Site icon Vistara News

IPL 2024 : ಗೆಲುವಿನ ಹಾದಿಗೆ ಮರಳಿದ ರಾಜಸ್ಥಾನ್​, ಪಂಜಾಬ್​ಗೆ ಮತ್ತೊಂದು ಸೋಲು

IPL 2024

ಮಲ್ಲಾನ್​ಪುರ: ಸಂಘಟಿತ ಹೋರಾಟ ಪ್ರಯತ್ನದ ಫಲವಾಗಿ ಐಪಿಎಲ್​ 2024ರ (IPL 2024) 27ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ 3 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದು ಐದನೇ ಗೆಲುವಾಗಿದ್ದು ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಾಪಾಡಿಕೊಂಡಿದೆ. ವೆಸ್ಟ್ ಇಂಡೀಸ್ ಆಟಗಾರ ಶಿಮ್ರೋನ್ ಹೆಟ್ಮಾಯರ್​ ಕೊನೇ ಹಂತದಲ್ಲಿ 10 ಎಸೆತಕ್ಕೆ 27 ರನ್ ಗಳಿಸುವ ಮೂಲಕ ರೋಚಕ ಗೆಲುವು ತಂದುಕೊಟ್ಟರು. ಅದಕ್ಕೂ ಮೊದಲು ಯಶಸ್ವಿ ಜೈಸ್ವಾಲ್ ಆರಂಭದಲ್ಲಿ 39 ರನ್ ಗಳಿಸುವ ಮೂಲಕ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು.

ಇಲ್ಲಿನ ಮಹಾರಾಜ ಯಾದವೀಂದ್ರ ಸಿಂಗ್​​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಪಂಜಾಬರ್ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 147 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ರಾಜಸ್ಥಾನ್​ ತಂಡ ಇನ್ನೊಂದು ಎಸೆತ ಬಾಕಿ ಇರುವಾಗ 7 ವಿಕೆಟ್​ ನಷ್ಟ ಮಾಡಿಕೊಂಡು 152 ರನ್ ಬಾರಿಸಿ ಗೆಲುವು ಸಾಧಿಸಿತು.

ಸಾಧಾರಣ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್​ ಮೊದಲ ವಿಕೆಟ್​ಗೆ 51 ರನ್ ಬಾರಿಸಿತು. ಬಳಿಕ ಯಶಸ್ವಿ ಜೈಸ್ವಾಲ್ 39 ರನ್ ಬಾರಿಸಿ ಔಟಾದರೆ ತನುಷ್ ಕೋಟ್ಯಾನ್​ 24 ರನ್ ಬಾರಿಸಿದರು. ಸಂಜು ಸ್ಯಾಮ್ಸನ್​ 18 ರನ್ ಗಳಿಸಿದರೆ ರಿಯಾನ್ ಪರಾಗ್​ 23 ರನ್ ಕೊಡುಗೆ ಕೊಟ್ಟರು. ದ್ರುವ್ ಜುರೆಲ್ 6 ರನ್​ಗೆ ಔಟಾದರೆ ಪೊವೆಲ್ 11 ರನ್​ ಗಳಿಸಿದರು. ಕೊನೆಯಲ್ಲಿ ಶಿಮ್ರೋನ್ ಹೆಟ್ಮಾಯರ್ 3 ಸಿಕ್ಸರ್ ಹಾಗೂ 1 ಫೋರ್​ ಸಮೇತ 27 ರನ್ ಬಾರಿಸಿ ತಂಡವನ್ನು ಗೆಲ್ಲಿಸಿದರು. ಕೊನೇ ಓವರ್​ನಲ್ಲಿ ರಾಜಸ್ಥಾನ್ ತಂಡಕ್ಕೆ 10 ರನ್ ಬೇಕಾಗಿತ್ತು. ಅರ್ಶ್​ ದೀಪ್ ಓವರ್​ ನಲ್ಲಿ ಈ ರನ್​ ಗಳಿಸಿದ ಹೆಟ್ಮಾಯರ್ ಗೆಲುವಿನ ನಗೆ ಬೀರಿದರು.

ಇದನ್ನೂ ಓದಿ: IPL 2024 : ಡೆಲ್ಲಿ ತಂಡಕ್ಕೆ ಆಘಾತ; ಗಾಯದಿಂದಾಗಿ ತವರಿಗೆ ಮರಳಿದ ಮಿಚೆಲ್​ ಮಾರ್ಷ್​​​

ಬ್ಯಾಟಿಂಗ್ ವೈಫಲ್ಯ

ಕಾಯಂ ನಾಯಕ ಶಿಖರ್ ಧವನ್​ ಅನುಪಸ್ಥಿತಿಯಲ್ಲಿ ಇಂಗ್ಲೆಂಡ್ ಆಲ್​ರೌಂಡರ್​​ ಸ್ಯಾಮ್ ಕರ್ರನ್​ ಪಂಜಾಬ್ ತಂಡವನ್ನು ಮುನ್ನಡೆಸಿದ್ದರು. ಅಂತೆಯೇ ಬ್ಯಾಟಿಂಗ್ ಆರಂಭಿಸಿದ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿತು. ಅಥರ್ವ್​ ಥೈಡೆ 15 ರನ್ ಗಳಿಸಿದರೆ ಜಾನಿ ಬೈರ್​ಸ್ಟೋವ್​ ಅಷ್ಟೇ ರನ್​ಗೆ ಔಟಾದರು. ಪ್ರಭ್​ಸಿಮ್ರಾನ್ ಸಿಂಗ್​ 10 ರನ್​ ಗಣಿಸಿ ನಿರ್ಗಮಿಸಿದರು. ಹಂಗಾಮಿ ನಾಯಕ ಕರ್ರನ್​ ಸ್ಕೋರ್ ಕೇವಲ 6. ಜಿತೇಶ್​ ಶರ್ಮಾ 29 ರನ್ ಬಾರಿಸಿದರೆ ಶಶಾಂಕ್​ ಸಿಂಗ್ 9 ರನ್​ಗೆ ನಿರ್ಗಮಿಸಿದರು. ಕೊನೆಯಲ್ಲಿ ಲಿವಿಂಗ್ ಸ್ಟನ್​ 21 ಹಾಗೂ ಅಶುತೋಷ್​ ಶರ್ಮಾ 16 ಎಸೆತಕ್ಕೆ 31 ರನ್ ಬಾರಿಸಿ ತಂಡಕ್ಕೆ ಗೌರವಯುತ ಮೊತ್ತ ಪೇರಿಸಲು ನೆರವಾದರು.

Exit mobile version