Site icon Vistara News

Rahul Gandhi | ಆರೆಸ್ಸೆಸ್‌ನಲ್ಲಿ ಮಹಿಳಾ ಕಾರ್ಯಕರ್ತರು ಏಕೆ ಇಲ್ಲ? ಇದು ಸ್ತ್ರೀ ಶೋಷಣೆ : ರಾಹುಲ್‌ ಗಾಂಧಿ

Rahul Gandhi Response Video Viral

ಜೈಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮಹಿಳೆಯರನ್ನು ದಮನಿಸುತ್ತಿದೆ. ಅಲ್ಲಿ ಮಹಿಳಾ ಕಾರ್ಯಕರ್ತರು ಏಕೆ ಇಲ್ಲ? ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi ) ಪ್ರಶ್ನಿಸಿದ್ದಾರೆ.

ಆರೆಸ್ಸೆಸ್‌ ಮಹಿಳಾ ವಿರೋಧಿಯಾಗಿರುವುದರಿಂದಲೇ ಅವರಿಗೆ ಇಲ್ಲಿ ಸದಸ್ಯತ್ವವನ್ನು ನಿರಾಕರಿಸಲಾಗುತ್ತಿದೆ ಎಂದು ರಾಹುಲ್‌ ಗಾಂಧಿ ವ್ಯಾಖ್ಯಾನಿಸಿದ್ದಾರೆ. ಆದರೆ ಆರೆಸ್ಸೆಸ್‌ ರಾಷ್ಟ್ರ ಸೇವಿಕಾ ಸಮಿತಿ ಎಂಬ ಮಹಿಳಾ ಘಟಕವನ್ನೂ ಒಳಗೊಂಡಿದೆ.

ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಯವನ್ನು ಹುಟ್ಟಿಸುವುದೇ ಬಿಜೆಪಿ ಮತ್ತು ಆರೆಸ್ಸೆಸ್‌ ಷಡ್ಯಂತ್ರವಾಗಿದೆ ಎಂದರು.

ತಮಿಳುನಾಡಿನ ಕನ್ಯಾಕುಮಾರಿಯಿಂದ ಸೆಪ್ಟೆಂಬರ್‌ 7ರಂದು ಆರಂಭವಾಗಿದ್ದ ಭಾರತ್‌ ಜೋಡೊ ಯಾತ್ರೆ ರಾಜಸ್ಥಾನವನ್ನು ಹಾದು ಹೋಗುತ್ತಿದೆ. ಇದು ಶುಕ್ರವಾರ 100 ದಿನಗಳನ್ನು ಪೂರೈಸಲಿದೆ.

ಬಿಜೆಪಿಯು ಜೈ ಸಿಯಾರಾಮ್‌ ಬದಲಿಗೆ ಜೈ ಶ್ರೀರಾಮ್ ಎನ್ನುವ ಮೂಲಕ ಸೀತಾಮಾತೆಯನ್ನು ಅವಮಾನಿಸುತ್ತದೆ ಎಂದೂ ರಾಹುಲ್‌ ಗಾಂಧಿ ದೂರಿದರು. ಸಿಯಾರಾಮ್‌ ಎಂದರೆ ಭಗವಾನ್‌ ಶ್ರೀರಾಮ ಚಂದ್ರ ಹಾಗೂ ಸೀತಾ ಮಾತೆ ಇಬ್ಬರನ್ನೂ ಒಟ್ಟಿಗೆ ಕರೆಯುವುದಾಗಿದೆ.‌ ಜೈ ಶ್ರೀರಾಮ್‌ ಎನ್ನುವ ಮೂಲಕ ನೀವು ಏಕೆ ಸೀತಾಮಾತೆಯನ್ನು ದೂರ ಇಡುತ್ತಿದ್ದೀರಿ? ಭಾರತದ ಮಹಿಳೆಯರನ್ನು ಏಕೆ ಅವಮಾನಿಸುತ್ತಿದ್ದೀರಿ? ಎಂದು ರಾಹುಲ್‌ ಗಾಂಧಿ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ದೇಶದಲ್ಲಿ ನಿರುದ್ಯೋಗದ ಭೀತಿ ಹೆಚ್ಚುತ್ತಿದೆ. ಈ ಭೀತಿಯ ಲಾಭವನ್ನು ಆರೆಸ್ಸೆಸ್‌ ಮತ್ತು ಬಿಜೆಪಿ ಪಡೆಯುತ್ತಿದೆ. ಭೀತಿಯನ್ನು ದ್ವೇಷವಾಗಿ ಪರಿವರ್ತಿಸುತ್ತದೆ. ಭಾರತ್‌ ಜೋಡೋ ಯಾತ್ರೆ ಈ ದ್ವೇಷಕ್ಕೆ ವಿರುದ್ಧವಾಗಿದೆ.

ದೇಶದ 100 ಶ್ರೀಮಂತ ವ್ಯಕ್ತಿಗಳು 55 ಕೋಟಿ ಜನ ಹೊಂದಿರುವ ಸಂಪತ್ತಿಗೆ ಸಮವಾಗುವಷ್ಟು ಸಂಪತ್ತನ್ನು ಹೊಂದಿದ್ದಾರೆ. ಭಾರತದ ಅರ್ಧದಷ್ಟು ಸಂಪತ್ತು 100 ಜನರ ಕೈಯಲ್ಲಿದೆ ಎಂದರು. ಭಾರತದಲ್ಲಿ ನಾಲ್ಕೈದು ಮಂದಿ ಶ್ರೀಮಂತರನ್ನು ಮಹಾರಾಜರು ಎನ್ನಬಹುದು. ಇಡೀ ಸರ್ಕಾರ, ಅಧಿಕಾರಿ ವರ್ಗ, ಮಾಧ್ಯಮ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಪರ ಕೆಲಸ ಮಾಡುತ್ತಾರೆ ಎಂದು ರಾಹುಲ್‌ ಗಾಂಧಿ ಆರೋಪಿಸಿದರು.

Exit mobile version