ಬೆಂಗಳೂರು: ರಾಜಧಾನಿ ಬೆಂಗಳೂರು, ಕೊಡಗು, ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧೆಡೆ ಬುಧವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದೆ. ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆಯಿಲ್ಲದೆ ಕಂಗೆಟ್ಟಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಬೆಂಗಳೂರಿನ ಹಲವೆಡೆ ದಿಢೀರನೆ ಸುರಿದ ಮಳೆಯಿಂದ (Rain News) ರಸ್ತೆಗಳು ಜಲಾವೃತವಾಗಿ ಹೊಳೆಯಂತಾಗಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.
ಬೆಂಗಳೂರಲ್ಲಿ ಮಳೆ ಆರ್ಭಟ; ಸಿಟಿಯಲ್ಲಿ ಕೂಲ್ ವೆದರ್
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಭಾರಿ ಸುರಿಯುತ್ತಿದೆ. ಇನ್ನು ನಗರದಲ್ಲಿ ಬುಧವಾರ ಸಂಜೆಯಿಂದ ಹಲವೆಡೆ ಮಳೆ ಅರ್ಭಟ ಶುರು ಆಗಿದ್ದು, ಶಿವಾಜಿನಗರ, ವಸಂತನಗರ, ಶಾಂತಿನಗರ, ಜಯ ನಗರ, ವಿಜಯ ನಗರ, ಮಲ್ಲೇಶ್ವರಂ, ಶಿವಾನಂದ ಸರ್ಕಲ್, ಯಶವಂತಪುರ, ರಾಜಾಜಿ ನಗರ, ಶೇಷಾದ್ರಿಪುರಂ, ಎಂ.ಜಿ ರಸ್ತೆ, ಕಬ್ಬನ್ ಪಾರ್ಕ್ ಸೇರಿದಂತೆ ನಗರದ ಹಲವೆಡೆ ಭರ್ಜರಿ ಮಳೆಯ ಜೊತೆಗೆ ಗುಡುಗು-ಮಿಂಚು ಸಹ ಕಂಡು ಬಂದಿದೆ. ಬೇಸಿಗೆಯಲ್ಲಿ ಭಾರಿ ಮಳೆಯಿಂದ ರಾಜಧಾನಿಯ ವಾತಾವರಣ ತಂಪಾಗಿದ್ದರಿಂದ ಜನರು ಸಂತಸಪಡುತ್ತಿದ್ದಾರೆ.
ಮರ ಬಿದ್ದು 2 ಕಾರು ಜಖಂ
ಕೂಡ್ಲು ಗೇಟ್, ರೂಪೇನ ಅಗ್ರಹಾರದ ಬಳಿ ಮಳೆಯಿಂದ ರಸ್ತೆಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದದ್ದು ಕಂಡುಬಂತು. ಇನ್ನು ಮಡಿವಾಳ ಸುತ್ತ ಮುತ್ತಲೂ ಭಾರಿ ಮಳೆಗಿದ್ದರಿಂದ ಸಂಚಾರ ದಟ್ಟಣೆ ಉಂಟಾಗಿತ್ತು. ಉಲ್ಲಾಳ ಹತ್ತಿರದ ಜ್ಞಾನಜ್ಯೋತಿ ನಗರದಲ್ಲಿ ಮರ ಬಿದ್ದಿದ್ದರಿಂದ ಮನೆ ಮುಂದೆ ನಿಲ್ಲಿಸಿದ್ದ 2 ಕಾರು ಜಖಂಗೊಂಡಿದೆ.
ಎಲೆಕ್ಟ್ರಾನಿಕ್ ಸಿಟಿ ಸಮೀಪ ಹೆದ್ದಾರಿ ಜಲಾವೃತ
ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರ ಸಿಗ್ನಲ್ ಬಳಿ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ ಜಲಾವೃತವಾಗಿದ್ದರಿಂದ ಸವಾರರು ಪರದಾಡಿದರು. ಪ್ರತಿ ಬಾರಿ ಮಳೆ ಬಂದಾಗ ರಾಷ್ಟ್ರೀಯ ಹೆದ್ದಾರಿ ಹೊಳೆಯಂತಾಗುತ್ತದೆ. ಮಳೆ ನೀರು ಹೊರಹೋಗಲು ಸೂಕ್ತ ವ್ಯವಸ್ಥೆ ಮಾಡದ ಅಧಿಕಾರಿಗಳು ನಿರ್ಲಕ್ಷ್ಯವಹಿಸಿರುವುದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಇದನ್ನೂ ಓದಿ | Karnataka Weather : ಬಿರುಗಾಳಿಯೊಂದಿಗೆ ಗುಡುಗು, ಮಿಂಚು ಸಹಿತ ಭಾರಿ ಮಳೆ ಎಚ್ಚರಿಕೆ
ಕೊಡಗು, ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ
ಕೊಡಗು ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ ಸುರಿದಿದ್ದು, ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನು ಚಿಕ್ಕಮಗಳೂರಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು, ಮೂಡಿಗೆರೆ ಪಟ್ಟಣದಲ್ಲಿ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಗುಡುಗು, ಸಿಡಿಲು, ಆಲಿಕಲ್ಲು ಸಹಿತ ಭಾರಿ ಮಳೆ ಸುರಿದಿದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮೂಡಿಗೆರೆ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿತ್ತು.
ಇನ್ನು ಚಿಕ್ಕಬಳ್ಳಾಪುರದಲ್ಲಿ ಬಿಸಿಲಿಗೆ ನೀರಿಲ್ಲದೆ ಒಣಗುತಿದ್ದ ಬೆಳೆಗಳಿಗೆ ವರುಣ ತಂಪೆರೆದಿದ್ದಾನೆ. ರಣಬಿಸಿಲಿಗೆ ಕೃಷಿ ಚಟುವಟಿಕೆಗಳಿಂದ ಕಂಗೆಟ್ಟಿದ್ದ ಅನ್ನದಾತ, ಕೊನೆಗೂ ಒಂದಷ್ಟು ಮಳೆ ಬಂತಲ್ಲಾ ಎಂದು ನಿಟ್ಟುಸಿರು ಬಿಟ್ಟಿದ್ದಾನೆ.
ಕೆಜಿಎಫ್‌ನಲ್ಲಿ ಮನೆಗಳಿಗೆ ನುಗ್ಗಿದ ನೀರು
ಕೋಲಾರ: ಜಿಲ್ಲೆಯ ವಿವಿಧೆಡೆ ಬೆಳ್ಳಂ ಬೆಳಗ್ಗೆ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದ್ದರಿಂದ ಮಾವು ಹಾಗೂ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ. ಇನ್ನು ಕೆಜಿಎಫ್ ನಗರದ ಹಲವು ಬಡಾವಣೆಗಳ ತಗ್ಗು ಪ್ರದೇಶ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುತ್ತಿದ್ದಾರೆ. ಕೆಜಿಎಫ್‌ನ ರಾಬರ್ಟ್‌ಸನ್ ಪೇಟೆ, ಮಾರಿಕುಪ್ಪಮ್, ಫಿಶ್ ಲೈನ್ ಬಡಾವಣೆಗಳಲ್ಲಿ ಮನೆಗಳಿಗೆ ಮಳೆನೀರು ನುಗ್ಗಿದ್ದ ಮನೆಯಲ್ಲಿನ ವಸ್ತುಗಳು ನೀರುಪಾಲಾಗಿವೆ. ಇದರಿಂದ ಜನರು ಸಂಕಷ್ಟ ಅನುಭವಿಸುವಂತಾಗಿದೆ.
ಮರ ಬಿದ್ದು ವ್ಯಕ್ತಿ ಸಾವು
ರಾತ್ರಿ ಸುರಿದ ಭಾರಿ ಮಳೆಗೆ ಮರ ಉರುಳಿದ್ದರಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಡೆಂಕಣಿಕೋಟೆ ಸಮೀಪದ ಅಂತೇವನಪಲ್ಲಿಯಲ್ಲಿ ನಡೆದಿದೆ. ಬೆಳಗ್ಗೆ 8 ಗಂಟೆ ವೇಳೆಗೆ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರ ಮೇಲೆ ಮರದ ಬೇರು ಬಿದ್ದು ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ಚಿಕಿತ್ಸೆಗಾಗಿ ಡೆಂಕಣಿಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ | Heavy Rain: ಕಳುವರಹಳ್ಳಿಯಲ್ಲಿ ಭಾರೀ ಗಾಳಿ ಮಳೆಗೆ ಶಾಲಾ ಚಾವಣಿ ಕುಸಿತ
ಇನ್ನು ಮುಂದಿನ ಮೂರು ದಿನಗಳಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ, ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ಮೇ 10ರಂದು ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಸಹ ತಿಳಿಸಿದೆ. ಬೆಂಗಳೂರಿನಲ್ಲಿ ಇಂದು ಮತ್ತು ನಾಳೆ ಮಳೆಯಾಗುವ ಸಾಧ್ಯತೆ ಇದ್ದು, ನಗರದಲ್ಲಿ ಗುಡುಗು ಮಿಂಚಿನೊಂದಿಗೆ ಮಳೆಯಾಗುವ ಮುನ್ಸೂಚನೆ ಇದೆ.