅವರು 1991ರಲ್ಲಿ ಈ ಮನೆಯನ್ನು ಖರೀದಿಸಿದ್ದರು. 1998ರಿಂದ 2013ರವರೆಗೆ ದಿಲ್ಲಿಯ ಸಿಎಂ ಆಗಿ ಅವರು ಕೆಲಸ ಮಾಡಿದ್ದಾರೆ. ಅದಾದ ಬಳಿಕ, ಅವರು 2014ರಲ್ಲಿ ಕೇರಳದ ರಾಜ್ಯಪಾಲರಾಗಿದ್ದರು. ನಿವೃತ್ತಿಯಾದ ಬಳಿಕ ಇದೇ ಮನೆಯಲ್ಲಿ ವಾಸವಾಗಿದ್ದರು.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version