Site icon Vistara News

Kisan Samman Nidhi: ರೈತರಿಗೆ ಗುಡ್‌ ನ್ಯೂಸ್;‌ ಕಿಸಾನ್‌ ಸಮ್ಮಾನ್‌ ನಿಧಿ 2 ಸಾವಿರ ರೂ. ಹೆಚ್ಚಳ, ಇನ್ನು ಸಿಗೋದು 8 ಸಾವಿರ ರೂ.!

Kisan Samman Nidhi

Rajasthan government increases 'PM Kisan Samman Nidhi' amount by Rs 2,000

ಜೈಪುರ: ರಾಜಸ್ಥಾನದ ರೈತರಿಗೆ (Rajasthan Farmers) ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಕೇಂದ್ರ ಸರ್ಕಾರದ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ (PM Kisan Samman Nidhi Scheme) ಅಡಿಯಲ್ಲಿ ವಾರ್ಷಿಕವಾಗಿ ರೈತರಿಗೆ ನೀಡುವ 6 ಸಾವಿರ ರೂಪಾಯಿಯನ್ನು ರಾಜ್ಯ ಸರ್ಕಾರವು 8 ಸಾವಿರ ರೂ.ಗೆ ಏರಿಕೆ ಮಾಡಿದೆ. ಕಿಸಾನ್‌ ಸಮ್ಮಾನ್‌ ನಿಧಿಗೆ ರಾಜ್ಯ ಸರ್ಕಾರವೂ 2 ಸಾವಿರ ರೂ. ಸೇರಿಸಿರುವ ಕಾರಣ ರಾಜ್ಯದ ರೈತರು ವರ್ಷಕ್ಕೆ 8 ಸಾವಿರ ರೂ. ಪಡೆಯಲಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಭಜನ್‌ಲಾಲ್‌ ಶರ್ಮಾ (Bhajanlal Sharma) ಘೋಷಣೆ ಮಾಡಿದ್ದಾರೆ.

“ಅನ್ನದಾತರ ಕಲ್ಯಾಣವೇ ನಮ್ಮ ಸರ್ಕಾರದ ಧ್ಯೇಯವಾಗಿದ್ದು, ರಾಜ್ಯ ಸರ್ಕಾರವು ಪಿಎಂ ಕಿಸಾನ್‌ ಸಮ್ಮಾನ್‌ ನಿಧಿಯ ಮೊತ್ತವನ್ನು 2 ಸಾವಿರ ರೂ. ಹೆಚ್ಚಿಸಿದೆ. ರೈತರ ಖಾತೆಗೆ ವಾರ್ಷಿಕ 6 ಸಾವಿರ ರೂ. ಬದಲು ಇನ್ನು 8 ಸಾವಿರ ರೂ. ಜಮೆಯಾಗಲಿದೆ” ಎಂದು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಭಜನ್‌ಲಾಲ್‌ ಶರ್ಮಾ ಪೋಸ್ಟ್‌ ಮಾಡಿದ್ದಾರೆ. ಕಳೆದ ನವೆಂಬರ್‌ನಲ್ಲಿ ರಾಜಸ್ಥಾನ ವಿಧಾನಸಭೆಗೆ ಚುನಾವಣೆ ನಡೆದ ವೇಳೆ ಬಿಜೆಪಿಯು ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕಿಸಾನ್‌ ಸಮ್ಮಾನ್‌ ನಿಧಿಯ ಮೊತ್ತವನ್ನು ಹೆಚ್ಚಿಸುವುದಾಗಿ ಭರವಸೆ ನೀಡಿತ್ತು. ಅದರಂತೆ, ರಾಜ್ಯ ಸರ್ಕಾರವೀಗ ಕಿಸಾನ್‌ ಸಮ್ಮಾನ್‌ ನಿಧಿಯನ್ನು ಹೆಚ್ಚಿಸಿದೆ.

ಅಷ್ಟೇ ಅಲ್ಲ, ರಾಜಸ್ಥಾನದಲ್ಲಿ ಕಳೆದ ಐದು ವರ್ಷದಲ್ಲಿ ನಡೆದ ನೇಮಕಾತಿಗಳ ಕುರಿತು ತನಿಖೆಗೂ ಮುಖ್ಯಮಂತ್ರಿ ಆದೇಶಿಸಿದ್ದಾರೆ. ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಕುರಿತು ಕಾಂಗ್ರೆಸ್‌ ನಾಯಕ ಸಚಿನ್‌ ಪೈಲಟ್‌ ಅವರು ಅಸಮಾಧಾನ ವ್ಯಕ್ತಪಡಿಸಿದ್ದರು. ನೇಮಕಾತಿ ಅಕ್ರಮ, ಭ್ರಷ್ಟಾಚಾರದ ಕುರಿತು ತನಿಖೆಯಾಗಬೇಕು ಎಂದು ಆಗ ಅಸ್ತಿತ್ವದಲ್ಲಿದ್ದ ತಮ್ಮದೇ ಸರ್ಕಾರಕ್ಕೆ ಆಗ್ರಹಿಸಿದ್ದರು.

3 ಕಂತುಗಳಲ್ಲಿ ಕೇಂದ್ರ ಸರ್ಕಾರ ಪಾವತಿ

ಪಿಎಂ-ಕಿಸಾನ್ ಸಮ್ಮಾನ್‌ ಯೋಜನೆಯ ಹಣವನ್ನು ನಾಲ್ಕು ತಿಂಗಳಿಗೊಮ್ಮೆ 2,000 ರೂ.ಗಳಂತೆ ವರ್ಷಕ್ಕೆ 3 ಬಾರಿ ಪಾವತಿಸಲಾಗುತ್ತದೆ. ಎಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ ಎಂಬ ಮೂರು ಕಂತುಗಳಲ್ಲಿ ಹಣವನ್ನು ಒದಗಿಸಲಾಗುತ್ತದೆ. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ದೇಶದ ಸಣ್ಣ ಮತ್ತು ಅತಿ ಸಣ್ಣ ಕೃಷಿಕರಿಗೆ ಈ ಯೋಜನೆ ನೆರವಾಗುತ್ತಿದೆ. ಕೇಂದ್ರ ಸರ್ಕಾರವು 17ನೇ ಕಂತಿನ ಹಣವನ್ನು ಬಿಡುಗಡೆ ಮಾಡಬೇಕಿದ್ದು, ಇದುವರೆಗೆ ದಿನಾಂಕ ನಿಗದಿ ಮಾಡಿಲ್ಲ.

ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಪರಿಶೀಲಿಸುವ ವಿಧಾನ

ಅಧಿಕೃತ ವೆಬ್‌ಸೈಟ್‌ www.pmkisan.gov.inಗೆ ಭೇಟಿ ನೀಡಿ.
ಆಗ ತೆರೆದುಕೊಳ್ಳುವ ಪುಟದಲ್ಲಿನ ‘Beneficiary list’ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.
ನಿಮ್ಮ ರಾಜ್ಯ, ಜಿಲ್ಲೆ, ಉಪಜಿಲ್ಲೆ, ಬ್ಲಾಕ್‌ ಮತ್ತು ಗ್ರಾಮವನ್ನು ಆಯ್ಕೆ ಮಾಡಿ.
‘Get report’ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ.
ಹೆಚ್ಚಿನ ಮಾಹಿತಿಗೆ ಹೆಲ್ಪ್‌ಲೈನ್‌ ನಂಬರ್‌ 155261 ಮತ್ತು 011-24300606 ಅನ್ನು ಸಂಪರ್ಕಿಸಿ.

ಇದನ್ನೂ ಓದಿ: Money Guide: ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತು ಬಿಡುಗಡೆಗೆ ದಿನಗಣನೆ; ನಗದು ಜಮೆ ಯಾವಾಗ?

Exit mobile version