Site icon Vistara News

Bharat Jodo Nyay Yatra : ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಸಮಾಪ್ತಿ

Rahul Gandhi

ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 6,700 ಕಿಲೋಮೀಟರ್ ಭಾರತ್ ಜೋಡೋ ನ್ಯಾಯ್ ಯಾತ್ರೆ (Bharat Jodo Nyay Yatra) ಶನಿವಾರ ಮುಂಬೈನ ದಾದರ್​ನಲ್ಲಿ ಸಮಾಪ್ತಿಗೊಂಡಿದೆ. ಅವರ ಸಹೋದರಿ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಧಾರಾವಿಯಲ್ಲಿ ಅಂತಿಮ ಹಂತದ ಯಾತ್ರೆಯಲ್ಲಿ ಸೇರಿಕೊಂಡರು. ಜನವರಿ 14 ರಂದು ಪ್ರಾರಂಭವಾದ ಈ ಯಾತ್ರೆಯು 16 ರಾಜ್ಯಗಳು ಮತ್ತು 110 ಜಿಲ್ಲೆಗಳನ್ನು ಒಳಗೊಂಡಿದೆ.

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸ್ಮಾರಕವಾದ ಚೈತ್ಯಭೂಮಿಯಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆ ಕೊನೆಗೊಂಡಿತು. ಭಾರತ್ ಜೋಡೋ ನ್ಯಾಯ್ ಯಾತ್ರೆ ಕೊನೆಗೊಳ್ಳುತ್ತಿದ್ದಂತೆ ಕಾಂಗ್ರೆಸ್ ನಾಯಕರು ಅಂಬೇಡ್ಕರ್ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು.

ಈ ದೇಶದ ವಾಸ್ತವತೆಯನ್ನು ಜನರಿಗೆ ತಿಳಿಸಲು ಈ ಯಾತ್ರೆಯನ್ನು ನಡೆಸಲಾಗಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

“ಇಂದು ನಮ್ಮ ದೇಶದ ವಾಸ್ತವತೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಬಹಳ ಮಹತ್ವದ ಯಾತ್ರೆಯಾಗಿದೆ. ಜನರ ಅರಿವಿನ ಮೇಲೆ ತೀಕ್ಷ್ಣ ದಾಳಿ ನಡೆಯುತ್ತಿದೆ. ಅದರ ಬಗ್ಗೆ ನಿಮ್ಮೆಲ್ಲರಿಗೂ ಅರಿವು ಮೂಡಿಸಲು ರಾಹುಲ್ ಗಾಂಧಿ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಮಾಡಲಾಗಿದೆ ” ಎಂದು ಅವರು ಹೇಳಿದರು.

ಚುನಾವಣಾ ಬಾಂಡ್​ಗಳ ಬಗ್ಗೆ ಟೀಕೆ

ಯಾತ್ರೆಯ ಕೊನೆಯ ದಿನದಂದು ರಾಹುಲ್ ಚುನಾವಣಾ ಬಾಂಡ್​ಗಳ ಬಗ್ಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿರುದ್ಧ ವಾಗ್ದಾಳಿ ನಡೆಸಿದರು. ಚುನಾವಣಾ ಬಾಂಡ್​ಗಳ ಸೋಗಿನಲ್ಲಿ ಪಕ್ಷವು ಕಂಪನಿಗಳಿಂದ ಹಣವನ್ನು ಸಂಗ್ರಹಿಸುತ್ತಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ : Boiler Blast : ಬಾಯ್ಲರ್ ಬ್ಲಾಸ್ಟ್​ ಆಗಿ 100ಕ್ಕೂ ಅಧಿಕ ಮಂದಿಗೆ ಗಾಯ

“ಅತಿದೊಡ್ಡ ಕಾರ್ಪೊರೇಟ್​ ಕಂಪನಿಗಳು ಚುನಾವಣಾ ಬಾಂಡ್​ಗಳ ಮೂಲಕ ಬಿಜೆಪಿಗೆ ಹಣ ಸುರಿಯುತ್ತಿದೆ. ಈ ಯಾವುದೇ ಕಂಪನಿಗಳು ಇಡಿ ಅಥವಾ ಸಿಬಿಐನಂತಹ ಸಂಸ್ಥೆಗಳಿಂದ ಪರಿಶೀಲನೆಗೆ ಒಳಗಾದಾಗ ಅವು ಬಿಜೆಪಿಗೆ ಆರ್ಥಿಕ ಬೆಂಬಲವನ್ನು ನೀಡುತ್ತವೆ. ಪರಿಣಾಮವಾಗಿ, ತನಿಖೆಗಳು ಯಾವುದೇ ಗಣನೀಯ ಪರಿಣಾಮಗಳಿಲ್ಲದೆ ಮಸುಕಾಗುತ್ತವೆ. ಈ ರೀತಿಯಾಗಿ, ಅವರು ಹಣವನ್ನು ಸುಲಿಗೆ ಮಾಡುತ್ತಾರೆ” ಎಂದು ಅವರು ಹೇಳಿದರು.

ಮಹಾರಾಷ್ಟ್ರ, ಗೋವಾ, ಮಣಿಪುರ ಮತ್ತು ಅರುಣಾಚಲದಲ್ಲಿ ಪ್ರತಿಪಕ್ಷ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಚುನಾವಣಾ ಬಾಂಡ್​ಗಳ ಮೂಲಕ ಹಣವನ್ನು ಸುಲಿಗೆ ಮಾಡಿದೆ ಮತ್ತು ಅದನ್ನು ಬಳಸಿದೆ ಎಂದು ಅವರು ಹೇಳಿದ್ದಾರೆ.

ಜನವರಿ 14 ರಂದು ಸಂಘರ್ಷ ಪೀಡಿತ ಮಣಿಪುರದಿಂದ ಪ್ರಾರಂಭವಾದ ಯಾತ್ರೆ ತನ್ನ 63 ನೇ ದಿನವಾದ ಶನಿವಾರ ಮುಂಬೈಗೆ ಪ್ರವೇಶಿಸಿತ್ತು. ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಾರೋಪದ ಅಂಗವಾಗಿ ಶಿವಾಜಿ ಪಾರ್ಕ್​​ನಲ್ಲಿ ಮೆಗಾ ರಾಲಿ ಆಯೋಜಿಸಲು ಕಾಂಗ್ರೆಸ್ ಯೋಜಿಸಿದೆ. ರ್ಯಾಲಿಯಲ್ಲಿ ಇಂಡಿಯಾ ಬ್ಲಾಕ್​ನ ಹಲವಾರು ನಾಯಕರು ಭಾಗವಹಿಸುವ ಸಾಧ್ಯತೆಯಿದೆ.

Exit mobile version