Site icon Vistara News

Rahul Gandhi : ಕೆಂಪುಕೋಟೆಯಲ್ಲಿ ರಾಹುಲ್ ಗಾಂಧಿಗೆ ಲಾಸ್ಟ್​ ಬೆಂಚ್​; ಬಿಜೆಪಿ- ಕಾಂಗ್ರೆಸ್​ ಜಟಾಪಟಿ

Rahul Gandhi

ಬೆಂಗಳೂರು: ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಲೋಕ ಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಎರಡನೇ ಕೊನೆಯ ಸಾಲಿನಲ್ಲಿ ಆಸನವನ್ನು ನಿಗದಿಪಡಿಸಿದ್ದಕ್ಕೆ ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಹೊಸ ಜಟಾಪಟಿ ಶುರುವಾಗಿದೆ. ಬೆಳಿಗ್ಗೆಯ ಸಮಾರಂಭ ಮುಗಿಯುವ ಮೊದಲು, ಕಾಂಗ್ರೆಸ್ ನಾಯಕರು ಮತ್ತು ಬೆಂಬಲಿಗರಿಂದ ಆಕ್ರೋಶದ ಪ್ರತಿಭಟನೆಗಳಿಂದ ಸಾಮಾಜಿಕ ಮಾಧ್ಯಮಗಳು ತುಂಬಿದವು. ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದ ರಕ್ಷಣಾ ಸಚಿವಾಲಯವು ಕೊನೆಗೆ ಸ್ಪಷ್ಟೀಕರಣವನ್ನು ನೀಡಿತು. ಆದರೆ ಟೀಕೆಗಳು ಮುಂದುವರಿದವು.

ಕ್ಯಾಬಿನೆಟ್ ದರ್ಜೆಯನ್ನು ಹೊಂದಿರುವ ವಿರೋಧ ಪಕ್ಷದ ನಾಯಕ ಔಪಚಾರಿಕ ಕಾರ್ಯಕ್ರಮಗಳಲ್ಲಿ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು ಎಂದು ಪ್ರೋಟೋಕಾಲ್ ಹೇಳುತ್ತದೆ. ಈ ವರ್ಷ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಶಿವರಾಜ್ ಸಿಂಗ್ ಚೌಹಾಣ್, ಅಮಿತ್ ಶಾ ಮತ್ತು ಎಸ್.ಜೈಶಂಕರ್ ಈ ಸಾಲಿನಲ್ಲಿದ್ದರು. ಆದರೆ, ರಾಹುಲ್ ಗಾಂಧಿಗೆ ಭಾರತೀಯ ಒಲಿಂಪಿಕ್ ಪದಕ ವಿಜೇತರ ಹಿಂದಿನ ಸೀಟು ನಿಗದಿ ಮಾಡಿದ್ದರು. ಭಾರತದ ಸ್ಟಾರ್ ಶೂಟರ್ ಗಳಾದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್, ಭಾರತ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮತ್ತು ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಸೇರಿದಂತೆ ಹಾಕಿ ಆಟಗಾರರು ಅವರಿಗಿಂತ ಮುಂದೆ ಕುಳಿತಿದ್ದರು.

ಕಾರ್ಯಕ್ರಮಗಳಲ್ಲಿ ಆಸನ ವ್ಯವಸ್ಥೆ ಆದ್ಯತೆಯ ನಿಯಮ ಅನ್ನು ಅನುಸರಿಸುತ್ತದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. “ಈ ವರ್ಷ, ಒಲಿಂಪಿಕ್ ಕ್ರೀಡಾಕೂಟದ ಪದಕ ವಿಜೇತರನ್ನು ಗೌರವಿಸಲು ನಿರ್ಧರಿಸಲಾಯಿತು. ಒಲಿಂಪಿಕ್ ಕ್ರೀಡಾಕೂಟದ ಪದಕ ವಿಜೇತರ ಹಿಂದೆ ಕೆಲವು ಕೇಂದ್ರ ಸಚಿವರು ಸಹ ಕುಳಿತಿದ್ದರು ಎಂಬುದನ್ನು ಗಮನಿಸಬಹುದು” ಎಂಬುದಾಗಿ ಬಿಜೆಪಿ ಸಮರ್ಥಿಸಿಕೊಂಡಿದೆ.

“ಒಲಿಂಪಿಯನ್​ಗಳ ಮೇಲಿನ ಗೌರವದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ರಕ್ಷಣಾ ಸಚಿವಾಲಯದ ದುರ್ಬಲ ವಿವರಣೆಯು ಸರಿಯಾಗಿಲ್ಲ. . ಒಲಿಂಪಿಯನ್​ಗಳು ಪ್ರತಿಯೊಂದು ಗೌರವಕ್ಕೂ ಅರ್ಹರಾಗಿದ್ದರೂ, ಅಮಿತ್ ಶಾ ಅಥವಾ ನಿರ್ಮಲಾ ಸೀತಾರಾಮನ್ ಅವರಂತಹ ಕ್ಯಾಬಿನೆಟ್ ಮಂತ್ರಿಗಳು ಅವರಿಗಿಂತ ಮುಂದೆ ಮುಂದಿನ ಸಾಲಿನ ಆಸನಗಳನ್ನು ಹೇಗೆ ಪಡೆಯುತ್ತಾರೆ” ಎಂದು ಹಿರಿಯ ಕಾಂಗ್ರೆಸ್ ಮುಖಂಡ ಕೆ.ಸಿ.ವೇಣುಗೋಪಾಲ್ ಟ್ವೀಟ್ ಮಾಡಿದ್ದಾರೆ.

ಪ್ರೋಟೋಕಾಲ್ ಪ್ರಕಾರ, ಉಭಯ ಸದನಗಳ ಪ್ರತಿಪಕ್ಷ ನಾಯಕರು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಬೇಕು. ರಾಹುಲ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆಸನಗಳು 5 ನೇ ಸಾಲಿನಲ್ಲಿದ್ದವು. ಇದು ಹುದ್ದೆಗೆ ಮಾಡಿದ ಅವಮಾನ . ಇದು ಸಂಸತ್ತಿನಲ್ಲಿ ರಾಹುಲ್ ಜಿ ಪ್ರತಿನಿಧಿಸುವ ಭಾರತದ ಜನರಿಗೆ ಮಾಡಿದ ಅವಮಾನ ಎಂದು ವೇಣುಗೋಪಾಲ್ ಹೇಳಿದರು.

‘ನಾವು ಒಲಿಂಪಿಯನ್ ಗಳನ್ನು ಗೌರವಿಸಲು ಬಯಸಿದ್ದರಿಂದ ಈ ರೀತಿ ಮಾಡಲಾಗಿದೆ’ ಎಂದು ರಕ್ಷಣಾ ಸಚಿವಾಲಯದಿಂದ ತಪ್ಪು ಹೇಳಿಕೆ ಬಂದಿದೆ. ಅವರನ್ನು ಗೌರವಿಸಬೇಕು. ಆದರೆ ಅಮಿತ್ ಶಾ, ಜೆಪಿ ನಡ್ಡಾ, ಎಸ್ ಜೈಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಅವರಿಗೆ ಅವರ ಮೇಲೆ ಗೌರವ ಇಲ್ಲವೇ ” ಎಂದು ಕಾಂಗ್ರೆಸ್​ ವಕ್ತಾರೆ ಸುಪ್ರಿಯಾ ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರವು ಆಗಿನ ವಿರೋಧ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರಿಗೆ ಮುಂದಿನ ಸಾಲಿನಲ್ಲಿ ಆಸನವನ್ನು ನಿಗದಿಪಡಿಸಿತ್ತು.

Exit mobile version